ಮುಂಬೈ: ಸ್ಮೃತಿ ಮಂದಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿಯೆಡೆಗಿನ ತನ್ನ ಅಭಿಯಾನವನ್ನು ಇಂದು (ಭಾನುವಾರ) ಆರಂಭಿಸಲಿದೆ.
ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪೈಪೋಟಿ ನೀಡಲಿದೆ. ಡೆಲ್ಲಿ ತಂಡವನ್ನು ಮೆಗ್ ಲ್ಯಾನಿಂಗ್ ಮುನ್ನಡೆಸುತ್ತಿದ್ದಾರೆ.
ಅಂತಿಮ ಇಲೆವೆನ್‌ನಲ್ಲಿ ವಿದೇಶದ ನಾಲ್ವರಿಗೆ ಮಾತ್ರ ಆಡಲು ಅವಕಾಶವಿದೆ. ಆದ್ದರಿಂದ ಆರ್‌ಸಿಬಿ ಹೆಥರ್ ನೈಟ್, ಎಲೈಸ್ ಪೆರಿ, ಮೇಗನ್ ಶುಟ್ ಮತ್ತು ಸೋಫಿ ಡಿವೈನ್ ಅವರು ಕಣಕ್ಕಿಳಿಸುವ ಸಾಧ್ಯತೆಯಿದೆ. ಆದರೆ ಭಾರತದ ಆಟಗಾರ್ತಿಯರಲ್ಲಿ ಯಾರಿಗೆ ಅವಕಾಶ ನೀಡಬೇಕು ಎಂಬುದು ಸ್ಮೃತಿ ಹಾಗೂ ತಂಡದ ವ್ಯವಸ್ಥಾಪನ ಮಂಡಳಿಗೆ ಚಿಂತೆ ಉಂಟುಮಾಡಿದೆ.
ಸ್ಮೃತಿ, ರಿಚಾ ಘೋಷ್ ಮತ್ತು ರೇಣುಕಾ ಠಾಕೂರ್ ಅವರು ಆಡಲಿದ್ದರೆ, ಇನ್ನುಳಿದ ನಾಲ್ಕು ಸ್ಥಾನಗಳಿಗೆ ಇತರ ಆಟಗಾರ್ತಿಯರ ನಡುವೆ ಪೈಪೋಟಿಯಿದೆ.
ಭಾರತ ತಂಡದ ಹಲವು ಪ್ರಮುಖ ಆಟಗಾರ್ತಿಯರನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಡೆಲ್ಲಿ ತಂಡ, ಆರ್‌ಸಿಬಿಗೆ ಪ್ರಬಲ ಪೈಪೋಟಿ ನೀಡುವುದರಲ್ಲಿ ಅನುಮಾನವಿಲ್ಲ.
ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಶಿಖಾ ಪಾಂಡೆ, ಪೂನಂ ಯಾದವ್, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ, ರಾಧಾ ಯಾದವ್ ಅವರು ತಂಡದಲ್ಲಿದ್ದಾರೆ. ನಾಯಕಿ ಲ್ಯಾನಿಂಗ್ ಅಲ್ಲದೆ ಜೆಸ್ ಜೋನಾಸೆನ್, ಮೆರಿಜನ್ ಕಾಪ್ ಮತ್ತು ಅಲೈಸ್ ಕ್ಯಾಪ್ಸಿ ಅವರು ಅಂತಿಮ ಇಲೆವೆನ್‌ನಲ್ಲಿ ಆಡುವುದು ಖಚಿತ.
ದಿನದ ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಎದುರಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.