ADVERTISEMENT

ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆ; ರಿಕಿ ಪಾಂಟಿಂಗ್, ಆ್ಯಂಡಿ ಫ್ಲವರ್ ನಿರಾಸಕ್ತಿ

ಪಿಟಿಐ
Published 23 ಮೇ 2024, 6:58 IST
Last Updated 23 ಮೇ 2024, 6:58 IST
<div class="paragraphs"><p>ರಿಕಿ ಪಾಂಟಿಂಗ್ ಹಾಗೂ ಆ್ಯಂಡಿ ಫ್ಲವರ್</p></div>

ರಿಕಿ ಪಾಂಟಿಂಗ್ ಹಾಗೂ ಆ್ಯಂಡಿ ಫ್ಲವರ್

   

(ಪ್ರಜಾವಾಣಿ ಚಿತ್ರ)

ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗಾಗಿ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಆದರೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹಾಗೂ ಜಿಂಬಾಬ್ವೆಯ ದಿಗ್ಗಜ ಆ್ಯಂಡಿ ಫ್ಲವರ್ ನಿರಾಸಕ್ತಿಯನ್ನು ತೋರಿದ್ದಾರೆ.

ADVERTISEMENT

ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ತಮ್ಮನ್ನು ಸಂಪರ್ಕಿಸಲಾಗಿತ್ತು ಎಂದು ಖಚಿತಪಡಿಸಿರುವ ರಿಕಿ ಪಾಂಟಿಂಗ್, ಸದ್ಯ ನನ್ನ ಜೀವನಶೈಲಿಗೆ ಹೊಂದಿಕೆಯಾಗದ ಕಾರಣ ಪ್ರಸ್ತಾಪವನ್ನು ನಿರಾಕರಿಸಿದ್ದೇನೆ ಎಂದು ಹೇಳಿದ್ದಾರೆ.

ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ತರಬೇತುದಾರನ ಹುದ್ದೆಯನ್ನು ಪಾಂಟಿಂಗ್ ಹೊಂದಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ಟ್ವೆಂಟಿ-20 ತಂಡದ ಕೋಚ್ ಹುದ್ದೆಯನ್ನು ತಾತ್ಕಾಲಿಕವಾಗಿ ನಿಭಾಯಿಸಿದ್ದರು.

'ಟೀಮ್ ಇಂಡಿಯಾದ ತರಬೇತುದಾರನಾಗಲು ಇಷ್ಟಪಡುತ್ತೇನೆ. ಆದರೆ ಜೀವನದ ಇತರೆ ವಿಚಾರಗಳಾದ ಮನೆಯಲ್ಲಿ ಸ್ವಲ್ಪ ಸಮಯ ಕಳೆಯಲು ಬಯಸುತ್ತೇನೆ. ಟೀಮ್ ಇಂಡಿಯಾದೊಂದಿಗೆ ಕೆಲಸ ಮಾಡುವಾಗ ಐಪಿಎಲ್‌ನಲ್ಲೂ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ರಾಷ್ಟ್ರೀಯ ತಂಡದ ತರಬೇತುದಾರನಾಗಿ ವರ್ಷದಲ್ಲಿ 10 ಅಥವಾ 11 ತಿಂಗಳು ತಂಡದ ಜೊತೆಗಿರಬೇಕು. ಇದು ಈಗಿನ ನನ್ನ ಜೀವನಶೈಲಿಗೆ ಹೊಂದಿಕೆಯಾಗುತ್ತಿಲ್ಲ. ಸದ್ಯ ನನ್ನ ಜವಾಬ್ದಾರಿಯನ್ನು ಆನಂದಿಸುತ್ತಿದ್ದೇನೆ' ಎಂದು ಹೇಳಿದ್ದಾರೆ.

ಅರ್ಜಿ ಸಲ್ಲಿಸಿಲ್ಲ: ಫ್ಲವರ್...

ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ತರಬೇತುದಾರ ಆ್ಯಂಡಿ ಫ್ಲವರ್ ತಿಳಿಸಿದ್ದಾರೆ. 'ನಾನು ಅರ್ಜಿ ಸಲ್ಲಿಸಿಲ್ಲ. ಅರ್ಜಿ ಸಲ್ಲಿಸುವ ಇರಾದೆಯೂ ಇಲ್ಲ. ಸದ್ಯ ಫ್ರಾಂಚೈಸ್ ಕ್ರಿಕೆಟ್‌ನ ಪಾಲ್ಗೊಳ್ಳುವಿಕೆಯಿಂದ ಸಂತೋಷವಾಗಿದ್ದೇನೆ' ಎಂದು ಹೇಳಿದ್ದಾರೆ.

ಕೋಚ್ ರೇಸ್‌ನಲ್ಲಿ ಯಾರೆಲ್ಲ ?

ಮುಂದಿನ ತಿಂಗಳು ವೆಸ್ಟ್‌ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆಯಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನೊಂದಿಗೆ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಗುತ್ತಿಗೆ ಒಪ್ಪಂದ ಕೊನೆಗೊಳ್ಳಲಿದೆ. ನೂತನ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನವಾಗಿದೆ.

ದ್ರಾವಿಡ್ ಅವರ ಸ್ಥಾನಕ್ಕೆ ಎನ್‌ಸಿಎ ಮುಖ್ಯಸ್ಥ ವಿವಿಎಸ್‌ ಲಕ್ಷ್ಮಣ್‌, ಕೋಲ್ಕತ್ತ ನೈಟ್ ರೈಡರ್ಸ್ ಮೆಂಟರ್ ಗೌತಮ್ ಗಂಭೀರ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಹೆಸರುಗಳು ಕೇಳಿಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.