ADVERTISEMENT

ಟ್ವೆಂಟಿ-20 ಕ್ರಿಕೆಟ್‌ನಲ್ಲಿ ರಶೀದ್ ಖಾನ್ 400 ವಿಕೆಟ್ ಮೈಲಿಗಲ್ಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2021, 15:07 IST
Last Updated 7 ನವೆಂಬರ್ 2021, 15:07 IST
ರಶೀದ್ ಖಾನ್
ರಶೀದ್ ಖಾನ್   

ಅಬುಧಾಬಿ: ಅಫ್ಗಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್, ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 400 ವಿಕೆಟ್‌ಗಳ ಮೈಲಿಗಲ್ಲುಕ್ರಮಿಸಿದ್ದಾರೆ.

ಅಲ್ಲದೆ ಡ್ವೇನ್ ಬ್ರಾವೊ, ಸುನಿಲ್ ನರೈನ್ ಹಾಗೂ ಇಮ್ರಾನ್ ತಾಹೀರ್ ಬಳಿಕ ಟ್ವೆಂಟಿ-20 ಕ್ರಿಕೆಟ್ ಮಾದರಿಯಲ್ಲಿ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ಬೌಲರ್ ಎನಿಸಿದ್ದಾರೆ.

23 ವರ್ಷದ ರಶೀದ್ ಖಾನ್, ತಮ್ಮ 289ನೇ ಪಂದ್ಯದಲ್ಲಿ 400 ವಿಕೆಟ್‌ಗಳ ದಾಖಲೆ ಬರೆದಿದ್ದಾರೆ. ಈ ಮೂಲಕ ವೆಸ್ಟ್‌ಇಂಡೀಸ್‌ನ ಡ್ವೇನ್ ಬ್ರಾವೊ ದಾಖಲೆಯನ್ನು ಮುರಿದಿದ್ದಾರೆ.

ಬ್ರಾವೊ 364ನೇ ಪಂದ್ಯದಲ್ಲಿ 400 ವಿಕೆಟ್ ಕಬಳಿಸಿದ್ದರು. ಅಲ್ಲದೆ ಟಿ20 ಕ್ರಿಕೆಟ್‌ನಲ್ಲಿ 500 ವಿಕೆಟ್ ಗಳಿಸಿದ ವಿಶ್ವದ ಏಕಮಾತ್ರ ಬೌಲರ್ ಆಗಿದ್ದಾರೆ.

ಈಗಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಬ್ರಾವೊ 512 ಟಿ20 ಪಂದ್ಯಗಳಲ್ಲಿ ಒಟ್ಟು 553 ವಿಕೆಟ್‌ಗಳನ್ನು ಗಳಿಸಿದ್ದಾರೆ.

ಅಂತರರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 100 ವಿಕೆಟ್ ಗಳಿಸಿದ ದಾಖಲೆಯನ್ನು ರಶೀದ್ ಹೊಂದಿದ್ದಾರೆ. ಇನ್ನು 2018ರಲ್ಲಿ ವರ್ಷವೊಂದರಲ್ಲಿ 96 ಟಿ20 ವಿಕೆಟ್ ಗಳಿಸಿ ದಾಖಲೆ ಬರೆದಿದ್ದರು.

ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಸರದಾರರು:
ಡ್ವೇನ್ ಬ್ರಾವೊ: 553
ಸುನಿಲ್ ನರೈನ್: 425
ಇಮ್ರಾನ್ ತಾಹೀರ್: 420
ರಶೀದ್ ಖಾನ್: 400
ಶಕೀಬ್ ಅಲ್ ಹಸನ್: 398

ಏತನ್ಮಧ್ಯೆ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿರುವ ಅಫ್ಗಾನಿಸ್ತಾನ, ಟೂರ್ನಿಯಿಂದಲೇ ಹೊರಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.