ಮುಂಬೈ: ಸುಮಾರು 12 ವರ್ಷಗಳ ಹಿಂದೆ ವಿಶ್ವಕಪ್ ಫೈನಲ್‌ನಲ್ಲಿ ಆಗ ಏಷ್ಯಾದ ಎರಡು ಬಲಿಷ್ಠ ತಂಡಗಳು ಎದುರಾಗಿದ್ದವು. ಈಗ ಭಾರತ ವಿಶ್ವಕಪ್‌ನಲ್ಲಿ ಮತ್ತೊಮ್ಮೆ ಶ್ರೀಲಂಕಾ ತಂಡವನ್ನು ಎದುರಿಸಲು ಸಜ್ಜಾಗಿದೆ. ಅಂದಿನ ದಿನಕ್ಕೆ ಹೋಲಿಸಿದರೆ ಗುರುವಾರ ನಡೆಯುವ ಪಂದ್ಯ ಎರಡು ಅಸಮಾನ ತಂಡಗಳ ನಡುವಣ ಹಣಾಹಣಿಯಾಗಿ ಕಾಣುತ್ತಿದೆ.
ಒಂದೆಡೆ ಆತಿಥೇಯ ತಂಡ ಇದುವರೆಗೆ ಆಡಿದ ಆರು ಲೀಗ್ ಪಂದ್ಯಗಳಲ್ಲಿ ಎದುರಾಳಿ ತಂಡಗಳ ಮೇಲೆ ಸವಾರಿ ಮಾಡಿದೆ. ಇನ್ನೊಂದೆಡೆ, ಶ್ರೀಲಂಕಾ ಗೆದ್ದಿರುವುದಕ್ಕಿಂತ ಸೋತಿದ್ದೇ ಜಾಸ್ತಿ.
ಏಕೈಕ ಅಜೇಯ ತಂಡವಾಗಿರುವ ಭಾರತಕ್ಕೆ ಗಂಭೀರ ಸವಾಲು ಎದುರಾಗಿಲ್ಲ. ತಂಡದ ಆತ್ಮವಿಶ್ವಾಸ ಈಗ ಎತ್ತರದಲ್ಲಿದೆ. ಅದಕ್ಕಿಂತ ತನ್ನ ಸಾಮರ್ಥ್ಯ ಮತ್ತು ಕೌಶಲದ ಮೇಲಿರುವ ನಂಬಿಕೆಯೂ ಹೆಚ್ಚು ಇದೆ. ಆಸ್ಟ್ರೇಲಿಯಾ ವಿರುದ್ಧ 2 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡಾಗ ಪುಟಿದೆದ್ದ ರೀತಿ ಅಮೋಘವಾಗಿತ್ತು. ಇಂಗ್ಲೆಂಡ್ ವಿರುದ್ಧ ಲಖನೌದಲ್ಲಿ 229 ರನ್ ಗಳಿಸಿದ್ದಾಗ ಹೋರಾಟ ಎದುರಾಗಬಹುದು ಎನ್ನುವ ಸ್ಥಿತಿಯಲ್ಲಿ ಜಯ ಸಲೀಸಾಗಿಯೇ ದಾಖಲಾಗಿತ್ತು.
ಹೀಗಾಗಿ ರೋಹಿತ್ ಶರ್ಮಾ ಬಳಗವನ್ನು ಎದುರಿಸುವಾಗ ಎದುರಾಳಿ ತಂಡಗಳೂ ತಮ್ಮ ಆಟದ ಮಟ್ಟವನ್ನು ಗಮನಾರ್ಹವಾಗಿ ಎತ್ತರಿಸಬೇಕಾಗಿದೆ. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಅವಕಾಶ ಪಡೆದ ಮೊಹಮ್ಮದ್ ಶಮಿ ಅವರು ತಂಡದ ಗೆಲುವಿನಲ್ಲಿ ಮಿಂಚಿದ್ದು ಗಮನಾರ್ಹ. ಒಮ್ಮೆ ಐದರ ಗೊಂಚಲು ಸೇರಿದಂತೆ ಎರಡು ಪಂದ್ಯಗಳಿಂದ 9 ವಿಕೆಟ್. ಹೀಗಾಗಿ ಅವರ ಸ್ಥಾನ ಗಟ್ಟಿಯಾದಂತಿದೆ. ಪಾಂಡ್ಯ ತಂಡಕ್ಕೆ ಮರಳುವ ಬಗ್ಗೆ ಇದುವರೆಗೆ ಖಚಿತ ಮಾಹಿತಿಯಿಲ್ಲ.
ವಿಶ್ವಕಪ್‌ಗೆ ಮೊದಲು ಯುವ ಆಟಗಾರರಾದ ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಏಕದಿನ ಮಾದರಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಆದರೆ ನಂತರ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಮೊದಲ ಎರಡು ಪಂದ್ಯಗಳನ್ನು ಜ್ವರದಿಂದ ಕಳೆದುಕೊಂಡಿದ್ದ ಗಿಲ್ ನಂತರ ಒಂದು ಅರ್ಧಶತಕ ಮಾತ್ರ ಹೊಡೆದಿದ್ದಾರೆ. ಅವರು ವಿಕೆಟ್ ಒಪ್ಪಿಸುವ ವೇಳೆ ಹೊಡೆತದ ಆಯ್ಕೆ ನಿರಾಸೆ ಮೂಡಿಸಿತ್ತು. ಈಗ ಅವರ ಮುಂದೆ ದೊಡ್ಡ ಇನಿಂಗ್ಸ್ ಆಡಬೇಕಾದ ಸವಾಲು ಇದೆ.
ಶಾರ್ಟ್‌ಪಿಚ್ ಎಸೆತಗಳ ಎದುರು ಶ್ರೇಯಸ್ ಪರದಾಟ ಎದುರಾಳಿಗಳಿಗೆ ಅಸ್ತ್ರ ಒದಗಿಸಿದೆ. ಆರು ಇನಿಂಗ್ಸ್‌ಗಳಿಂದ ಅವರು ಬರೇ ಒಂದು ಅರ್ಧ ಶತಕ (ಪಾಕ್ ವಿರುದ್ಧ ಅಜೇಯ 53) ಹೊಡೆದಿದ್ದಾರೆ. ದೊಡ್ಡ ಇನಿಂಗ್ಸ್‌ನ ಆಡುವ ಅವಕಾಶವಿರುವಾಗ ಎಡವಿದ್ದಾರೆ. ಅವರೂ ಈಗ ಉತ್ತಮ ಇನಿಂಗ್ಸ್ ಒಂದರ ನಿರೀಕ್ಷೆಯಲ್ಲಿದ್ದಾರೆ. ಅದೂ ತವರಿನಲ್ಲಿ. ರೋಹಿತ್, ಸೂರ್ಯಕುಮಾರ್, ಶಾರ್ದೂಲ್ ಠಾಕೂರ್ ಅವರಿಗೂ ಇದು ತವರು ಮೈದಾನ.
ಒಂದು ಶತಕ, ಎರಡು ಅರ್ಧ ಶತಕ ಸೇರಿದಂತೆ 66.33 ಸರಾಸರಿಯಲ್ಲಿ 398 ರನ್ ಗಳಿಸಿರುವ ರೋಹಿತ್ ಅವರು ತವರಿನ ಅಭಿಮಾನಿಗಳೆದುರು ಸ್ಮರಣೀಯ ಇನಿಂಗ್ಸ್ ಆಡುವ ತವಕದಲ್ಲಿದ್ದಾರೆ.
ಶ್ರೀಲಂಕಾ ತಂಡವನ್ನು ಹಗುರುವಾಗಿ ಪರಿಗಣಿಸುವಂತಿಲ್ಲ. ಸಿಂಹಳೀಯರು ಹಾಲಿ ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿಲ್ಲ. ಪ್ರಮುಖ ಆಟಗಾರರು ಗಾಯಾಳಾಗಿರುವುದು ಮತ್ತು ಕೆಲವರು ಅಲಭ್ಯರಾಗಿರುವುದು ತಂಡವನ್ನು ಬಾಧಿಸಿದೆ. ತಂಡದ ಎಳೆಯ ಆಟಗಾರರು ಆತಿಥೇಯರ ಗುಣಮಟ್ಟದ ದಾಳಿಯನ್ನು ಹೇಗೆ ಎದುರಿಸುತ್ತಾರೆ ಎಂಬುದು ಕುತೂಹಲಕರ.
ಸದೀರ ಸಮರವಿಕ್ರಮ ಉತ್ತಮ ಲಯದಲ್ಲಿದ್ದು 6 ಪಂದ್ಯಗಳಿಂದ 331 ರನ್ ಕಲೆಹಾಕಿದ್ದಾರೆ. ಈ ವಿಶ್ವಕಪ್‌ನಲ್ಲಿ ಅವರೇ ತಂಡದ ಅತ್ಯಧಿಕ ರನ್ ಗಳಿಕೆದಾರ. ಗಿಲ್ ನಂತರ ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಸಹಸ್ರ ರನ್ ಗಳಿಸಿದ ಎರಡನೇ ಆಟಗಾರ ಎನಿಸಿರುವ ಪಥಮ್ ನಿಸಾಂಕ ಅವರೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ವರ್ಷ 26 ಪಂದ್ಯಗಳಲ್ಲಿ ಎರಡು ಶತಕ, 9 ಅರ್ಧ ಶತಕಗಳನ್ನು ಬಾರಿಸಿರುವ ಅವರು 48.17 ಸರಾಸರಿಯಲ್ಲಿ 1,108 ರನ್ ಗಳಿಸಿದ್ದಾರೆ. ನಾಯಕ ಕುಸಲ್ ಮೆಂಡಿಸ್ ಅವರೂ ಕಲಾತ್ಮಕ ಹೊಡೆತಗಳ ಬ್ಯಾಟರ್. ಅನುಭವಿ ಆಲ್‌ರೌಂಡರ್ ಆಂಜೆಲೊ ಮ್ಯಾಥ್ಯೂಸ್ ತಂಡಕ್ಕೆ ಮರಳಿದ್ದಾರೆ. ಹೀಗಾಗಿ ತಂಡ ಹೋರಾಟ ತೋರಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.