ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಫಾಲಿ ವರ್ಮಾ ಮತ್ತು ಮೆಗ್ ಲ್ಯಾನಿಂಗ್ ಅವರ ಅಬ್ಬರದ ಜೊತೆಯಾಟದ ಮುಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟ ನಡೆಯಲಿಲ್ಲ.
ಇದರೊಂದಿಗೆ ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಮೃತಿ ಮಂದಾನ ನಾಯಕತ್ವದ ಆರ್‌ಸಿಬಿ ತನ್ನ ಅರಂಭಿಕ ಪಂದ್ಯದಲ್ಲಿಯೇ ಸೋಲಿನ ಕಹಿ ಅನುಭವಿಸಿತು. ಲ್ಯಾನಿಂಗ್ ನಾಯಕತ್ವದ ಡೆಲ್ಲಿ ತಂಡವು 60 ರನ್‌ಗಳ ಜಯದೊಂದಿಗೆ ಶುಭಾರಂಭ ಮಾಡಿತು.
ಟಾಸ್ ಗೆದ್ದ ಆರ್‌ಸಿಬಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಡೆಲ್ಲಿಯ ಆರಂಭಿಕ ಜೋಡಿ ಲ್ಯಾನಿಂಗ್ (72; 43ಎ, 4X14) ಹಾಗೂ ಶಫಾಲಿ ವರ್ಮಾ (84; 45ಎ, 4X10, 6X4) ಮೊದಲ ವಿಕೆಟ್ ಜೊತೆಯಾಟದಲ್ಲಿ 162 ರನ್ ಸೇರಿಸಿದರು.
ಇದರಿಂದಾಗಿ ಡೆಲ್ಲಿ ತಂಡವು 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 223 ರನ್ ಗಳಿಸಲು ಸಾಧ್ಯವಾಯಿತು. ಅದಕ್ಕುತ್ತರವಾಗಿ ಆರ್‌ಸಿಬಿಗೆ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 163 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಡೆಲ್ಲಿ ತಂಡದ ಮಧ್ಯಮವೇಗಿ ತಾರಾ ನೊರಿಸ್ (4–0–29–5) ಮಿಂಚಿದರು.
ಶಫಾಲಿ ವರ್ಮಾ ನಾಯಕತ್ವ ವಹಿಸಿದ್ದ 19 ವರ್ಷದೊಳಗಿನವರ ಭಾರತ ತಂಡದ ಆಟಗಾರ್ತಿಯರು ದಕ್ಷಿಣ ಆಫ್ರಿಕಾದಲ್ಲಿ ಈಚೆಗೆ ನಡೆದಿದ್ದ ಟಿ20 ವಿಶ್ವಕಪ್ ಜಯಿಸಿದ್ದರು. ಆರ್‌ಸಿಬಿ ತಂಡದ ಏಳು ಬೌಲರ್‌ಗಳಿಗೂ ಶಫಾಲಿ ಮತ್ತು ಲ್ಯಾನಿಂಗ್ ಜೋಡಿಯನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ.
ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಸ್ಮೃತಿ ಮಂದಾನ (35; 23ಎ, 4X5, 6X1) ಉತ್ತಮ ಆರಂಭ ನೀಡಿದರು. ಆದರೆ ಡೆಲ್ಲಿಯ ಅಲೈಸ್ ಕ್ಯಾಪ್ಸಿ ಐದು ಹಾಗೂ ಏಳನೇ ಓವರ್‌ಗಳಲ್ಲಿ ಕ್ರಮವಾಗಿ ಸೋಫಿ ಡಿವೈನ್ ಹಾಗೂ ಮಂದಾನ ವಿಕೆಟ್‌ಗಳನ್ನು ಕಬಳಿಸಿದರು.
11ನೇ ಓವರ್‌ನಲ್ಲಿ ತಾರಾ ನೊರಿಸ್ ಬೌಲಿಂಗ್‌ನಲ್ಲಿ ಎಲಿಸ್ ಹಾಗೂ ದಿಶಾ ಕಸತ್ ಔಟಾದರು. 13ನೇ ಓವರ್‌ನಲ್ಲಿಯೂ ತಾರಾ
ಎರಡು ವಿಕೆಟ್ ಕಬಳಿಸಿದರು. ಶಿಖಾಪಾಂಡೆ ಬೌಲಿಂಗ್‌ನಲ್ಲಿಯೂ ಆಶಾ ಶೋಭನಾ ಔಟಾದರು. ಇದರಿಂದಾಗಿ ತಂಡವು ಕೇವಲ ಏಳು ರನ್‌ಗಳ ಅಂತರದಲ್ಲಿ ಐದು ವಿಕೆಟ್‌ಗಳು ಪತನಗೊಂಡವು.
ಈ ಕಠಿಣ ಪರಿಸ್ಥಿತಿಯಲ್ಲಿಯೂ ನೈಟ್ (34; 21ಎ) ಹಾಗೂ ಮೇಘನ್ ಶುಟ್ (ಔಟಾಗದೆ 30) ಹೋರಾಟ ಮಾಡಿದರು. ಇದರಿಂದಾಗಿ ಸೋಲಿನ ಅಂತರ ಕಡಿಮೆ ಮಾಡಲಷ್ಟೇ ಸಾಧ್ಯವಾಯಿತು!
ಸಂಕ್ಷಿಪ್ತ ಸ್ಕೋರು: ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 223 (ಮೆಗ್ ಲ್ಯಾನಿಂಗ್ 72, ಶಫಾಲಿ ವರ್ಮಾ 84, ಮರಿಜಾನೆ ಕಾಪ್ ಔಟಾಗದೆ 39, ಜೆಮಿಮಾ ರಾಡ್ರಿಗಸ್ ಔಟಾಗದೆ 22, ಹೀಥರ್ ನೈಟ್ 40ಕ್ಕೆ2) ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 163 (ಸ್ಮೃತಿ ಮಂದಾನ 35, ಎಲಿಸಾ ಪೆರಿ 31, ಹೀಥರ್ ನೈಟ್ 34, ಮೇಗನ್ ಶುಟ್ ಔಟಾಗದೆ 30, ತಾರಾ ನೊರಿಸ್ 29ಕ್ಕೆ5, ಅಲೈಸ್ ಕ್ಯಾಪ್ಸಿ 10ಕ್ಕೆ2) ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 60 ರನ್ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.