ಬೆಂಗಳೂರು: ಕ್ರಿಕೆಟ್ ದಂತಕಥೆಗಳಾದ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರನ್ನು ಮಾರ್ಚ್ 26ರಂದು ಇಂಡಿಯನ್ ಪ್ರೀಮಿಯರ್ ಲೀಗ್‌ನ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳಿಸಲಾಗುತ್ತಿದ್ದು, ಆ ಬಳಿಕ ಅವರು ಬಳಸಿದ್ದ ಜೆರ್ಸಿ ಸಂಖ್ಯೆಗಳಿಗೆ ನಿವೃತ್ತಿ ಘೋಷಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ನಿರ್ಧರಿಸಿದೆ.
‘ಆರ್‌ಸಿಬಿ ದಂತಕಥೆಗಳಾದ ಎಬಿ ಡಿ ವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರನ್ನು ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳಿಸಿದ ಬಳಿಕ ಅವರು ಬಳಸುತ್ತಿದ್ದ ಜೆರ್ಸಿ ಸಂಖ್ಯೆ 17 ಮತ್ತು 333ಕ್ಕೆ ನಿವೃತ್ತಿ ಘೋಷಿಸಲಾಗುತ್ತದೆ’ ಎಂದು ಆರ್‌ಸಿಬಿ ಟ್ವೀಟ್ ಮಾಡಿದೆ.
17ನೇ ನಂಬರ್‌ನ ಜೆರ್ಸಿ ಬಳಸುತ್ತಿದ್ದ ದಕ್ಷಿಣ ಆಫ್ರಿಕಾದ ಬ್ಯಾಟರ್ ಎಬಿ ಡಿ ವಿಲಿಯರ್ಸ್ 11 ಆವೃತ್ತಿಗಳಲ್ಲಿ ಆರ್‌ಸಿಬಿ ಪರ 156 ಪಂದ್ಯಗಳನ್ನು ಆಡುವ ಮೂಲಕ 4,491 ರನ್ ಕಲೆ ಹಾಕಿದ್ದಾರೆ. 37 ಅರ್ಧಶತಕ ಮತ್ತು ಎರಡು ಶತಕ ಒಳಗೊಂಡಂತೆ 133 ರನ್ ಅವರ ವೈಯಕ್ತಿಕ ಅತ್ಯಧಿಕ ಮೊತ್ತವಾಗಿದೆ.
ವಿರಾಟ್ ಕೊಹ್ಲಿ ಜೊತೆಗೆ ಅವರು, ಐದು ಬಾರಿ 100ಕ್ಕೂ ಹೆಚ್ಚು ರನ್ ಮತ್ತು ಎರಡು ಬಾರಿ 200ಕ್ಕೂ ಅಧಿಕ ರನ್ ಜೊತೆಯಾಟ ನೀಡಿದ್ದಾರೆ. ವಿಶ್ವದಲ್ಲಿ ಈ ಇಬ್ಬರು ಆಟಗಾರರು ಮಾತ್ರ ಈ ರೀತಿಯ ವಿಶಿಷ್ಟ ದಾಖಲೆ ಹೊಂದಿದ್ದಾರೆ.
ವೆಸ್ಟ್‌ಇಂಡೀಸ್‌ನ ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ ಆರ್‌ಸಿಬಿ ಪರ 7 ಆವೃತ್ತಿಗಳಲ್ಲಿ ಆಡಿದ್ದು, ಅವರ ಜೆರ್ಸಿ ಸಂಖ್ಯೆ 333 ಆಗಿದೆ.
2013ರ ಆವೃತ್ತಿಯಲ್ಲಿ ಅವರು, 16 ಪಂದ್ಯಗಳಿಂದ 708 ರನ್ ಸಿಡಿಸಿದ್ದಾರೆ. ಅದರಲ್ಲಿ ಅಜೇಯ 175 ರನ್ ಸಹ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.