ದುಬೈ: ನ್ಯೂಜಿಲೆಂಡ್ ವಿರುದ್ಧ ಮುಂಬೈನಲ್ಲಿ ಕಳೆದ ವಾರ ನಡೆದ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಭಾರತದ ವಿಕೆಟ್ ಕೀಪರ್–ಬ್ಯಾಟರ್ ರಿಷಭ್ ಪಂತ್ ಅವರು ಐಸಿಸಿ ಪುರುಷರ ಟೆಸ್ಟ್ ಬ್ಯಾಟರ್‌ಗಳ ಕ್ರಮಾಂಕಪಟ್ಟಿಯಲ್ಲಿ ಐದು ಸ್ಥಾನ ಬಡ್ತಿ ಪಡೆದು ಆರನೇ ಸ್ಥಾನಕ್ಕೆ ಏರಿದ್ದಾರೆ.
ಆ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಎಡಗೈ ಬ್ಯಾಟರ್ ಪಂತ್ ಅರ್ಧ ಶತಕ ಗಳಿಸಿದ್ದರು. ಅವರು ತಮ್ಮ ಜೀವನಶ್ರೇಷ್ಠ ಐದನೇ ಸ್ಥಾನ ತಲುಪುವ ಸನಿಹ ಬಂದಿದ್ದಾರೆ. 2022ರ ಜುಲೈನಲ್ಲಿ ಈ ಆಕ್ರಮಣಕಾರಿ ಆಟಗಾರ ಐದನೇ ಸ್ಥಾನಕ್ಕೇರಿದ್ದರು.
ಯುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸರಣಿಯಲ್ಲಿ ನ್ಯೂಜಿಲೆಂಡ್ ಪರ ಉತ್ತಮ ಪ್ರದರ್ಶನ ನೀಡಿದ ಡೇರಿಲ್ ಮಿಚೆಲ್‌ಗೂ ಬಡ್ತಿ ದೊರಕಿದ್ದು, ಅಗ್ರ 10ರ ಪಟ್ಟಿಯ ಫಲಾನುಭವಿಯಾಗಿದ್ದಾರೆ.
ಎಂಟು ಸ್ಥಾನ ಜಿಗಿತ ಕಂಡಿರುವ ಮಿಚೆಲ್ ಈಗ ಏಳನೇ ಸ್ಥಾನದಲ್ಲಿ ನೆಲೆಸಿದ್ದಾರೆ. ಅವರು ಮುಂಬೈ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 82 ರನ್ ಹೊಡೆದಿದ್ದರು.
ಇಂಗ್ಲೆಂಡ್‌ನ ಜೋ ರೂಟ್ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್, ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್, ಜೈಸ್ವಾಲ್ ಎರಡರಿಂದ ನಾಲ್ಕರವರೆಗಿನ ಸ್ಥಾನಗಳನ್ನು ಪಡೆದಿದ್ದಾರೆ.
ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜ ಅವರು ಎರಡು ಸ್ಥಾನ ಬಡ್ತಿ ಪಡೆದು ಆರನೇ ಕ್ರಮಾಂಕಕ್ಕೆ ಏರಿದ್ದಾರೆ. ಅವರು ಕೊನೆಯ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದರು.
ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ, ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್, ಜಸ್‌ಪ್ರೀತ್ ಬೂಮ್ರಾ, ಪ್ಯಾಟ್ ಕಮಿನ್ಸ್ ಮತ್ತು ರವಿಚಂದ್ರನ್ ಅಶ್ವಿನ್ ಕ್ರಮವಾಗಿ ಮೊದಲ ಐದು ಸ್ಥಾನಗಳಲ್ಲಿದ್ದಾರೆ.
ವಾಷಿಂಗ್ಟನ್ ಸುಂದರ್ (46ನೇ ಸ್ಥಾನ) ಮತ್ತು ನ್ಯೂಜಿಲೆಂಡ್‌ನ ಸ್ಪಿನ್ನರ್ ಅಜಾಜ್ ಪಟೇಲ್ (22ನೇ ಸ್ಥಾನ) ಬಡ್ತಿ ಪಡೆದಿರುವ ಇತರ ಸ್ಪಿನ್ನರ್‌ಗಳಲ್ಲಿ ಪ್ರಮುಖರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.