ADVERTISEMENT

IPL, WPL ಟೂರ್ನಿ ಫೈನಲ್ ಪಂದ್ಯಗಳಲ್ಲಿ ಹಲವು ಸಾಮ್ಯತೆ: ಕಾಕತಾಳೀಯ ಎಂದ ನೆಟ್ಟಿಗರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಮೇ 2024, 10:08 IST
Last Updated 27 ಮೇ 2024, 10:08 IST
<div class="paragraphs"><p>ಕೆಕೆಆರ್‌ ನಾಯಕ ಶ್ರೇಯಸ್‌ ಅಯ್ಯರ್‌ ಹಾಗೂ ಆರ್‌ಸಿಬಿ ನಾಯಕಿ ಸ್ಮೃತಿ ಮಂದಾನ</p></div>

ಕೆಕೆಆರ್‌ ನಾಯಕ ಶ್ರೇಯಸ್‌ ಅಯ್ಯರ್‌ ಹಾಗೂ ಆರ್‌ಸಿಬಿ ನಾಯಕಿ ಸ್ಮೃತಿ ಮಂದಾನ

   

ಚಿತ್ರಗಳು: ಪಿಟಿಐ, @IPL / X

ಬೆಂಗಳೂರು: ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಗೆ ಭಾನುವಾರ (ಮೇ 26) ತೆರೆ ಬಿದ್ದಿದೆ.

ADVERTISEMENT

ಟೂರ್ನಿಯ ಆರಂಭದಿಂದಲೂ ಅಮೋಘ ಪ್ರದರ್ಶನ ತೋರಿದ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌), ಫೈನಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ (ಎಸ್ಆರ್‌ಎಚ್‌) ಎದುರು ಗೆದ್ದು ಬೀಗಿದೆ. ಇದರೊಂದಿಗೆ, ಮೂರನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿದ ಸಾಧನೆ ಮಾಡಿದೆ. ಆದರೆ, ಪಂದ್ಯದ ಫಲಿತಾಂಶದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

ಈ ಪಂದ್ಯಕ್ಕೂ, ಇದೇ ವರ್ಷ ಫೆಬ್ರುವರಿ–ಮಾರ್ಚ್‌ನಲ್ಲಿ ನಡೆದಿದ್ದ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಟೂರ್ನಿಯ ಫೈನಲ್‌ ಹಣಾಹಣಿಗೂ ಸಾಕಷ್ಟು ಸಾಮ್ಯತೆಗಳಿರುವುದನ್ನು ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ.

ಐಪಿಎಲ್‌ ಫೈನಲ್‌ನಲ್ಲಿ ಕೆಕೆಆರ್‌ ಹಾಗೂ ಎಸ್ಆರ್‌ಎಚ್‌ ಮುಖಾಮುಖಿ ನಡೆಸಿದ್ದರೆ, ಡಬ್ಲ್ಯುಪಿಎಲ್‌ ಪ್ರಶಸ್ತಿಗಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಸೆಣಸಾಟ ನಡೆಸಿದ್ದವು.

ಡಬ್ಲ್ಯುಪಿಎಲ್‌ ಪ್ರಶಸ್ತಿ ಗೆದ್ದ ಆರ್‌ಸಿಬಿ ಮಹಿಳಾ ತಂಡ

ಸಾಮ್ಯತೆಗಳೇನು?

  • ಫೈನಲ್‌ ಸೋತ ತಂಡಗಳ ನಾಯಕರು ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದರು.

  • ಡಬ್ಲ್ಯುಪಿಎಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ, 18.3 ಓವರ್‌ಗಳಲ್ಲಿ 113 ರನ್‌ ಗಳಿಸಿ ಆಲೌಟಾಗಿತ್ತು. ಐಪಿಎಲ್‌ನಲ್ಲಿ ಹೈದರಾಬಾದ್‌ ತಂಡವೂ ಇದೇ ರೀತಿ ಸರ್ವಪತನ ಕಂಡಿತ್ತು.

  • ಪ್ರಶಸ್ತಿ ಜಯಿಸಿದ ಬೆಂಗಳೂರು ಹಾಗೂ ಕೋಲ್ಕತ್ತ, ಕೇವಲ 2 ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿದ್ದವು.

  • ಪ್ರಶಸ್ತಿ ಗೆದ್ದ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂದಾನ ಹಾಗೂ ಕೋಲ್ಕತ್ತ ನಾಯಕ ಶ್ರೇಯಸ್‌ ಅಯ್ಯರ್‌ ಭಾರತದವರು.

  • ಡಬ್ಲ್ಯುಪಿಎಲ್‌ನಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸಿದ್ದ ಮೆಗ್‌ ಲ್ಯಾನಿಂಗ್‌ ಹಾಗೂ ಐಪಿಎಲ್‌ನಲ್ಲಿ ಹೈದರಾಬಾದ್‌ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಆಸ್ಟ್ರೇಲಿಯನ್ನರು.

  • ಲ್ಯಾನಿಂಗ್‌ ಹಾಗೂ ಕಮಿನ್ಸ್‌ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ, ಐಸಿಸಿ ಟೂರ್ನಿಗಳ ಫೈನಲ್‌ ಪಂದ್ಯಗಳಲ್ಲಿ ಭಾರತ ತಂಡವನ್ನು ಸಲ ಸೋಲಿಸಿತ್ತು. ಲ್ಯಾನಿಂಗ್‌ ನಾಯಕಿಯಾಗಿದ್ದಾಗ ಆಸ್ಟ್ರೇಲಿಯಾ ಮಹಿಳಾ ತಂಡ 2020ರಲ್ಲಿ ಟಿ20 ವಿಶ್ವಕಪ್‌ ಮುಡಿಗೇರಿಸಿಕೊಂಡಿತ್ತು. ಕಮಿನ್ಸ್‌ ನಾಯಕತ್ವದ ಆಸ್ಟ್ರೇಲಿಯಾ 2023ರ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಹಾಗೂ 2023ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ವಿರುದ್ಧ ಗೆದ್ದಿತ್ತು.

ಈ ಸಾಮ್ಯತೆಗಳು ಕಾಕತಾಳೀಯವೇ ಸರಿ ಎಂದು ಬಹುತೇಕರು ಪ್ರತಿಕ್ರಿಯಿಸಿದ್ದಾರೆ.

ಐಪಿಎಲ್‌ ಪ್ರಶಸ್ತಿ ಗೆದ್ದ ಕೆಕೆಆರ್ ತಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.