ನವಿ ಮುಂಬೈ: ನಾಯಕತ್ವದ ಎಲ್ಲ ಗುಣಗಳಿಂದ ಇನ್ನೂ ತುಸು ದೂರದಲ್ಲೇ ಇದ್ದೇನೆ. ಆದರೆ ಪ್ರತಿ ಪಂದ್ಯದಲ್ಲೂ ಕಲಿಕೆ ಸಾಗಿದೆ. ನಾಯಕತ್ವದ ಎಲ್ಲ ಗುಣಗಳನ್ನು ಕಲಿಯಲಿದ್ದೇನೆ ಎಂದು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕ ರವೀಂದ್ರ ಜಡೇಜ ಹೇಳಿದ್ದಾರೆ.
ಮಂಗಳವಾರ ರಾತ್ರಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ 23 ರನ್‌ಗಳ ಜಯಗಳಿಸಿದ ಬಳಿಕ ಅವರು ಮಾತನಾಡಿದ್ದಾರೆ.
‘ನಾಯಕನಾಗಿ ಹಿರಿಯ ಆಟಗಾರರ ಮನಸ್ಸನ್ನು ಅರಿಯುತ್ತಿದ್ದೇನೆ. ಮಹಿ (ಧೋನಿ) ಭಾಯಿ ಇಲ್ಲಿದ್ದಾರೆ. ನಾನು ಪ್ರತಿ ಬಾರಿ ಅವರ ಬಳಿ ತೆರಳಿ ಚರ್ಚಸುತ್ತೇನೆ. ಪ್ರತಿ ಪಂದ್ಯದಿಂದ ಪಂದ್ಯಕ್ಕೆ ಉತ್ತಮ ಪ್ರದರ್ಶನ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.
‘ನಾವು ಒಂದು ತಂಡವಾಗಿ ಅತ್ಯುತ್ತಮ ಅನುಭವ ಹೊಂದಿದ್ದೇವೆ. ನಾವೀಗ ಆತಂಕಿತರಾಗಬಾರದು. ಶಾಂತಚಿತ್ತರಾಗಿ ಸಕಾರಾತ್ಮಕ ಕ್ರಿಕೆಟ್ ಆಡುವತ್ತ ಗಮನಹರಿಸಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರಾಬಿನ್ ಉತ್ತಪ್ಪ ಹಾಗೂ ಶಿವಂ ದುಬೆ ಅವರನ್ನು ಜಡೇಜ ಶ್ಲಾಘಿಸಿದ್ದಾರೆ.
ಕಳೆದ ಬಾರಿಯ ಐಪಿಎಲ್ ಚಾಂಪಿಯನ್ ತಂಡವಾಗಿರುವ ಸಿಎಸ್‌ಕೆ ಈ ಬಾರಿ ಮೊದಲ ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸಿತ್ತು. ರವೀಂದ್ರ ಜಡೇಜ ಅವರು ಟೂರ್ನಿಯ ಆರಂಭದಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಸತತ ಸೋಲಿಗಾಗಿ ಅವರು ಟೀಕೆಗಳನ್ನು ಎದುರಿಸಬೇಕಾಗಿ ಬಂದಿತ್ತು.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.