ಧರ್ಮಶಾಲಾ: ವಿರಾಟ್ ಕೊಹ್ಲಿ (92,47ಎ) ಅವರ ಮಿಂಚಿನ ಅರ್ಧ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ನಾಲ್ಕನೇ ಗೆಲುವು ದಾಖಲಿಸಿತು. ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ 60 ರನ್‌ಗಳ ಸುಲಭ ಜಯ ಗಳಿಸಿತು.
ಈ ಗೆಲುವಿನೊಡನೆ ಆರ್‌ಸಿಬಿ ಏಳನೇ ಸ್ಥಾನದಲ್ಲೇ ಉಳಿಯಿತು. ಈ ಸೋಲಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡದ ಪ್ಲೇ ಆಫ್ ಕನಸು ಭಗ್ನಗೊಂಡಿತು. ಮಳೆಯ ಕಾರಣದಿಂದ ಕೆಲಕಾಲ ಪಂದ್ಯ ಸ್ಥಗಿತಗೊಂಡಿತು.
ಮೊದಲು ಬ್ಯಾಟ್ ಮಾಡಲು ಕಳುಹಿಸಲ್ಪಟ್ಟ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 241 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ಪಂಜಾಬ್ ತಂಡ ನಿಯಮಿತವಾಗಿ ವಿಕೆಟ್ ಕಳೆದುಕೊಂಡು 17 ಓವರ್‌ಗಳಲ್ಲಿ 181 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಸ್ವಪ್ನಿಲ್ ಸಿಂಗ್ ಮತ್ತು ಫರ್ಗ್ಯೂಸನ್ ಪಂಜಾಬ್ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಪ್ರಭಸಿಮ್ರನ್ ಸಿಂಗ್ ಮತ್ತು ಜಾನಿ ಬೇಸ್ಟೊ ಹೆಚ್ಚು ರನ್ ಗಳಿಸಲು ಆಗಲಿಲ್ಲ. ನಂತರ ಬಂದ ಶಶಾಂಕ್ ಸಿಂಗ್ (37, 19ಎ) ಮತ್ತು ರಿಲಿ ರೂಸೊ (61, 27ಎ) ಜೊತೆಯಾಟದಿಂದ ಗೆಲುವಿನ ಆಸೆ ಚಿಗುರಿತ್ತು. ಆದರೆ, ಇಬ್ಬರು ಔಟಾಗುತ್ತಿದ್ದಂತೆ ಉಳಿದ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಮೊಹಮದ್ ಸಿರಾಜ್ ಕೊನೆಯ ಮೂರು ವಿಕೆಟ್ ಕಬಳಿಸಿದರು.
ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರ್‌ಸಿಬಿ ಪವರ್ ಪ್ಲೇ ಅವಧಿಯಲ್ಲೇ ಎರಡು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕ ಡುಪ್ಲೆಸಿ ಹಾಗೂ ವಿಲ್ ಜ್ಯಾಕ್ಸ್ ಬೇಗನೆ ನಿರ್ಗಮಿಸಿದರು. ಐಪಿಎಲ್‌ನಲ್ಲಿ ಪದಾರ್ಪಣೆ ಮಾಡಿದ ಕನ್ನಡಿಗ ವಿದ್ವತ್ ಕಾವೇರಪ್ಪ ಅವರ ಮೊದಲ ಸ್ಪೆಲ್‌ನ ಎರಡು ಓವರ್‌ಗಳಲ್ಲಿಯೂ ಫೀಲ್ಡ್ರರ್‌ಗಳು ಮಾಡಿದ ಲೋಪಗಳಿಂದ ವಿರಾಟ್ ಕೊಹ್ಲಿ ಜೀವದಾನ ಪಡೆದರು. ಅದರ ಫಲವಾಗಿ ವಿರಾಟ್ ಬ್ಯಾಟಿಂಗ್‌ನಲ್ಲಿ ಮಿಂಚಿದರು. ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗರೆದರು. ಒಂದು ರನ್‌ಔಟ್ ಸಹ ಮಾಡಿದರು.
ರಜತ್ ಪಾಟೀದಾರ್ (55; 23ಎ) ಹಾಗೂ ಕ್ಯಾಮರಾನ್ ಗ್ರೀನ್ (46; 27ಎ) ಕೂಡ ಮಹತ್ವದ ಕಾಣಿಕೆ ನೀಡಿದರು.ಪಂಜಾಬ್ ತಂಡದ ವೇಗಿ ಆರ್ಷದೀಪ್ ಸಿಂಗ್ ಅವರಿಂದ ಕ್ಯಾಪ್ ಪಡೆದ ವಿದ್ವತ್ ಮೊದಲ ಓವರ್ ಹಾಕುವ ಅವಕಾಶ ಪಡೆದರು. ಓವರ್‌ನ ಮೂರನೇ ಎಸೆತವನ್ನು ಹೊಡೆದ ವಿರಾಟ್ ಬ್ಯಾಟ್ ಅಂಚಿಗೆ ಅಪ್ಪಳಿಸಿದ ಚೆಂಡು ಎತ್ತರಕ್ಕೆ ಚಿಮ್ಮಿತು. ಆಶುತೋಷ್ ಸಿಂಗ್ ಓಡಿ ಹೋಗಿ ಕ್ಯಾಚ್ ಪಡೆಯುವಲ್ಲಿ ವಿಫಲರಾದರು.
ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ವಿದ್ವತ್ ಎರಡನೇ ಎಸೆತದಲ್ಲಿಯೇ ಡುಪ್ಲೆಸಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಅದೇ ಓವರ್ ಕೊನೆಯ ಎಸೆತದಲ್ಲಿ ವಿರಾಟ್ ಅವರ ಕ್ಯಾಚ್ ಪಡೆಯುವ ಅವಕಾಶವನ್ನು ರಿಲಿ ರೂಸೊ ಕೈಚೆಲ್ಲಿದರು. ವಿದ್ವತ್ ತಮ್ಮ ಇನ್ನೊಂದು ಓವರ್‌ನಲ್ಲಿ ವಿಲ್ ಜ್ಯಾಕ್ಸ್ (12ರನ್) ವಿಕೆಟ್ ಕೂಡ ಪಡೆದರು. ಆದರೆ ಕೊನೆಯವರೆಗೂ ವಿರಾಟ್ ವಿಕೆಟ್ ಗಳಿಸುವ ಅದೃಷ್ಟ ಅವರಿಗೆ ಸಿಗಲಿಲ್ಲ.
18ನೇ ಓವರ್‌ನಲ್ಲಿ ವಿರಾಟ್ ವಿಕೆಟ್ ಪಡೆಯುವಲ್ಲಿ ಆರ್ಷದೀಪ್ ಸಿಂಗ್ ಯಶಸ್ವಿಯಾದರು. ಆದರೆ ಅದಕ್ಕೂ ಮುನ್ನ ವಿರಾಟ್ ಅಮೋಘವಾದ ಬ್ಯಾಟಿಂಗ್ ಮಾಡಿದರು.
ಎರಡು ಜೊತೆಯಾಟ:
ವಿರಾಟ್ ಅವರು ಎರಡು ಮಹತ್ವದ ಜೊತೆಯಾಟಗಳಲ್ಲಿ ಭಾಗಿಯಾದರು. ಅಷ್ಟೇ ಅಲ್ಲ. ತಾವು ಕೂಡ ಮಿಂಚಿನ ವೇಗದಲ್ಲಿ ರನ್ ಗಳಿಸುವ ಸಮರ್ಥರು ಎಂಬುದನ್ನೂ ಇಲ್ಲಿ ತೋರಿಸಿಕೊಟ್ಟರು. ಅವರು 195.74ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದರು. 34 ಎಸೆತಗಳಲ್ಲಿ 50 ರನ್ ಗಳಿಸಿದ ಅವರು, ಈ ಟೂರ್ನಿಯಲ್ಲಿ ಐದನೇ ಅರ್ಧಶತಕ ದಾಖಲಿಸಿದರು. ನಂತರದ 13 ಎಸೆತಗಳಲ್ಲಿ 42 ರನ್‌ಗಳನ್ನು ಸೂರೆ ಮಾಡಿದರು. ಅಲ್ಲದೇ ಒಟ್ಟು 600 ರನ್‌ಗಳ ಗಡಿ ಮೀರಿದ ಹೆಗ್ಗಳಿಕೆಯೂ ಅವರದ್ದಾಯಿತು.
ವಿರಾಟ್ ಅವರಿಗಿಂತಲೂ ಬಿರುಸಾದ ಬ್ಯಾಟಿಂಗ್ ಮಾಡಿದ ರಜತ್ ಪಾಟೀದಾರ್ (55; 23ಎ) ತಂಡದ ಮೊತ್ತ ಶರವೇಗದಲ್ಲಿ ಏರಲು ಕಾರಣರಾದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ ವಿರಾಟ್ ಮತ್ತು ರಜತ್ 76 ರನ್ ಗಳಿಸಿದರು.
ಅದರಲ್ಲಿ ರಜತ್ ಅವರದ್ದೇ ಸಿಂಹಪಾಲು. ಅವರು 19 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ರಜತ್‌ಗೂ ಒಂದು ಜೀವದಾನ ಲಭಿಸಿತು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ವಿರಾಟ್ ಮತ್ತು ಗ್ರೀನ್ ಅವರು 92 ರನ್ ಸೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.