ADVERTISEMENT

ಮೊಟೇರಾಗೆ ಹೊರಟ ‘ಬೆಂಗಳೂರು ಅಭಿಮಾನಿಗಳು’

​ಪ್ರಜಾವಾಣಿ ವಾರ್ತೆ
Published 21 ಮೇ 2024, 15:44 IST
Last Updated 21 ಮೇ 2024, 15:44 IST
ಆರ್‌ಸಿಬಿ ಅಭಿಮಾನಿಗಳು
ಆರ್‌ಸಿಬಿ ಅಭಿಮಾನಿಗಳು   

ಬೆಂಗಳೂರು: ಐಪಿಎಲ್ ಟೂರ್ನಿಯ ಇತಿಹಾಸದಲ್ಲಿಯೇ ಅತ್ಯಂತ ‘ನಿಷ್ಠಾವಂತ ಅಭಿಮಾನಿ ಬಳಗ’ವನ್ನು ಹೊಂದಿರುವ ತಂಡವೆಂಬ ಶ್ರೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಇದೆ. 

ಸತತ 17 ವರ್ಷಗಳಿಂದ ಆಡುತ್ತಿರುವ ತಂಡವು ಒಂದು ಬಾರಿಯೂ ಚಾಂಪಿಯನ್ ಆಗಿಲ್ಲ. ಆದರೆ ಈ ಅಭಿಮಾನಿ ಬಳಗದ ಪ್ರೀತಿ ಮಾತ್ರ ಹೆಚ್ಚಾಗುತ್ತಲೇ ಇರುವುದು ವಿಶೇಷ. ಇವರೆಲ್ಲರದೂ ಒಂದು ‘ಆರ್‌ಸಿಬಿ ಫ್ಯಾನ್ ಕ್ಲಬ್‌’ ರೂಪುಗೊಂಡು ಈಗ 13 ವರ್ಷಗಳು ಕಳೆದಿವೆ. ಇದೀಗ ಅಹಮದಾಬಾದಿನಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯಕ್ಕೂ ಈ ಕ್ಲಬ್‌ನ ಸದಸ್ಯರು ಬೆಂಗಳೂರಿನಿಂದ ಹೊರಟಿದ್ದಾರೆ. 

‘ಈ ಪಂದ್ಯಕ್ಕೆ ನಾವು   ಹತ್ತು ಜನ ಬೆಂಗಳೂರಿನಿಂದ ಹೋಗುತ್ತಿದ್ದೇವೆ. ಅಹಮದಾಬಾದ್‌ನಲ್ಲಿರುವ  ಆರ್‌ಸಿಬಿ ಅಭಿಮಾನಿಗಳು ಹಾಗೂ ಬೇರೆ ಬೇರೆ ಕಡೆಯಿಂದ ಬರುವವರು ಸೇರಿಕೊಳ್ಳಲಿದ್ದಾರೆ. ಸೂಪರ್ ಫ್ಯಾನ್ ಸುಗುಮಾರ್ ಕೂಡ ಇದ್ದಾರೆ. ನಾವೆಲ್ಲರೂ ಸೇರಿ ಆರ್‌ಸಿಬಿಯನ್ನು ಹುರಿದುಂಬಿಸುತ್ತೇವೆ’ ಎಂದು ಈ ಕ್ಲಬ್ ಸಂಸ್ಥಾಪಕರಲ್ಲಿ ಒಬ್ಬರಾದ ಪ್ರೀತಂ ಕರಿಗಾರ್ ಹೇಳಿದ್ದಾರೆ. 

ADVERTISEMENT

‘2011ರಲ್ಲಿ ನಾನು ಮತ್ತು ಸ್ನೇಹಿತ ವಿಕಾಸ್ ಜೈನ್ ಸೇರಿಕೊಂಡು ಒಂದು ಆರ್‌ಸಿಬಿ ಫ್ಯಾನ್ಸ್‌ ಫೇಸ್‌ಬುಕ್ ಆರಂಭಿಸಿದ್ದೆವು.  ಈಗ ನಮಗೆ ಫೇಸ್‌ಬುಕ್‌ನಲ್ಲಿ 5.52 ಲಕ್ಷ ಫಾಲೋವರ್ಸ್ ಇದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ 58 ಸಾವಿರ ಹಾಗೂ ಟ್ವಿಟರ್ (ಎಕ್ಸ್‌) 10 ಸಾವಿರ ಜನ ಫಾಲೋವರ್ಸ್ ಇದ್ದಾರೆ. ನಮ್ಮ ವಾಟ್ಸ್‌ಅಪ್ ಗ್ರೂಪ್‌ನಲ್ಲಿ ಎರಡು ಸಾವಿರ ಸದಸ್ಯರು ಇದ್ದೇವೆ’ ಎಂದು ಪ್ರೀತಂ ವಿವರಿಸಿದರು. 

ಬೆಂಗಳೂರಿನಲ್ಲಿ ಪಂದ್ಯ ನಡೆದಾಗ ಕನಿಷ್ಠ 100 ಜನರಾದರೂ ಈ ಕ್ಲಬ್‌ ಪ್ರತಿನಿಧಿಗಳು ಕ್ರೀಡಾಂಗಣದಲ್ಲಿರುತ್ತಾರೆ. ವಿವಿಧ ಘೋಷವಾಕ್ಯಗಳಿರುವ ದೊಡ್ಡ ಬ್ಯಾನರ್‌ಗಳನ್ನು ಪ್ರದರ್ಶಿಸುತ್ತಾರೆ. ಪಂದ್ಯಗಳಲ್ಲಿ ರಾರಾಜಿಸುವ ‘ವಿ ಬಿಲೀವ್ ಇನ್ ಆರ್ಸಿಬಿ‘, ‘ನಮ್ಮ ಟೀಂ ಆರ್‌ಸಿಬಿ‘, ‘ನಾವಿರುವುದೇ ನಿಮಗಾಗಿ‘ ಇತ್ಯಾದಿ ಬ್ಯಾನರ್‌ಗಳು ಈ ಕ್ಲಬ್‌ನದ್ದೇ.

‘2017ರಲ್ಲಿ ಆರ್‌ಸಿಬಿಯ ಅಧಿಕೃತ ಫ್ಯಾನ್ ಕ್ಲಬ್‌ ಮಾನ್ಯತೆ ನಮಗೆ ಸಿಕ್ಕಿದೆ. ಅದೇ ವರ್ಷ ಬೆಸ್ಟ್ ಫ್ಯಾನ್ಸ್ ಎಂಬ ಗೌರವವೂ ನಮ್ಮದಾಗಿತ್ತು. ನಾವೆಲ್ಲರೂ ಬೇರೆ ಬೇರೆ ವೃತ್ತಿಗಳಲ್ಲಿದ್ದೇವೆ. ಪ್ರವೃತ್ತಿಯಲ್ಲಿ ಕ್ರೀಡಾಭಿಮಾನಿಗಳಾಗಿದ್ದೇವೆ. ಆರ್‌ಸಿಬಿ ಸೇರಿದಂತೆ ಬೆಂಗಳೂರಿನ ಎಲ್ಲ ಕ್ರೀಡಾ ಕ್ಲಬ್‌ಗಳಿಗೂ ನಾವು ಬೆಂಬಲಿಸುತ್ತೇವೆ. ಬೆಂಗಳೂರು ಫುಟ್‌ಬಾಲ್ ಕ್ಲಬ್, ಬೆಂಗಳೂರು ಬುಲ್ಸ್ ಕಬಡ್ಡಿ ತಂಡಗಳನ್ನೂ ನಾವು ಬೆಂಬಲಿಸುತ್ತೇವೆ. ಬೆಂಗಳೂರಿನಲ್ಲಿ ಪಂದ್ಯ ನಡೆದಾಗ ಫ್ರ್ಯಾಂಚೈಸಿಯವರು 50 ಟಿಕೆಟ್‌ಗಳನ್ನು ಕಾಯ್ದಿರಿಸುತ್ತಾರೆ. ನಾವು ಹಣ ಪಾವತಿಸಿ ತೆಗೆದುಕೊಳ್ಳುತ್ತೇವೆ. ಸದಸ್ಯರೆಲ್ಲ ಸೇರಿ ಹಣ ಸಂಗ್ರಹಿಸಿಕೊಳ್ಳುತ್ತೇವೆ. ಬೇರೆ ಊರುಗಳಲ್ಲಿ ಪಂದ್ಯಗಳಿದ್ಧಾಗ ನಮ್ಮದೇ ಖರ್ಚಿನಲ್ಲಿ ಹೋಗಿ ಬರುತ್ತೇವೆ’ ಎಂದು ವೃತ್ತಿಪರ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಪ್ರೀತಂ ಹೇಳುತ್ತಾರೆ. 

‘ಆರ್‌ಸಿಬಿಯಲ್ಲಿ ಕನ್ನಡಿಗ ಆಟಗಾರರಿಗೆ ಹೆಚ್ಚು ಪ್ರಾಶಸ್ತ್ಯ ಕೊಡಬೇಕು ಎಂದು ಆಗ್ರಹಿಸುತ್ತಲೇ ಇದ್ದೇವೆ. ಕೆ.ಎಲ್. ರಾಹುಲ್ ಕೂಡ ಇಲ್ಲಿಗೆ ಮರಳಬೇಕು ಎಂಬುದು ನಮ್ಮ ಅಭಿಯಾನ’ ಎಂದೂ ಪ್ರೀತಂ ಒತ್ತಾಯಿಸುತ್ತಾರೆ.

‘ಈಚೆಗೆ ಪಂದ್ಯ ಮುಗಿದ ನಂತರ ಚೆನ್ನೈ ಸೂಪರ್ ಕಿಂಗ್ಸ್‌ನ ಕೆಲವು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷದ ಸಂದೇಶಗಳನ್ನು ಬಿತ್ತರಿಸುತ್ತಿದ್ದಾರೆ. ಅದಕ್ಕಾಗಿ ನಾವು ಸೌಹಾರ್ದದ ಅಭಿಯಾನ ನಡೆಸಲು ನಿರ್ಧರಿಸಿದ್ದೇವೆ. ನಾವೆಲ್ಲರೂ ಕ್ರಿಕೆಟ್‌ ಅಭಿಮಾನಿಗಳು ಒಂದೇ ಎನ್ನುವುದು ನಮ್ಮ ಭಾವನೆ. ಇಡೀ ವರ್ಷ ಭಾರತ ತಂಡವನ್ನು ನಾವು ಬೆಂಬಲಿಸುತ್ತೇವೆ’ ಎಂದರು.

ಇದಲ್ಲದೇ ಅನಾಥಾಲಯ, ವೃದ್ಧಾಶ್ರಮಗಳಿಗೆ ನೆರವು ನೀಡುವ ಹಾಗೂ ಪರಿಸರಸ್ನೇಹಿ ಕಾರ್ಯಗಳನ್ನೂ ಈ ಕ್ಲಬ್‌ ಮಾಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.