ADVERTISEMENT

ರಣಜಿ ಸೆಮಿಫೈನಲ್: ಕರ್ನಾಟಕಕ್ಕೆ ಇನಿಂಗ್ಸ್ ಹಿನ್ನಡೆ, ಫೈನಲ್ ಪ್ರವೇಶ ಅನುಮಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಫೆಬ್ರುವರಿ 2023, 9:20 IST
Last Updated 11 ಫೆಬ್ರುವರಿ 2023, 9:20 IST
ಅರ್ಪಿತ್‌ ವಾಸವದ ಬ್ಯಾಟಿಂಗ್ ವೈಖರಿ (ಪ್ರಜಾವಾಣಿ ಚಿತ್ರ)
ಅರ್ಪಿತ್‌ ವಾಸವದ ಬ್ಯಾಟಿಂಗ್ ವೈಖರಿ (ಪ್ರಜಾವಾಣಿ ಚಿತ್ರ)   

ಬೆಂಗಳೂರು: ನಾಯಕ ಅರ್ಪಿತ್‌ ವಾಸವದ ಗಳಿಸಿದ ಅಮೋಘ ದ್ವಿಶತಕ ಹಾಗೂ ಅನುಭವಿ ಶೆಲ್ಡನ್‌ ಜಾಕ್ಸನ್‌ ಬಾರಿಸಿದ ಶತಕದ ಬಲದಿಂದ ಸೌರಾಷ್ಟ್ರ ತಂಡವು ಈ ಬಾರಿಯ ರಣಜಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಕರ್ನಾಟಕ ತಂಡ, ನಾಯಕ ಮಯಂಕ್‌ ಅಗರವಾಲ್ ದ್ವಿಶತಕದ ಬಲದಿಂದ 407 ರನ್‌ ಕಲೆಹಾಕಿತ್ತು. ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿದ ಸೌರಾಷ್ಟ್ರ ಪರ ನಾಯಕ ಅರ್ಪಿತ್‌ 202 ರನ್‌, ಶೆಲ್ಡನ್‌ 160 ರನ್‌ ಹಾಗೂ ಚಿರಾಗ್‌ ಜಾನಿ 72 ರನ್‌ ಗಳಿಸಿ ಮಿಂಚಿದರು. ಹೀಗಾಗಿ ಪ್ರವಾಸಿ ಪಡೆ 527 ರನ್‌ ಕಲೆಹಾಕಿ 120 ರನ್‌ ಅಂತರದ ಮುನ್ನಡೆ ಪಡೆದಿದೆ.

ವಿದ್ವತ್‌ ಕಾವೇರಪ್ಪ 5 ವಿಕೆಟ್‌, ಶ್ರೇಯಸ್‌ ಗೋಪಾಲ್‌ 2 ವಿಕೆಟ್‌, ವಾಸುಕಿ ಕೌಶಿಕ್‌ ಮತ್ತು ಕೆ.ಗೌತಮ್‌ ತಲಾ ಒಂದೊಂದು ವಿಕೆಟ್‌ ಉರುಳಿಸಿದರಾದರೂ, ತಮ್ಮ ತಂಡವನ್ನು ಹಿನ್ನಡೆಯಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ADVERTISEMENT

ಇದು ಪಂದ್ಯದ ನಾಲ್ಕನೇ ದಿನವಾಗಿದ್ದು, ಇಂದು ಒಂದು ಅವಧಿ ಹಾಗೂ ಐದನೇ ದಿನದ ಆಟ ಬಾಕಿ ಇದೆ. ಕರ್ನಾಟಕ ತಂಡ ಎದುರಾಳಿ ಪಡೆಯ 120 ರನ್‌ ಬಾಕಿ ಚುಕ್ತಾ ಮಾಡಿ, ನಂತರ ಗುರಿ ನೀಡಿ ಗೆಲ್ಲಬೇಕಿದೆ.

ಪಂದ್ಯ ಡ್ರಾನಲ್ಲಿ ಮುಕ್ತಾಯವಾದರೂ, ಕರ್ನಾಟಕ ಫೈನಲ್‌ ತಲುಪುವ ಅವಕಾಶ ತಪ್ಪಲಿದೆ.

ಮಧ್ಯಪ್ರದೇಶ ತಂಡದ ವಿರುದ್ಧ ನಡೆಯುತ್ತಿರುವ ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ಬಂಗಾಳ ತಂಡ ಹಿಡಿತ ಸಾಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.