ಚೆನ್ನೈ: ಭಾರತ ಏಕದಿನ ಕ್ರಿಕೆಟ್ ತಂಡದ ಅಗ್ರ ಏಳು ಬ್ಯಾಟರ್‌ಗಳಲ್ಲಿ ಕನಿಷ್ಟ ಮೂವರು ಎಡಗೈ ಬ್ಯಾಟರ್‌ಗಳಿರಬೇಕು ಎಂದು ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಹೇಳಿದ್ದಾರೆ.
ಇದೇ ತಿಂಗಳು ಆರಂಭವಾಗಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಭಾರತ ತಂಡ ಸಿದ್ಧವಾಗುತ್ತಿದೆ. ಅಕ್ಟೋಬರ್‌ನಲ್ಲಿ ಏಕದಿನ ವಿಶ್ವಕಪ್ ಟೂರ್ನಿ ಕೂಡ ನಡೆಯಲಿದೆ. ಸದ್ಯ ತಂಡದಲ್ಲಿರುವ ಆಲ್‌ರೌಂಡರ್ ರವೀಂದ್ರ ಜಡೇಜ ಮಧ್ಯಮ ಕ್ರಮಾಂಕದಲ್ಲಿರುವ ಎಡಗೈ ಬ್ಯಾಟರ್.
‘ಸದ್ಯದ ಪರಿಸ್ಥಿತಿಯಲ್ಲಿ ಈಗ ಇನ್ನಿಬ್ಬರು ಎಡಗೈ ಬ್ಯಾಟರ್‌ಗಳನ್ನು ಸೇರ್ಪಡೆ ಮಾಡುವತ್ತ ಆಯ್ಕೆಗಾರರು ಗಮನ ಹರಿಸಬೇಕು. ಅವರು ಪಂದ್ಯಗಳನ್ನು ಮತ್ತು ಆಟಗಾರರನ್ನು ಸದಾ ಗಮನಿಸುತ್ತಿರುತ್ತಾರೆ. ಪ್ರಸ್ತುತ ತಿಲಕ್ ವರ್ಮಾ ಅಥವಾ ಯಶಸ್ವಿ ಜೈಸ್ವಾಲ್ ಉತ್ತಮ ಲಯದಲ್ಲಿದ್ದಾರೆ ಎನಿಸಿದರೆ ಅವರನ್ನು ಆಯ್ಕೆ ಮಾಡಲು ಹಿಂಜರಿಯಬಾರದು‘ ಎಂದು ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಶಾಸ್ತ್ರಿ ಹೇಳಿದರು.
ಇದೇ 31ರಿಂದ ಆರಂಭವಾಗುವ ಏಷ್ಯಾ ಕಪ್ ಟೂರ್ನಿಯಲ್ಲಿ ಬಲಗೈ ಬ್ಯಾಟರ್‌ಗಳಾದ ಕೆ.ಎಲ್. ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಭಾರತ ತಂಡಕ್ಕೆ ಮರಳುವ ನಿರೀಕ್ಷೆ ಇದೆ. ಇದರಿಂದಾಗಿ ಮೂವರು ಎಡಗೈ ಬ್ಯಾಟರ್‌ಗಳಿಗೆ ಸ್ಥಾನ ನೀಡುವ ಸಾಧ್ಯತೆಗಳು ಕಡಿಮೆ.
‘ಇಶಾನ್ ಕಿಶನ್ ಕೂಡ ಉತ್ತಮ ಆಯ್ಕೆಯಾಗಬಹುದು. ವಿಕೆಟ್‌ಕೀಪರ್ ಕೂಡ ಆಗಿರುವುದರಿಂದ ತಂಡಕ್ಕೆ ಹೆಚ್ಚಿನ ಕಾಣಿಕೆ ನೀಡಲು ಅವರಿಗೆ ಸಾಧ್ಯವಾಗಬಹುದು’ ಎಂದೂ ಶಾಸ್ತ್ರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.