ಬೆಂಗಳೂರು: ಕ್ರೀಡಾ ಸಚಿವ ಮನೋಜ್ ತಿವಾರಿ ಮತ್ತು ಶಾಬಾಜ್ ಅಹಮದ್ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಬಂಗಾಳ ತಂಡಕ್ಕೆ ಆಸರೆಯಾದರು.
ನಗರದ ಹೊರವಲಯದಲ್ಲಿರುವ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಬುಧವಾರ ಮಧ್ಯಪ್ರದೇಶ ತಂಡವು ಮೊದಲ ಇನಿಂಗ್ಸ್‌ನಲ್ಲಿ 105.3 ಓವರ್‌ಗಳಲ್ಲಿ 341 ರನ್ ಗಳಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಬಂಗಾಳ ತಂಡವು ದಿನದಾಟದ ಮುಕ್ತಾಯಕ್ಕೆ 66 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 197 ರನ್ ಗಳಿಸಿತು.
ಇನಿಂಗ್ಸ್ ಆರಂಭಿಸಿದ ಬಂಗಾಳಕ್ಕೆ ಮಧ್ಯಪ್ರದೇಶದ ಬೌಲರ್‌ಗಳಾದ ಕುಮಾರ್ ಕಾರ್ತಿಕೇಯ (43ಕ್ಕೆ2) ಮತ್ತು ಪುನೀತ್ ದಾತೆ (34ಕ್ಕೆ2) ಆರಂಭದಲ್ಲಿಯೇ ಪೆಟ್ಟು ಕೊಟ್ಟರು. ಇದರಿಂದಾಗಿ ತಂಡವು 54 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಗೂಡಿದ ಮನೋಜ್ (ಬ್ಯಾಟಿಂಗ್ 84; 182ಎ, 4X9) ಮತ್ತು ಶಾಬಾಜ್ (ಬ್ಯಾಟಿಂಗ್ 72; 149ಎ, 4X9) ಕುಸಿತಕ್ಕೆ ತಡೆಯೊಡ್ಡಿದರು. ಮುರಿಯದ ಆರನೇ ವಿಕೆಟ್ ಜೊತೆಯಾಟದಲ್ಲಿ 143 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಬಂಗಾಳ ರಾಜ್ಯ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿರುವ ಮನೋಜ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಶತಕ ಗಳಿಸಿದ್ದರು. ಈ ಹಿಂದೆ ಭಾರತ ತಂಡದಲ್ಲಿ ಆಡಿರುವ ಅನುಭವಿಯೂ ಆಗಿರುವ 36 ವರ್ಷದ ಮನೋಜ್ ಎದುರಾಳಿ ಬೌಲರ್‌ಗಳಿಗೆ ಕಠಿಣ ಸವಾಲೊಡ್ಡಿದರು. ಅಗ್ರಕ್ರಮಾಂಕದ ಬ್ಯಾಟರ್‌ಗಳೆಲ್ಲರೂ ಪೆವಿಲಿಯನ್ ಸೇರಿದ ಸಂದರ್ಭದಲ್ಲಿಯೂ ದಿಟ್ಟತನದಿಂದ ಆಡಿದರು. ಶಾಬಾಜ್ ಕೂಡ ಚೆಂದದ ಬ್ಯಾಟಿಂಗ್ ಮಾಡಿದರು.
ಮಂತ್ರಿ ಆಟ:ಪಂದ್ಯದ ಮೊದಲ ದಿನವಾದ ಮಂಗಳವಾರ ಶತಕ ಗಳಿಸಿ ಕ್ರೀಸ್‌ನಲ್ಲಿದ್ದ ಹಿಮಾಂಶು ಮಂತ್ರಿ ಶತಕೋತ್ತರ ಅರ್ಧಶತಕವನ್ನೂ ಪೂರೈಸಿದರು. ಒಟ್ಟು 327 ಎಸೆತಗಳನ್ನು ಆಡಿದ ಅವರು 165 ರನ್‌ಗಳನ್ನು ಗಳಿಸಿದರು. ಪುನೀತ್ ದಾತೆ ಉತ್ತಮ ಜೊತೆ ನೀಡಿದರಾದರೂ ತಂಡದ ಮೊತ್ತವನ್ನು ನಾಲ್ಕನೂರು ರನ್‌ಗಳ ಗಡಿ ದಾಟಿಸುವ ಗುರಿ ಈಡೇರಲಿಲ್ಲ. ಬಂಗಾಳ ತಂಡದ ಮುಖೇಶ್ ದಾಳಿಯಲ್ಲಿ ಹಿಮಾಶು ಮತ್ತು ಯಾದವ್ ವಿಕೆಟ್ ಕಳೆದುಕೊಂಡರು. ಇನ್ನೊಂದೆಡೆ ಶಾಬಾಜ್ ಕೂಡ ಮೂರು ವಿಕೆಟ್ ಗಳಿಸಿದ ಮಿಂಚಿದರು.
ಸಂಕ್ಷಿಪ್ತ ಸ್ಕೋರು: ಮಧ್ಯಪ್ರದೇಶ: ಮೊದಲ ಇನಿಂಗ್ಸ್: 105.3 ಓವರ್‌ಗಳಲ್ಲಿ 341 (ಹಿಮಾಂಶು ಮಂತ್ರಿ 165, ಪುನೀತ್ ದಾತೆ 33, ಮುಖೇಶ್ ಕುಮಾರ್ 66ಕ್ಕೆ4, ಆಕಾಶದೀಪ್ 73ಕ್ಕೆ2, ಶಾಬಾಜ್ ಅಹಮದ್86ಕ್ಕೆ3) ಬಂಗಾಳ: 66 ಓವರ್‌ಗಳಲ್ಲಿ 5ಕ್ಕೆ197 (ಅಭಿಮನ್ಯು ಈಶ್ವರನ್ 22, ಮನೋಜ್ ತಿವಾರಿ ಬ್ಯಾಟಿಂಗ್ 84, ಶಾಬಾಜ್ ಅಹಮದ್ ಬ್ಯಾಟಿಂಗ್ 72, ಕುಮಾರ್ ಕಾರ್ತಿಕೇಯ 43ಕ್ಕೆ2, ದಾತೆ 34ಕ್ಕೆ2)
ರಣಜಿ: ಹಾರ್ದಿಕ್ ತಮೊರೆ ಶತಕ
ಬೆಂಗಳೂರು: ಹಾರ್ದಿಕ್ ತಮೊರೆ ಶತಕದ ಬಲದಿಂದ ಮುಂಬೈ ತಂಡವು ಜಸ್ಟ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯ ಇನ್ನೊಂದು ಸೆಮಿಫೈನಲ್‌ನಲ್ಲಿ ದೊಡ್ಡ ಮೊತ್ತ ಪೇರಿಸಿದೆ. ಅಲ್ಲದೇ ಬ್ಯಾಟಿಂಗ್ ಆರಂಭಿಸಿದ ಉತ್ತರಪ್ರದೇಶಕ್ಕೆ ಆರಂಭಿಕ ಆಘಾತವನ್ನೂ ನೀಡಿದೆ.
ಪಂದ್ಯದ ಮೊದಲ ದಿನವಾದ ಮಂಗಳವಾರ ಯಶಸ್ವಿ ಜೈಸ್ವಾಲ್ ಶತಕ ಬಾರಿಸಿದ್ದರು. ಅರ್ಧಶತಕ ಗಳಿಸಿ ಕ್ರೀಸ್‌ನಲ್ಲಿದ್ದ ಹಾರ್ದಿಕ್ ಬುಧವಾರ ಬೆಳಿಗ್ಗೆ ಶತಕದ (115; 233ಎ, 12ಬೌಂಡರಿ, 1ಸಿಕ್ಸರ್) ಗಡಿ ದಾಟಿದರು. ಅವರಿಗೆ ಉತ್ತಮ ಜೊತೆ ನೀಡಿದ ಶಮ್ಸ್ ಮುಲಾನಿ (50; 130ಎ, 4X5) ಅರ್ಧಶತಕ ಹೊಡೆದರು. ಇದರಿಂದಾಗಿ ತಂಡವು ಮೊದಲ ಇನಿಂಗ್ಸ್‌ನಲ್ಲಿ 140.4 ಓವರ್‌ಗಳಲ್ಲಿ 393 ರನ್ ಗಳಿಸಿತು.
ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಉತ್ತರಪ್ರದೇಶ ತಂಡಕ್ಕೆ ಧವಳ್ ಕುಲಕರ್ಣಿ ಮತ್ತು ತುಷಾರ್ ದೇಶಪಾಂಡೆ ಆರಂಭಿಕ ಆಘಾತ ನೀಡಿದರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಮುಂಬೈ: 140.4 ಓವರ್‌ಗಳಲ್ಲಿ 393 (ಹಾರ್ದಿಕ್ ತಮೊರೆ 115, ಶಮ್ಸ್ ಮುಲಾನಿ 50, ತನುಷ್ ಕೋಟ್ಯಾನ್ 22, ಯಶ್ ದಯಾಳ್ 51ಕ್ಕೆ2, ಸೌರಭ್ ಕುಮಾರ್ 107ಕ್ಕೆ3, ಕರಣ್ ಶರ್ಮಾ 46ಕ್ಕೆ4) ಉತ್ತರಪ್ರದೇಶ: 12 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 25 (ಕೌಶಿಕ್ ಬ್ಯಾಟಿಂಗ್ 11, ಕರಣ್ ಬ್ಯಾಟಿಂಗ್ 10, ಧವಳ್ ಕುಲಕರ್ಣಿ 14ಕ್ಕೆ1, ತುಷಾರ್ ದೇಶಪಾಂಡೆ 10ಕ್ಕೆ1)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.