ಅಹಮದಾಬಾದ್: ವಿಕೆಟ್‌ಕೀಪರ್ –ಬ್ಯಾಟರ್ ಇಶಾನ್ ಕಿಶನ್ ಅವರೊಂದಿಗೆ ಭಾನುವಾರ ಐಪಿಎಲ್ ಪಂದ್ಯದ ನಂತರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಕೆಲಹೊತ್ತು ಮಾತುಕತೆ ನಡೆಸಿದರು.
ಇತ್ತೀಚೆಗಷ್ಟೇ ಇಶಾನ್ ಕಿಶನ್ ಅವರನ್ನು ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಕೈಬಿಡಲಾಗಿತ್ತು. ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ಇಶಾನ್ ಅವರು ವೈಯಕ್ತಿಕ ಕಾರಣ ನೀಡಿ ಹಿಂದೆ ಸರಿದಿದ್ದರು. ಆದರೆ ಅದರ ನಂತರ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ ಫ್ರ್ಯಾಂಚೈಸಿ ಕ್ರಿಕೆಟ್‌ನಲ್ಲಿಯೂ ಆಡಿದ್ದರು.
ಅಲ್ಲದೇ ರಣಜಿ ಟ್ರೊಫಿ ಟೂರ್ನಿಯಲ್ಲಿ ಆಡುವಂತೆ ಬಿಸಿಸಿಐ ನೀಡಿದ್ದ ಸೂಚನೆಯನ್ನೂ ಇಶಾನ್ ಪಾಲಿಸಿರಲಿಲ್ಲ. ಇದರಿಂದಾಗಿ ಅವರನ್ನು ಕೇಂದ್ರ ಗುತ್ತಿಗೆಯಿಂದ ಕೈಬಿಡಲಾಗಿತ್ತು.
ಭಾನುವಾರ ಇಲ್ಲಿ ನಡೆದಿದ್ದ ಗುಜರಾತ್ ಟೈಟನ್ಸ್ ಎದುರಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಇಶಾನ್ ಕಿಶನ್ ಆಡಿದರು. ಪಂದ್ಯದ ನಂತರ ಅವರೊಂದಿಗೆ ಜಯ್ ಶಾ ಮಾತನಾಡಿದರು. ಇದರಿಂದಾಗಿ ಇಶಾನ್ ಅವರು ಭಾರತ ತಂಡಕ್ಕೆ ಮರಳುವ ಕುರಿತು ಆಶಾಭಾವನೆ ಮೂಡಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.