ಮೆಲ್ಬರ್ನ್ (ಪಿಟಿಐ): ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೂ ಮುನ್ನ ಹೆಚ್ಚು ಅಭ್ಯಾಸ ಪಂದ್ಯಗಳನ್ನು ಆಡಲು ಅವಕಾಶ ನೀಡಬೇಕು ಎಂದು ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಕೋರಿದ್ದಾರೆ. ಇದಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಪೂರಕವಾಗಿ ಸ್ಪಂದಿಸಿದೆ.
ಇಂಗ್ಲೆಂಡ್ ಎದುರು ಇತ್ತೀಚೆಗೆ ಮುಕ್ತಾಯಗೊಂಡ ಟೆಸ್ಟ್ ಸರಣಿಯಲ್ಲಿ ಭಾರತ ಹೀನಾಯವಾಗಿ ಸೋತಿತ್ತು. ಸರಿಯಾದ ಅಭ್ಯಾಸ ನಡೆಸದೇ ಇದ್ದುದೇ ಸೋಲಿಗೆ ಕಾರಣ ಎಂಬ ಆರೋಪಗಳು ಕೇಳಿ ಬಂದಿದ್ದವು. ಸರಣಿಗೂ ಮುನ್ನ ಭಾರತ ಒಂದೇ ಒಂದು ಅಭ್ಯಾಸ ಪಂದ್ಯವನ್ನು ಆಡಿತ್ತು. ನಾಲ್ಕು ದಿನಗಳ ಪಂದ್ಯವನ್ನು ಮೂರೇ ದಿನಕ್ಕೆ ಮುಗಿಸಲಾಗಿತ್ತು.
ಡಿಸೆಂಬರ್ ಆರರಂದು ಆರಂಭವಾಗಲಿರುವ ಆಸ್ಟ್ರೇಲಿಯಾ ಎದುರಿನ ಸರಣಿಗೂ ಮುನ್ನ ಹೆಚ್ಚು ಅಭ್ಯಾಸ ಪಂದ್ಯಗಳನ್ನು ಆಡಿದರೆ ಉತ್ತಮ ಫಲಿತಾಂಶ ಸಿಗುವ ಸಾಧ್ಯತೆ ಇದೆ ಎಂಬುದು ರವಿಶಾಸ್ತ್ರಿ ಅವರ ಅನಿಸಿಕೆ.
‘ಹೆಚ್ಚು ಅಭ್ಯಾಸ ಪಂದ್ಯಗಳಿಗೆ ಸಂಬಂಧಿಸಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕೃತವಾಗಿ ಬೇಡಿಕೆ ಇರಿಸಿಲ್ಲ. ಮಂಡಳಿ ಜೊತೆ ಈ ವಿಷಯದ ಬಗ್ಗೆ ಚರ್ಚಿಸಲು ನಾವು ಉತ್ಸುಕರಾಗಿದ್ದೇವೆ’ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ವಕ್ತಾರರು ತಿಳಿಸಿದ್ದಾರೆ.
‘ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್ ಪಂದ್ಯದ ನಂತರ ಭಾರತ ತಂಡದ ಸಾಮರ್ಥ್ಯ ಹೆಚ್ಚುತ್ತಾ ಸಾಗಿತ್ತು. ಈಗ ತಂಡವು ಬಲಿಷ್ಠವಾಗಿಯೇ ಇದೆ. ಆದರೂ ಹೆಚ್ಚಿನ ಅಭ್ಯಾಸ ಪಂದ್ಯಗಳನ್ನು ಆಡುವುದರಿಂದ ನಷ್ಟವೇನೂ ಇಲ್ಲ. ಹೀಗಾಗಿ ಈ ಬೇಡಿಕೆ ಇರಿಸಲಾಗಿದೆ’ ಎಂದು ಕ್ರಿಕೆಟ್ ವೆಬ್‌ಸೈಟ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ರವಿಶಾಸ್ತ್ರಿ ಹೇಳಿದ್ದಾರೆ.
ಭಾರತವು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಗೂ ಮುನ್ನ ಮೂರು ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ. ನಾಲ್ಕು ಟೆಸ್ಟ್ ಪಂದ್ಯಗಳ ನಂತರ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಈ ಸರಣಿ ನವೆಂಬರ್ 21ರಂದು ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.