ಕ್ಯಾನ್‌ಬೆರಾ: ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜ ಅಮೋಘ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ, ಆತಿಥೇಯ ಆಸ್ಟ್ರೇಲಿಯಾ ವಿರುದ್ದ ಬುಧವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 13 ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು.
ಈ ಮೂಲಕ ಆಸೀಸ್ ಪ್ರವಾಸದಲ್ಲಿ ಮೊದಲ ಗೆಲುವಿನ ನಗೆ ಬೀರಿರುವ ವಿರಾಟ್ ಕೊಹ್ಲಿ ಬಳಗ, ಕ್ಲೀನ್‌ಸ್ವೀಪ್ ಮುಖಭಂಗವನ್ನು ತಪ್ಪಿಸಿಕೊಂಡಿದೆ. ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜ ಬ್ಯಾಟಿಂಗ್ ವೈಭವ ಹೆಚ್ಚಿನ ಮನ್ನಣೆಗೆ ಪಾತ್ರವಾಯಿತು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಹಾರ್ದಿಕ್ ಹಾಗೂ ಜಡೇಜ ಪ್ರದರ್ಶನವನ್ನು ಮುಕ್ತಕಂಠವಾಗಿ ಪ್ರಶಂಸಿಸಿದರು.
ಪ್ರಸ್ತುತ ಸಾಗುತ್ತಿರುವ ಆಸೀಸ್ ಪ್ರವಾಸದಲ್ಲಿ ರವೀಂದ್ರ ಜಡೇಜ ಹಾಗೂ ಹಾರ್ದಿಕ್ ಪಾಂಡ್ಯ ನಮಗೆ ದೊಡ್ಡ ಆಸ್ತಿಯಾಗಬಹುದು ಎಂದು ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸೌರವ್ ಗಂಗೂಲಿ, 'ಸರಣಿ ಸೋಲಿನ ಹೊರತಾಗಿಯೂ ಭಾರತ ಉತ್ತಮ ಗೆಲುವು ದಾಖಲಿಸಿದೆ. ಇದು ಸುದೀರ್ಘ ಪ್ರವಾಸವಾಗಿದ್ದು, ಪರಿಸ್ಥಿತಿ ನಮ್ಮ ಪರ ವಾಲುವ ನಿರೀಕ್ಷೆಯಿದೆ. ಅತ್ಯಂತ ಕಠಿಣ ಸ್ಥಾನಗಳಲ್ಲಿ ಆಡವಾಡುತ್ತಿರುವ ಜಡೇಜಾ ಹಾಗೂ ಪಾಂಡ್ಯ ತಂಡಕ್ಕೆ ದೊಡ್ಡ ಆಸ್ತಿಯಾಗಬಹುದು' ಎಂದು ಅಭಿಪ್ರಾಯಪಟ್ಟರು.
ಬೌಲಿಂಗ್‌ನಲ್ಲೂ ಮಿಂಚಿರುವ ರವೀಂದ್ರ ಜಡೇಜ, ಆಸ್ಟ್ರೇಲಿಯಾ ನಾಯಕ ಹಾಗೂ ಉತ್ತಮ ಲಯದಲ್ಲಿರುವ ಆ್ಯರನ್ ಫಿಂಚ್ ವಿಕೆಟ್ ಕಬಳಿಸಿದ್ದರು. 75 ರನ್ ಗಳಿಸಿದ ಫಿಂಚ್ ವಿಕೆಟ್ ಕಬಳಿಸಿದ ಜಡ್ಡು,ಟೀಮ್ ಇಂಡಿಯಾ ಕಮ್ ಬ್ಯಾಕ್ ಮಾಡಲು ನೆರವಾದರು.
ಈ ಮುನ್ನ ಬ್ಯಾಟಿಂಗ್‌ನಲ್ಲೂ ಮಿಂಚಿನ ಪ್ರದರ್ಶನ ನೀಡಿರುವ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜ, ಮುರಿಯದ ಆರನೇ ವಿಕೆಟ್‌ಗೆ 150 ರನ್‌ಗಳ ಅಮೂಲ್ಯ ಜೊತೆಯಾಟ ನೀಡಿದರು. 76 ಎಸೆತಗಳನ್ನು ಎದುರಿಸಿದ ಪಾಂಡ್ಯ ಏಳು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ಅಜೇಯ 92 ರನ್ ಗಳಿಸಿದರು. ಇವರಿಗೆ ತಕ್ಕ ಸಾಥ್ ನೀಡಿದ ಜಡೇಜ, 50 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 66 ರನ್ ಗಳಿಸಿ ಅಜೇಯರಾಗುಳಿದರು.
ಏಕದಿನ ಸರಣಿಯಲ್ಲಿ 1-2 ಅಂತರದ ಸೋಲು ಅನುಭವಿಸಿರುವ ಟೀಮ್ ಇಂಡಿಯಾವೀಗ ಟ್ವೆಂಟಿ-20 ಹಾಗೂ ಟೆಸ್ಟ್ ಸರಣಿಗಳನ್ನು ಎದುರು ನೋಡುತ್ತಿದೆ. ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವು ಡಿ.4 ಶುಕ್ರವಾರದಂದು ಕ್ಯಾನ್‌ಬೆರಾದಲ್ಲಿ ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಅಪರಾಹ್ನ 1.40ಕ್ಕೆ ಸರಿಯಾಗಿ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.