ಬೆಂಗಳೂರು: ರಣಜಿ ಕ್ರಿಕೆಟ್ ಟೂರ್ನಿಯಲ್ಲಿ 42ನೇ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಮುಂಬೈ ತಂಡವು ಇಲ್ಲಿ ನಡೆಯುತ್ತಿರುವ ಉತ್ತರಪ್ರದೇಶ ಎದುರಿನ ಸೆಮಿಫೈನಲ್‌ನಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ಮೂರನೇ ದಿನವಾದ ಗುರುವಾರ ಒಟ್ಟು 346 ರನ್‌ಗಳ ಭಾರಿ ಮುನ್ನಡೆ ಗಳಿಸಿದೆ.
ಜಸ್ಟ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ ತಂಡವು ಮೊದಲ ಇನಿಂಗ್ಸ್‌ನಲ್ಲಿ 393 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಉತ್ತರ ಪ್ರದೇಶ ತಂಡವು 54.3 ಓವರ್‌ಗಳಲ್ಲಿ 180 ರನ್ ಗಳಿಸಲು ಮಾತ್ರ ಶಕ್ತವಾಯಿತು. ತುಷಾರ್ ದೇಶಪಾಂಡೆ, ಮೋಹಿತ್ ಅವಸ್ತಿ ಮತ್ತು ತನುಷ್ ಕೋಟ್ಯಾನ್ ತಲಾ ಮೂರು ವಿಕೆಟ್ ಗಳಿಸಿ, ಮುಂಬೈಗೆ 213 ರನ್‌ಗಳ ಮುನ್ನಡೆಯ ಕಾಣಿಕೆ ನೀಡಿದರು. ಎರಡನೇ ದಿನದಾಟದಲ್ಲಿ ಉತ್ತರಪ್ರದೇಶ ತಂಡವು 12 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 25 ರನ್ ಗಳಿಸಿತ್ತು. ಆದರೆ, ಮೂರನೇ ದಿನದ ಮಧ್ಯಾಹ್ನವಾಗುವುದರಲ್ಲಿಯೇ ಎಂಟು ವಿಕೆಟ್‌ಗಳನ್ನು ಕಳೆದುಕೊಂಡಿತು. ಬಾಲಂಗೋಚಿ ಬ್ಯಾಟರ್ ಶಿವ ಮಾವಿ 48 ರನ್ ಗಳಿಸಿದ್ದು ಉತ್ತರಪ್ರದೇಶ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿ ದಾಖಲಾಯಿತು.
ಮುಂಬೈನ ಎರಡನೇ ಇನಿಂಗ್ಸ್‌ಗೆ ನಾಯಕ ಪೃಥ್ವಿ ಶಾ (64; 71ಎ, 4X12) ಮತ್ತು ಯಶಸ್ವಿ ಜೈಸ್ವಾಲ್ (ಬ್ಯಾಟಿಂಗ್ 35, 114ಎ) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 66 ರನ್ ಗಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ ವೈಫಲ್ಯ ಅನುಭವಿಸಿದ್ದ ಪೃಥ್ವಿ ಲಯ ಕಂಡುಕೊಂಡರು. ಶತಕ ಬಾರಿಸಿದ್ದ ಎಡಗೈ ಬ್ಯಾಟರ್ ಯಶಸ್ವಿ ಮತ್ತು ಅರ್ಮಾನ್ ಜಾಫರ್ (ಬ್ಯಾಟಿಂಗ್ 32) ಕ್ರೀಸ್‌ನಲ್ಲಿದ್ದಾರೆ. ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ 67 ರನ್ ಸೇರಿಸಿದ್ದಾರೆ.
ಕ್ವಾರ್ಟರ್‌ಫೈನಲ್‌ನಲ್ಲಿ ಮುಂಬೈ ತಂಡವು ಉತ್ತರಾಖಂಡ ಎದುರು 725 ರನ್‌ಗಳ ಅಂತರದ ಜಯಸಾಧಿಸಿ, ವಿಶ್ವದಾಖಲೆ ಬರೆದಿತ್ತು. ನಾಲ್ಕರ ಘಟ್ಟದಲ್ಲಿಯೂ ಉತ್ತರಪ್ರದೇಶಕ್ಕೂ ಕಠಿಣ ಗುರಿ ನೀಡುವತ್ತ ಪೃಥ್ವಿ ಬಳಗವು ಚಿತ್ತ ನೆಟ್ಟಿದೆ.
ಸಂಕ್ಷಿಪ್ತ ಸ್ಕೋರು: ಜಸ್ಟ್ ಕ್ರಿಕೆಟ್ ಮೈದಾನ– ಮೊದಲ ಇನಿಂಗ್ಸ್: ಮುಂಬೈ: 140.4 ಓವರ್‌ಗಳಲ್ಲಿ 393, ಉತ್ತರಪ್ರದೇಶ: 54.3 ಓವರ್‌ಗಳಲ್ಲಿ 180 (ಕರಣ್ ಶರ್ಮಾ 27, ಪ್ರಿನ್ಸ್ ಯಾದವ್ 20, ಶಿವಂ ಮಾವಿ 48, ತುಷಾರ್ ದೇಶಪಾಂಡೆ 34ಕ್ಕೆ3, ಮೋಹಿತ್ ಅವಸ್ತಿ 39ಕ್ಕೆ3, ತನುಷ್ ಕೋಟ್ಯಾನ್ 35ಕ್ಕೆ3) ಎರಡನೇ ಇನಿಂಗ್ಸ್: ಮುಂಬೈ: 42 ಓವರ್‌ಗಳಲ್ಲಿ 1 ವಿಕೆಟ್‌ಗೆ 133 (ಪೃಥ್ವಿ ಶಾ 64, ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ 35, ಅರ್ಮಾನ್ ಜಾಫರ್ ಬ್ಯಾಟಿಂಗ್ 32, ಸೌರಭ್ ಕುಮಾರ್ 32ಕ್ಕೆ1)
ತಿವಾರಿ ಮತ್ತು ಶಾಬಾಜ್ ಶತಕ
ಬಂಗಾಳದ ಕ್ರೀಡಾ ಸಚಿವ ಮನೋಜ್ ತಿವಾರಿ ಮತ್ತು ಶಾಬಾಜ್ ಅಹಮದ್ ಅವರು ಆಲೂರಿನ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಧ್ಯಪ್ರದೇಶ ಎದುರು ನಡೆಯುತ್ತಿರುವ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಸುಂದರ ಶತಕ ಗಳಿಸಿದರು. ಆದರೆ, ಮೊದಲ ಇನಿಂಗ್ಸ್‌ನಲ್ಲಿ ಮಧ್ಯಪ್ರದೇಶಕ್ಕೆ 68 ರನ್‌ಗಳ ಮುನ್ನಡೆ ಸಾಧಿಸುವುದನ್ನು ತಡೆಯುವಲ್ಲಿ ವಿಫಲರಾದರು.
ಮಧ್ಯಪ್ರದೇಶ ತಂಡವು ಮೊದಲ ಇನಿಂಗ್ಸ್‌ನಲ್ಲಿ 341 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಬಂಗಾಳ ತಂಡವು 273 ರನ್‌ಗಳಿಗೆ ಆಲೌಟ್ ಆಯಿತು. ಮೂರನೇ ದಿನವಾದ ಗುರುವಾರದ ಅಂತ್ಯಕ್ಕೆ ಮಧ್ಯಪ್ರದೇಶ ತಂಡವು ಎರಡನೇ ಇನಿಂಗ್ಸ್‌ನಲ್ಲಿ 63 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 163 ರನ್ ಗಳಿಸಿತು. ಒಟ್ಟು 231 ರನ್‌ಗಳ ಮುನ್ನಡೆ ಸಾಧಿಸಿತು. ಆದಿತ್ಯ ಶ್ರೀವಾಸ್ತವ (ಬ್ಯಾಟಿಂಗ್ 34, 90ಎಸೆತ) ಮತ್ತು ರಜತ್ ಪಾಟೀದಾರ್ (ಬ್ಯಾಟಿಂಗ್ 63, 109ಎಸೆತ) ಕ್ರೀಸ್‌ನಲ್ಲಿದ್ದಾರೆ.
ಮಂಗಳವಾರ ತಲಾ ಒಂದು ಅರ್ಧಶತಕ ಗಳಿಸಿ ಕ್ರೀಸ್‌ನಲ್ಲಿದ್ದ ಬಂಗಾಳದ ಮನೋಜ್ ತಿವಾರಿ ಮತ್ತು ಶಾಬಾಜ್ ಗುರುವಾರ ಬೆಳಿಗ್ಗೆಯೂ ಆತ್ಮವಿಶ್ವಾಸದಿಂದ ಆಡಿದರು.
ಮನೋಜ್ (102; 211ಎ) ಮತ್ತು ಶಾಬಾಜ್ (116; 209ಎ) ಆರನೇ ವಿಕೆಟ್ ಜೊತೆಯಾಟದಲ್ಲಿ 183 ರನ್‌ಗಳನ್ನೂ ಸೇರಿಸಿದರು. ಇಬ್ಬರೂ ತಲಾ ಒಂದು ಡಜನ್ ಬೌಂಡರಿ ಬಾರಿಸಿದರು. ಸಾರಾಂಶ್ ಜೈನ್ ಬೌಲಿಂಗ್‌ನಲ್ಲಿ ತಿವಾರಿ ಔಟಾಗುವುದರೊಂದಿಗೆ ಜೊತೆಯಾಟಕ್ಕೆ ತೆರೆಬಿತ್ತು. ಈ ಟೂರ್ನಿಯಲ್ಲಿ ತಿವಾರಿಯವರದ್ದುಇದು ಸತತ ಎರಡನೇ ಶತಕ.
ನಂತರ ಬಂದ ಬ್ಯಾಟರ್‌ಗಳು ಹೆಚ್ಚು ಹೊತ್ತು ಆಡಲಿಲ್ಲ. ಇದರಿಂದಾಗಿ ತಂಡವು ಮುನ್ನಡೆ ಗಳಿಸಲು ಸಾಧ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.