ADVERTISEMENT

ನೋಬಾಲ್‌..ಫ್ರೀಹಿಟ್‌..ಎಬಿಡಿ..

ನೋಬಾಲ್ ವಿವಾದ ಕುರಿತು ವಿರಾಟ್ ಕೊಹ್ಲಿ ಕಿಡಿ; ಕ್ರಿಕೆಟಿಗರು ಸಿಡಿಮಿಡಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 19:00 IST
Last Updated 29 ಮಾರ್ಚ್ 2019, 19:00 IST
ಲಸಿತ್ ಮಾಲಿಂಗ ಕ್ರೀಸ್ ದಾಟಿದ್ದು –ಟ್ವಿಟರ್ ಚಿತ್ರ
ಲಸಿತ್ ಮಾಲಿಂಗ ಕ್ರೀಸ್ ದಾಟಿದ್ದು –ಟ್ವಿಟರ್ ಚಿತ್ರ   

ಬೆಂಗಳೂರು: ‘ಅಂಪೈರ್ ನೋಬಾಲ್ ಕೊಟ್ಟಿದರೆ, ಫ್ರೀ ಹಿಟ್ ಸಿಗುತ್ತಿತ್ತು. ಎಬಿಡಿ ಸಿಕ್ಸರ್‌ ಹೊಡೆಯುತ್ತಿದ್ದರು. ಆರ್‌ಸಿಬಿ ಗೆದ್ದುಬಿಡುತ್ತಿತ್ತು..’

ಗುರುವಾರ ರಾತ್ರಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳು, ಕ್ರಿಕಟಿಗರಿಂದ ಇಂತಹ ಕನವರಿಕೆಗಳು ದಾಖಲಾಗುತ್ತಿವೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್‌ ನಡುವಣದ ಐಪಿಎಲ್ ಪಂದ್ಯದ ಕೊನೆಯ ಎಸೆತದಲ್ಲಿ ಲಸಿತ್ ಮಾಲಿಂಗ ನೋಬಾಲ್ ಮಾಡಿದರೂ ಅಂಪೈರ್‌ ಎಸ್‌. ರವಿ ನೀಡದಿರುವುದು ಈಗ ಕ್ರಿಕೆಟ್‌ ಲೋಕದಲ್ಲಿ ವಿವಾದದ ರೂಪ ಪಡೆದುಕೊಂಡಿದೆ.

ಐಸಿಸಿ ಪ್ಯಾನಲ್‌ನ ಅನುಭವಿ ಅಂಪೈರ್ ಆಗಿರುವ ಸುಂದರಂ ರವಿ ಅವರಿಂದ ಇಂತಹ ಲೋಪವಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್‌ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 187 ರನ್‌ ಗಳಿಸಿತ್ತು. ಗುರಿ ಬೆನ್ನಟ್ಟಿದ್ದ ಆರ್‌ಸಿಬಿ ದಿಟ್ಟ ಹೋರಾಟ ಮಾಡಿತ್ತು.

ADVERTISEMENT

ಎಬಿ ಡಿವಿಲಿಯರ್ಸ್‌ (ಔಟಾಗದೆ 70; 41ಎಸೆತ, 4ಬೌಂಡರಿ, 6 ಸಿಕ್ಸರ್) ಮತ್ತು ವಿರಾಟ್ ಕೊಹ್ಲಿ (46; 32ಎ, 6ಬೌಂ) ಅವರಿಬ್ಬರ ಆಟದಿಂದಾಗಿ ತಂಡವು ಗೆಲುವಿನ ಹೊಸ್ತಿಲಿಗೆ ಬಂದು ನಿಂತಿತ್ತು. ಕೊನೆಯ ಒಂದು ಎಸೆತದಲ್ಲಿ ಏಳು ರನ್‌ಗಳ ಅಗತ್ಯವಿತ್ತು.

ಲಸಿತ್ ಮಾಲಿಂಗ ಹಾಕಿದ ಅಂತಿಮ ಎಸೆತವನ್ನು ಶಿವಂ ದುಬೆ ಆಡಿದರು. ರೋಹಿತ್ ಶರ್ಮಾ ಬೌಂಡರಿಲೈನ್ ಬಳಿ ಚೆಂಡು ತಡೆದು, ವಿಜಯೋತ್ಸವ ಆಚರಿಸಿದರು. ಆದರೆ ಡಗ್‌ಔಟ್‌ನಲ್ಲಿದ್ದ ವಿರಾಟ್ ಕೊಹ್ಲಿ ಮುಖದಲ್ಲಿ ಬೇಸರಕ್ಕಿಂತ ಸಿಟ್ಟು ಮನೆ ಮಾಡಿತ್ತು. ಟಿವಿ ರಿಪ್ಲೆಯಲ್ಲಿ ತೋರಿಸಿದ್ದ ನೋಬಾಲ್ ಅವರ ಸಿಟ್ಟಿಗೆ ಕಾರಣವಾಗಿತ್ತು. ಅಂಪೈರ್ ಕ್ರಮವನ್ನು ದೂರುತ್ತಲೇ ಅವರು ವಿಜಯವೇದಿಕೆಯತ್ತ ಸಾಗಿದ್ದು ಟಿವಿಯಲ್ಲಿ ನೇರಪ್ರಸಾರವಾಗಿತ್ತು.

20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 181 ರನ್‌ ಗಳಿಸಿದ ಆರ್‌ಸಿಬಿ ಸೋತಿತು. ಒಂದೊಮ್ಮೆ ಅಂಪೈರ್ ಆ ನೋಬಾಲ್ ಎಸೆತ ಘೋಷಿಸಿದ್ದರೆ, ಪಂದ್ಯ ಮತ್ತಷ್ಟು ರೋಚಕವಾಗುತ್ತಿತ್ತು. ಅಲ್ಲದೇ ಆರ್‌ಸಿಬಿಗೆ ಒಂದು ಅವಕಾಶ ಲಭಿಸುತ್ತಿತ್ತು. ಫ್ರೀಹಿಟ್‌ನಲ್ಲಿ ಸಿಕ್ಸರ್‌ ಹೊಡೆದಿದ್ದರೆ ಗೆಲುವು ಒಲಿಯಬಹುದಿತ್ತು. ಅದರಿಂದಾಗಿಯೇ ಇದು ದೊಡ್ಡ ವಿವಾದವಾಯಿತು. ಮುಂಬೈ ತಂಡದ ರೋಚಕ ಗೆಲುವು ಮತ್ತು ಆರ್‌ಸಿಬಿಯ ಸೋಲಿಗೆ ಕಾರಣವಾದ ಕೆಲವು ಪ್ರಮುಖ ಅಂಶಗಳು ‘ನೋಬಾಲ್’ ನೆರಳಿನಲ್ಲಿ ಮರೆಯಾದವು.

ಮಿಂಚಿದ ಬೂಮ್ರಾ: ಅರ್‌ಸಿಬಿಯ ನಾಲ್ಕು ವಿಕೆಟ್ ಗಳಿಸಿದ ಮಧ್ಯಮವೇಗಿ ಜಸ್‌ಪ್ರೀತ್ ಬೂಮ್ರಾ ಮುಂಬೈ ತಂಡದ ಗೆಲುವಿನ ರೂವಾರಿಯಾದರು. ಗಾಯದಿಂದ ಚೇತರಿಸಿಕೊಂಡ ನಂತರ ಅವರು ಆಡಿದ ಮೊದಲ ಪಂದ್ಯ ಇದು. ಮುಂಬೈ ತಂಡವು ಸೋಲಿನತ್ತ ಸಾಗಿದಾಗಲೆಲ್ಲ ಅವರು ನೆರವಿಗೆ ಬಂದರು.

ಆರ್‌ಸಿಬಿ ತಂಡಕ್ಕೆ ಜಯಿಸಲು ಇನಿಂಗ್ಸ್‌ನ ಕೊನೆಯ ನಾಲ್ಕು ಓವರ್‌ಗಳಲ್ಲಿ 40 ರನ್‌ಗಳ ಅಗತ್ಯವಿತ್ತು. ಆದರೆ 17ನೇ ಓವರ್‌ನಲ್ಲಿ ಬೂಮ್ರಾ ಕೇವಲ ಒಂದು ರನ್ ನೀಡಿ, ಶಿಮ್ರೊನ್ ಹೆಟ್ಮೆಯರ್ ವಿಕೆಟ್‌ ಅನ್ನೂ ಗಳಿಸಿದರು. ಹಾರ್ದಿಕ್ ಪಾಂಡ್ಯ ಹಾಕಿದ 18ನೇ ಓವರ್‌ನಲ್ಲಿ ಎಬಿಡಿ ಎರಡು ಸಿಕ್ಸರ್, ಒಂದು ಬೌಂಡರಿ ಹೊಡೆದರು. ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಎರಡು ಸಿಂಗಲ್ ಗಳಿಸಿದರು. ಇದರಿಂದಾಗಿ 18 ರನ್‌ಗಳು ಬಂದವು. 19ನೇ ಓವರ್‌ನಲ್ಲಿ ಮತ್ತೆ ದಾಳಿಗಿಳಿದ ಬೂಮ್ರಾ; ಗ್ರ್ಯಾಂಡ್‌ಹೋಮ್ ವಿಕೆಟ್‌ ಕಬಳಿಸಿದರು. ಕೇವಲ ಐದು ರನ್ ನೀಡಿದರು. ಇದರಿಂದಾಗಿ ಕೊನೆಯ ಓವರ್‌ನಲ್ಲಿ 17 ರನ್‌ಗಳ ಅಗತ್ಯವಿತ್ತು. ಮಾಲಿಂಗ ಓವರ್‌ನ ಮೊದಲ ಓವರ್‌ನಲ್ಲಿ ಶಿವಂ ದುಬೆ ಸಿಕ್ಸರ್ ಎತ್ತಿದಾಗ, ಗೆಲುವಿನ ಆಸೆ ಚಿಗುರಿತು. ಆದರೆ, ನಂತರದ ನಾಲ್ಕು ಎಸೆತಗಳಲ್ಲಿ ನಾಲ್ಕು ರನ್ ಮಾತ್ರ ಲಭಿಸಿದವು. ಇದರಿಂದಾಗಿ ಒಂದು ಎಸೆತದಲ್ಲಿ ಏಳು ರನ್ ಹೊಡೆಯುವ ಸವಾಲು ಆರ್‌ಸಿಬಿ ಮುಂದಿತ್ತು. ಅದರಲ್ಲಿ ಒಂದು ಸಿಕ್ಸರ್ ಹೊಡೆದಿದ್ದರು ಪಂದ್ಯ ಟೈ ಆಗಿರುತ್ತಿತ್ತು. ಆದರೆ, ದುಬೆಗೆ ಪ್ರಯತ್ನ ಫಲಿಸಲಿಲ್ಲ. ಮತ್ತೊಂದು ಅವಕಾಶ ಸಿಗದಿರಲು ಅಂಪೈರ್ ಕಾರಣರಾದರು.

ಕ್ರೀಡೆಯ ದೃಷ್ಟಿಯಿಂದ ಇದು ಒಳ್ಳೆಯದಲ್ಲ: ರೋಹಿತ್

‘ಪಂದ್ಯದಲ್ಲಿ ಸೋಲು–ಗೆಲುವು ಸಹಜ. ಆದರೆ ಇಂತಹ ಘಟನೆಗಳು ಕ್ರೀಡೆಯ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದಲ್ಲ’ ಎಂದು ನೋಬಾಲ್ ವಿವಾದದ ಕುರಿತು ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದರು.

ಪಂದ್ಯದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಂಪೈರ್ ಪ್ರಮಾದದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಇಂತಹ ತಪ್ಪುಗಳು ಪದೇ ಪದೇ ಆದರೆ, ಆಟದ ಸ್ವರೂಪವೇ ಬದಲಾಗಿ ಬಿಡುತ್ತದೆ’ ಎಂದು ಆಭಿಪ್ರಾಯಪಟ್ಟರು.

‘ಇಂತಹ ಲೋಪಗಳಿಂದ ಪಂದ್ಯದ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ. ಇದು ಇಡೀ ಟೂರ್ನಿಯ ದಾರಿ ತಪ್ಪಿಸುತ್ತದೆ. ಇನಿಂಗ್ಸ್‌ನ ಮಹತ್ವದ ಘಟ್ಟದಲ್ಲಿ ವೈಡ್ ಮತ್ತು ನೋಬಾಲ್‌ಗಳ ನಿರ್ಧಾರಗಳು ಅತಿ ಸೂಕ್ಷ್ಮ ಮತ್ತು ಮುಖ್ಯ. ಅದರಲ್ಲಿ ತಪ್ಪಬಾರದು’ ಎಂದರು.

‘ಬೂಮ್ರಾ, ಎಬಿಡಿ ಮತ್ತು ಕೊಹ್ಲಿ ಅವರು ಉತ್ತಮವಾಗಿ ಆಡಿದರು. ಅವರಿಂದಾಗಿ ಪಂದ್ಯವು ರೋಚಕ ಹಂತ ತಲುಪಿತ್ತು. ಇದೊಂದು ಅವಿಸ್ಮರಣೀಯ ಪಂದ್ಯ’ ಎಂದು ರೋಹಿತ್ ಹೇಳಿದರು.

ಅಂಪೈರ್‌ಗಳು ಕಣ್ಣು ತೆರೆದು ಕೆಲಸ ಮಾಡಲಿ: ಕೊಹ್ಲಿ

‘ಪ್ರತಿಷ್ಠಿತವಾದ ಕ್ರಿಕೆಟ್ ಪಂದ್ಯಗಳಲ್ಲಿ ಅಂಪೈರ್‌ಗಳು ಕಣ್ಣು ತೆರೆದುಕೊಂಡು ಕೆಲಸ ಮಾಡಬೇಕು’ ಎಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅಂಪೈರಿಂಗ್ ವಿರುದ್ಧ ಕಿಡಿ ಕಾರಿದ್ದಾರೆ.

‘ನೋಬಾಲ್ ಆಗಿರುವುದು ಬರಿಗಣ್ಣಿಗೆ ಸ್ಪಷ್ಟವಾಗಿ ಕಾಣುತ್ತಿತ್ತು. ಅದನ್ನು ಆನ್‌ಫೀಲ್ಡ್ ಅಂಪೈರ್ ಮಿಸ್ ಮಾಡಿಕೊಳ್ಳಲು ಹೇಗೆ ಸಾಧ್ಯ? ಅದರಲ್ಲೂ ಇಂತಹ ಮಹತ್ವದ ಮತ್ತು ರೋಚಕ ಘಟ್ಟದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕಲ್ಲವೇ?’ ಎಂದು ಕೊಹ್ಲಿ ಪ್ರಶ್ನಿಸಿದ್ದಾರೆ.

‘ಇಂತಹ ಲೋಪಗಳನ್ನು ತಡೆಯಬೇಕು. ಆಟಗಾರರು ತಪ್ಪು ಮಾಡಿದಾಗ ದಂಡ ಕಟ್ಟುತ್ತೇವೆ. ಆದರೆ ಇಲ್ಲಿ ಅಂಪೈರ್ ಲೋಪಕ್ಕೂ ನಾವೇ ದಂಡ ಕಟ್ಟುವಂತಾಗಿದೆ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.