ನವದೆಹಲಿ: ನಿತೀಶ್ ರಾಣಾ ಶತಕ, ಹಿತೇನ್ ದಲಾಲ್ ಮತ್ತು ಕುನಾಲ್ ಚಾಂಡೇಲಾ ಅವರ ಅರ್ಧಶತಕಗಳ ಅಬ್ಬರದ ಆಟಕ್ಕೆ ಹಾಲಿ ಚಾಂಪಿಯನ್ ವಿದರ್ಭ ತತ್ತರಿಸಿತು. ದೆಹಲಿ ತಂಡವು 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿತು.
ವಿದರ್ಭ ತಂಡವು ಮೊದಲ ಇನಿಂಗ್ಸ್ 179 ರನ್ ಹೊಡೆದು ದೆಹಲಿಯನ್ನು 163 ರನ್‌ಗಳಿಗೆ ಆಲೌಟ್ ಮಾಡಿ ಇನಿಂಗ್ಸ್ ಮುನ್ನಡೆ ಗಳಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಕನ್ನಡಿಗ ಗಣೇಶ್ ಸತೀಶ್ ಶತಕದ ಬಲದಿಂದ 4ಕ್ಕೆ330 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದರೊಂದಿಗೆ 346 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ದೆಹಲಿ ತಂಡವು ಎದುರಾಳಿ ಬೌಲರ್‌ಗಳ ಬೆವರಿಳಿಸಿತು.
ಆರಂಭಿಕ ಜೋಡಿ ಕುನಾಲ್ ಚಾಂಡೇಲಾ (75;146ಎ, 9ಬೌಂ) ಮತ್ತು ಹಿತೇನ್ ದಲಾಲ್ (82; 146ಎ, 14ಬೌಂ) ಮೊದಲ ವಿಕೆಟ್‌ಗೆ 163 ರನ್ ಗಳಿಸಿದರು. ರಜನೀಶ್ ಗುರುಬಾನಿ ಬೌಲಿಂಗ್‌ನಲ್ಲಿ ಹಿತೇನ್ ಔಟಾದರು. ಕುನಾಲ್ ಕೂಡ ನಂತರದ ಓವರ್‌ನಲ್ಲಿ ಔಟಾದರು.
ಕ್ರೀಸ್‌ಗೆ ಬಂದ ನಿತೀಶ್ (105; 68ಎ, 8ಬೌಂ, 7ಸಿ) ಟಿ20 ಕ್ರಿಕೆಟ್ ಮಾದರಿಯ ಬ್ಯಾಟಿಂಗ್ ಮಾಡಿದರು. ಅವರ ಅಬ್ಬರದ ಆಟಕ್ಕೆ ದೆಹಲಿಯ ಗೆಲುವಿನ ಆಸೆ ತರಗೆಲೆಯಂತೆ ಹಾರಿಹೋಯಿತು. ಧ್ರುವ್ ಶೋರೆ (44 ರನ್) ಕೂಡ ತಮ್ಮ ಕಾಣಿಕೆ ನೀಡಿದರು.
ಫೈಜ್ ಫಜಲ್ ಬಳಗವು ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದ ತಪ್ಪಿಗೆ ದಂಡ ತೆತ್ತಿತು.
ಸರ್ಫರಾಜ್ ತ್ರಿಶತಕ
ಮುಂಬೈ ತಂಡದ ಸೋಲು ತಪ್ಪಿಸುವಲ್ಲಿ ಸಫಲರಾದ ಸರ್ಫರಾಜ್ ಖಾನ್ ತ್ರಿಶತಕ (ಔಟಾಗದೆ 301; 391ಎಸೆತ, 30ಬೌಂಡರಿ, 8ಸಿಕ್ಸರ್) ಗಳಿಸಿದರು. ಅವರೊಂದಿಗೆ ಆದಿತ್ಯ ತಾರೆ (97 ರನ್) ಮತ್ತು ಶಮ್ಸ್ ಮಲಾನಿ (65 ರನ್) ಅರ್ಧಶತಕ ಬಾರಿಸಿ ತಂಡವನ್ನು ಸೋಲಿನ ದವಡೆಯಿಂದ ತಪ್ಪಿಸುವಲ್ಲಿ ಯಶಸ್ವಿಯಾದರು. ಅಲ್ಲದೇ ಮುಂಬೈ ತಂಡಕ್ಕೆ ಮೂರು ಪಾಯಿಂಟ್‌ಗಳು ಲಭಿಸಿದವು. ಉತ್ತರ ಪ್ರದೇಶವು ಕೇವಲ ಒಂದು ಅಂಕ ಪಡೆಯಿತು.
ಸಂಕ್ಷಿಪ್ತ ಸ್ಕೋರ್
ನವದೆಹಲಿ: ವಿದರ್ಭ: 179, ದೆಹಲಿ: 163; ವಿದರ್ಭ: 76.5 ಓವರ್‌ಗಳಲ್ಲಿ 3ಕ್ಕೆ330 ಡಿಕ್ಲೇರ್ಡ್. ನವದೆಹಲಿ: 73 ಓವರ್‌ಗಳಲ್ಲಿ 4ಕ್ಕೆ348 (ಕುನಾಲ್ ಚಾಂಡೇಲಾ 75, ಹಿತೇನ್ ದಲಾಲ್ 82, ನಿತೀಶ್ ರಾಣಾ 105, ಧ್ರುವ ಶೋರೆ 44, ಅಕ್ಷಯ್ ವಖ್ರೆ 64ಕ್ಕೆ1, ಆದಿತ್ಯ ಥಾಕರೆ 69ಕ್ಕೆ1, ರಜನೀಶ್ ಗುರುಬಾನಿ 64ಕ್ಕೆ1) ಫಲಿತಾಂಶ: ದೆಹಲಿ ತಂಡಕ್ಕೆ 6 ವಿಕೆಟ್‌ಗಳ ಜಯ.
ಮುಂಬೈ: ಉತ್ತರಪ್ರದೇಶ: 625, ಮುಂಬೈ: 166.3 ಓವರ್‌ಗಳಲ್ಲಿ 7ಕ್ಕೆ688 (ಸರ್ಫರಾಜ್ ಖಾನ್ ಔಟಾಗದೆ 301, ಆದಿತ್ಯ ತಾರೆ 97, ಶಮ್ಸ್ ಮಲಾನಿ 65, ಅಂಕಿತ್ ರಜಪೂತ್ 133ಕ್ಕೆ3, ಮೊಹಮ್ಮದ್ ಸೈಫ್ 54ಕ್ಕೆ2) ಫಲಿತಾಂಶ: ಡ್ರಾ. ಮುಂಬೈಗೆ 3 ಮತ್ತು ಉತ್ತರಪ್ರದೇಶಕ್ಕೆ 1 ಪಾಯಿಂಟ್
ಚೆಪಾಕ್, ಚೆನ್ನೈ: ರೈಲ್ವೆ: 76, ತಮಿಳುನಾಡು: 330; ರೈಲ್ವೆ: 90 (ಅರಿಂದಮ್ ಘೋಷ್ 22, ಟಿ. ನಟರಾಜನ್ 15ಕ್ಕೆ2, ಆರ್. ಅಶ್ವಿನ್ 36ಕ್ಕೆ3, ಆರ್. ಸಾಯಿಕಿಶೋರ್ 16ಕ್ಕೆ5) ಫಲಿತಾಂಶ: ತಮಿಳುನಾಡಿಗೆ ಜಯ ಮತ್ತು 7 ಪಾಯಿಂಟ್ಸ್
ರಾಂಚಿ: ಉತ್ತರಾಖಂಡ: 227, ಜಾರ್ಖಂಡ್: 298, ಉತ್ತರಾಖಂಡ:273, ಜಾರ್ಖಂಡ್: 48.4 ಓವರ್‌ಗಳಲ್ಲಿ 4ಕ್ಕೆ203 (ಕುಮಾರ್ ದೇವವ್ರತ್ ಔಟಾಗದೆ 93, ನಜೀಂ ಸಿದ್ಧೀಕಿ 21, ಕುಮಾರ್ ಸೂರಜ್ 49, ಆಕಾಶ್ ಮಂಡವಾಲ್ 32ಕ್ಕೆ2, ದಿಕ್ಷಾಂಶು ನೇಗಿ 31ಕ್ಕೆ2) ಫಲಿತಾಂಶ: ಜಾರ್ಖಂಡ್ ತಂಡಕ್ಕೆ 6 ವಿಕೆಟ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.