ನವದೆಹಲಿ: ‘ಹರಾಜಿನಲ್ಲಿ ಭಾರಿ ಮೊತ್ತ ಪಡೆದು ಬಂದಿರುವ ಅಂತರರಾಷ್ಟ್ರೀಯ ಆಟಗಾರರು ಒತ್ತಡದ ಸ್ಥಿತಿಯನ್ನು ನಿಭಾಯಿಸಲು ವಿಫಲರಾಗಿ, ಯುವ ಆಟಗಾರರ ಹೆಗಲ ಮೇಲೆ ಭಾರ ಹೇರುತ್ತಿರುವುದರಿಂದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಶಸ್ತಿ ಬರ ಎದುರಿಸುತ್ತಿದೆ...’
– ಇದು ಭಾರತ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು ಅವರ ಅಭಿಪ್ರಾಯ.
ಈ ಹಿಂದೆ ಐಪಿಎಲ್ ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿದ್ದ ರಾಯುಡು, ಬೆಂಗಳೂರು ತಂಡದ ಹಿನ್ನಡೆಗೆ ಯಾರು ಹೆಸರನ್ನೂ ಹೇಳಲಿಲ್ಲ. ಆದರೆ– ಪ್ರಮುಖ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಫಫ್ ಡುಪ್ಲೆಸಿ ಅವರನ್ನು ಉದ್ದೇಶಿಸಿ ಪರೋಕ್ಷವಾಗಿ ಹೇಳಿಕೆ ನೀಡಿದಂತಿತ್ತು.
ಆರ್‌ಸಿಬಿ ಈ ಋತುವಿನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತಿದೆ. ಕೊಹ್ಲಿ ಅವರು 140ರ ಸ್ಟ್ರೈಕ್ ರೇಟ್‌ನಲ್ಲಿ 203 ರನ್ ಗಳಿಸಿದ್ದಾರೆ. ಆದರೆ ಪವರ್‌ಪ್ಲೇನಲ್ಲಿ ಅವರು ತಂಡಕ್ಕೆ ಸ್ಪೋಟಕ ಆರಂಭ ನೀಡಿಲ್ಲ.
ಅನುಭವಿ ಡುಪ್ಲೆಸಿ ಅವರು ನಾಲ್ಕು ಪಂದ್ಯಗಳಲ್ಲಿ 65 ರನ್ ಗಳಿಸಿದ್ದರೆ, ಆಸ್ಟ್ರೇಲಿಯಾದ ತಾರೆ ಮ್ಯಾಕ್ಸ್‌ವೆಲ್ ಕಾಣಿಕೆ ಬರೇ 31.
‘ಬೌಲರ್‌ಗಳು ಉದಾರವಾಗಿ ರನ್ ನೀಡುತ್ತಿದ್ದಾರೆ. ಬ್ಯಾಟರ್‌ಗಳು ನಿರೀಕ್ಷೆಗಿಂತ ಕೆಳಮಟ್ಟದಲ್ಲಿ ಆಡುತ್ತಿದ್ದಾರೆ’ ಎಂದು ಆರ್‌ಸಿಬಿ, ಮಂಗಳವಾರ ಲಖನೌ ತಂಡಕ್ಕೆ 28 ರನ್‌ಗಳಿಂದ ಸೋತ ನಂತರ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.
‘ಒತ್ತಡದ ಸ್ಥಿತಿಯಲ್ಲಿ ಯಾರು ಬ್ಯಾಟ್ ಮಾಡುತ್ತಿದ್ದಾರೆ? ಯುವ ಆಟಗಾರರು ಮತ್ತು ದಿನೇಶ್ ಕಾರ್ತಿಕ್ ಮಾತ್ರ. ಒತ್ತಡದ ಸ್ಥಿತಿ ನಿವಾರಿಸಬೇಕಾಗಿದ್ದ ದೊಡ್ಡ ಅಂತರರಾಷ್ಟ್ರೀಯ ತಾರೆಗಳು ಎಲ್ಲಿ ಹೋಗಿದ್ದಾರೆ? ಎಲ್ಲರೂ ಡ್ರೆಸಿಂಗ್ ರೂಮಿನಲ್ಲಿದ್ದಾರೆ’ ಎಂದು ರಾಯುಡು ತಿವಿದರು.
ಕಾರ್ತಿಕ್ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದರು. ಮಂಗಳವಾರದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಮಹಿಪಾಲ್ ಲೊಮ್ರೊರ್ 230ರ ಸ್ಟ್ರೈಕ್‌ರೇಟಿನಲ್ಲಿ ರನ್ ಗಳಿಸಿದ್ದರು.
‘16 ವರ್ಷಗಳಾಗಿವೆ. ಆರ್‌ಸಿಬಿಯದ್ದು ಒಂದೇ ಕಥೆ. ಒತ್ತಡವಿದ್ದಾಗ ತಾರಾ ಆಟಗಾರರು ಗೆಲ್ಲಿಸುವುದಿಲ್ಲ. ಯುವ ಆಟಗಾರರ ಹೆಗಲ ಮೇಲೆ ಿದರ ಹೊರೆ ಹೇರಲಾಗುತ್ತಿದೆ’ ಎಂದು 38 ವರ್ಷದ ಬ್ಯಾಟರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.