ದುಬೈ: ಭಾರತ ತಂಡದ ಮಧ್ಯಮವೇಗಿ ರೇಣುಕಾ ಸಿಂಗ್ ಅವರು ಐಸಿಸಿ ಟಿ20 ಕ್ರಿಕೆಟ್ ರ‍್ಯಾಂಕಿಂಗ್‌ನ ಬೌಲರ್‌ಗಳ ವಿಭಾಗದಲ್ಲಿ ಐದು ಸ್ಥಾನಗಳ ಬಡ್ತಿ ಪಡೆದಿದ್ದು, 13ನೇ ಸ್ಥಾನಕ್ಕೇರಿದ್ದಾರೆ. ಸ್ಪಿನ್ನರ್ ದೀಪ್ತಿ ಶರ್ಮಾ ಏಳನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಇಂಗ್ಲೆಂಡ್ ತಂಡದ ವಿರುದ್ಧ ಚೆಸ್ಟರ್ ಲೀ ಸ್ಟ್ರೀಟ್‌ನಲ್ಲಿ ಕಳೆದ ವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ರೇಣುಕಾ ಅವರು ನಾಲ್ಕು ಓವರ್ ಬೌಲ್ ಮಾಡಿ 23 ರನ್ ನೀಡಿದ್ದರು. ಸದ್ಯ ಅವರ ಬಳಿ 612 ರೇಟಿಂಗ್ ಪಾಯಿಂಟ್‌ಗಳಿವೆ. ಈ ಪಂದ್ಯದಲ್ಲಿ ಭಾರತ ಒಂಬತ್ತು ವಿಕೆಟ್‌ಗಳಿಂದ ಸೋಲನುಭವಿಸಿತ್ತು.
ಅಗ್ರ 10 ಮಂದಿ ಬೌಲರ್‌ಗಳ ಪಟ್ಟಿಯಲ್ಲಿ ಭಾರತದ ದೀಪ್ತಿ ಒಬ್ಬರೇ ಇದ್ದಾರೆ. ಆಲ್‌ರೌಂಡರ್‌ಗಳ ವಿಭಾಗದಲ್ಲಿ ಅವರು ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಬ್ಯಾಟರ್‌ಗಳ ವಿಭಾಗದಲ್ಲಿ ಮೂರು ಸ್ಥಾನ ಏರಿಕೆ ಕಂಡು 33ನೇ ಸ್ಥಾನದಲ್ಲಿದ್ದಾರೆ. ಈ ವಿಭಾಗದಲ್ಲಿ ವಿಕೆಟ್‌ಕೀಪರ್ ರಿಚಾ ಘೋಷ್ ನಾಲ್ಕು ಸ್ಥಾನಗಳ ಜಿಗಿತ ದಾಖಲಿಸಿ 75ನೇ ಸ್ಥಾನ ತಲುಪಿದ್ದಾರೆ.
ಸ್ಮೃತಿ ಮಂದಾನ (710 ಪಾಯಿಂಟ್ಸ್), ಶಫಾಲಿ ವರ್ಮಾ (686) ಮತ್ತು ಜೆಮಿಮಾ ರಾಡ್ರಿಗಸ್ (624) ಕ್ರಮವಾಗಿ ನಾಲ್ಕು, ಆರು ಮತ್ತು 10ನೇ ಸ್ಥಾನಗಳಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.