ADVERTISEMENT

Women's T20 World Cup: ಆತಿಥೇಯ ಬಾಂಗ್ಲಾಕ್ಕೆ ಸ್ಕಾಟ್ಲೆಂಡ್ ಸವಾಲು

ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಇಂದಿನಿಂದ ; ಪಾಕಿಸ್ತಾನ–ಶ್ರೀಲಂಕಾ ಹಣಾಹಣಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 23:30 IST
Last Updated 2 ಅಕ್ಟೋಬರ್ 2024, 23:30 IST
ಬಾಂಗ್ಲಾದೇಶ ತಂಡದ ನಾಯಕಿ ನಿಜರ್ ಸುಲ್ತಾನಾ   –ಎಎಫ್‌ಪಿ ಚಿತ್ರ
ಬಾಂಗ್ಲಾದೇಶ ತಂಡದ ನಾಯಕಿ ನಿಜರ್ ಸುಲ್ತಾನಾ   –ಎಎಫ್‌ಪಿ ಚಿತ್ರ   

ದುಬೈ:  ಮಹಿಳೆಯರ ವಿಶ್ವಕಪ್ ಟಿ20 ಕ್ರಿಕೆಟ್ ಟೂರ್ನಿಯು ಗುರುವಾರ ಆರಂಭವಾಗಲಿದೆ. ಮೊದಲ ದಿನ ಎರಡು ಪಂದ್ಯಗಳು ನಡೆಯಲಿವೆ.

ಉದ್ಘಾಟನೆ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ಮುಖಾಮುಖಿಯಾಗುತ್ತಿವೆ. ಇನ್ನೊಂದು ಪಂದ್ಯದಲ್ಲಿ  ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳೂ ಹಣಾಹಣಿ ನಡೆಸಲಿವೆ.  ಈ ಟೂರ್ನಿಯು ಬಾಂಗ್ಲಾದಲ್ಲಿ ನಡೆಯಬೇಕಿತ್ತು. ಆದರೆ, ಬಾಂಗ್ಲಾದಲ್ಲಿ ಹೋರಾಟ, ಹಿಂಸಾಚಾರಗಳು ನಡೆದ ಕಾರಣ  ಕಾನೂನು, ಸುವ್ಯವಸ್ಥೆ ಹದಗೆಟ್ಟಿರುವ ಕಾರಣ ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ (ಯುಎಇ) ಸ್ಥಳಾಂತರಿಸಲಾಗಿದೆ. 

ಬಿ ಗುಂಪಿನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ನಿಜರ್ ಸುಲ್ತಾನಾ ನಾಯಕತ್ವದ ಬಾಂಗ್ಲಾ ತಂಡವು ಸ್ಕಾಟ್ಲೆಂಡ್‌ಗಿಂತ ಎಲ್ಲ ವಿಭಾಗಗಳಲ್ಲಿಯೂ ಬಲಾಢ್ಯವಾಗಿದೆ. ಕ್ಯಾಥರಿನ್ ಬ್ರೈಸ್ ಮುನ್ನಡೆಸುತ್ತಿರುವ ಸ್ಕಾಟ್ಲೆಂಡ್ ತಂಡವನ್ನು ಸುಲಭವಾಗಿ ಮಣಿಸುವ ವಿಶ್ವಾಸದಲ್ಲಿ ಬಾಂಗ್ಲಾ ಇದೆ. 

ADVERTISEMENT

ಎ ಗುಂಪಿನಲ್ಕಿ ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಸಮಬಲದ ಸಾಮರ್ಥ್ಯ ಹೊಂದಿರುವಂತೆ ಕಾಣುತ್ತಿವೆ. ಬೌಲಿಂಗ್ ಆಲ್‌ರೌಂಡರ್ ಆಗಿರುವ ಫಾತಿಮಾ ಸನಾ ಅವರು ಪಾಕ್ ತಂಡವನ್ನು ಮುನ್ನಡೆಸುವರು. ನಿದಾ ಧಾರ್, ಇರಮ್ ಜಾವೇದ್, ಗುಲ್ ಫಿರೋಜಾ ಅವರಂತಹ ಪ್ರತಿಭಾನ್ವಿತರು ತಂಡದಲ್ಲಿದ್ದಾರೆ. 

ಲಂಕಾ ತಂಡವನ್ನು ಚಾಮರಿ ಅಟಪಟ್ಟು ಮುನ್ನಡೆಸುವರು. ಅನುಷ್ಕಾ ಸಂಜೀವನಿ, ಹಾಸಿನಿ ಪರೆರಾ, ಉದೇಶಿಕಾ ಪ್ರಬೋಧಿನಿ ಅವರು ತಂಡದ ಪ್ರಮುಖ ಆಟಗಾರ್ತಿಯಾಗಿದ್ದಾರೆ. 

ಆಸ್ಟ್ರೇಲಿಯಾದ ಸವಾಲು

 ಕ್ರಿಕೆಟ್ ಕ್ಷೇತ್ರದಲ್ಲಿ ಬಲಾಢ್ಯ ತಂಡಗಳಾಗಿರುವ ಭಾರತ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳಿಗೆ ಪ್ರಶಸ್ತಿ ಮೇಲೆ ಕಣ್ಣಿದೆ. ಆದರೆ ಅದಕ್ಕಾಗಿ ಆಸ್ಟ್ರೇಲಿಯಾ ತಂಡಕ್ಕೆ ಕಡಿವಾಣ ಹಾಕುವುದು ಮುಖ್ಯವಾಗಿದೆ. 

ಇದುವರೆಗೆ ನಡೆದ ಒಂಬತ್ತು ಟೂರ್ನಿಗಳಲ್ಲಿ ಆರು ಬಾರಿ ಪ್ರಶಸ್ತಿ ಜಯಿಸಿದರು ಆಸ್ಟ್ರೇಲಿಯಾ ತಂಡವನ್ನು ಸೋಲಿಸುವುದು ಸುಲಭವಲ್ಲ.  18 ತಿಂಗಳುಗಳ ಹಿಂದೆ ಆಸ್ಟ್ರೇಲಿಯಾ ತಂಡಕ್ಕೆ ಅಲಿಸಾ ಹೀಲಿ ಅವರು ನಾಯಕಿಯಾಗಿ ನೇಮಕವಾಗಿದ್ದರು. ಮೆಗ್‌ ಲ್ಯಾನಿಂಗ್ ಅವರ ನಿವೃತ್ತಿಯ ನಂತರ ಹೀಲಿ ಹೊಣೆ ತೆಗೆದುಕೊಂಡಿದ್ದರು.  

ಆಸ್ಟ್ರೇಲಿಯಾ ತಂಡವು ಎ ಗುಂಪಿನಲ್ಲಿದೆ. ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳೂ ಇದೇ ಗುಂಪಿನಲ್ಲಿವೆ. ಇದರಿಂದಾಗಿ  ಈ ಗುಂಪಿನಲ್ಲಿ ತುರುಸಿನ ಪೈಪೋಟಿ ನಡೆಯುವ ನಿರೀಕ್ಷೆ ಗರಿಗೆದರಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.