ನವದೆಹಲಿ: ‘2009 ರಿಂದ 2011ರ ಅವಧಿ ನನ್ನ ಪಾಲಿಗೆ ತುಂಬಾ ಕಠಿಣವಾಗಿತ್ತು. ಈ ಸಮಯದಲ್ಲಿ ಅನೇಕ ಸಲ ಖಿನ್ನತೆಗೆ ಒಳಗಾಗಿದ್ದೆ. ಆತ್ಮಹತ್ಯೆಯ ಆಲೋಚನೆಯೂ ನನ್ನ ಮನದೊಳಗೆ ಮೂಡಿತ್ತು’ ಎಂದು ಕರ್ನಾಟಕದ ಅನುಭವಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಹೇಳಿದ್ದಾರೆ.
2007ರ ಟ್ವೆಂಟಿ–20 ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದಲ್ಲಿ ರಾಬಿನ್ ಆಡಿದ್ದರು.
ಬಲಗೈ ಬ್ಯಾಟ್ಸ್‌ಮನ್ ರಾಬಿನ್, 46 ಏಕದಿನ ಹಾಗೂ 13 ಟ್ವೆಂಟಿ–20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್‌ನಲ್ಲಿ ಆಡುವ ರಾಜಸ್ಥಾನ ರಾಯಲ್ಸ್ ತಂಡ ಈ ಬಾರಿಯ ಆಟಗಾರರ ಹರಾಜಿನಲ್ಲಿ ರಾಬಿನ್ ಅವರನ್ನು ₹3 ಕೋಟಿ ನೀಡಿ ಖರೀದಿಸಿತ್ತು.
ರಾಯಲ್ಸ್ ಫೌಂಡೇಷನ್ ಆಯೋಜಿಸಿದ್ದ ‘ಮೈಂಡ್ ಬಾಡಿ ಆ್ಯಂಡ್ ಸೋಲ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಬಿನ್, ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
‘ಆಗ ತಲೆದೋರಿದ್ದ ಸಮಸ್ಯೆಯಿಂದ ಪಾರಾಗುವುದು ಹೇಗೆ ಎಂಬುದರ ಬಗ್ಗೆ ಸದಾ ಆಲೋಚಿಸುತ್ತಿರುತ್ತಿದ್ದೆ. ನನ್ನ ಜೀವನದಲ್ಲೇ ಯಾಕೆ ಹೀಗಾಗುತ್ತಿದೆ ಎಂಬುದನ್ನು ನೆನೆದು ರೋಧಿಸುತ್ತಿದ್ದೆ. ನನ್ನ ಬದುಕು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಅರಿವೇ ಇರಲಿಲ್ಲ’ ಎಂದಿದ್ದಾರೆ.
‘ನೆಟ್ಸ್‌ನಲ್ಲಿ ಸಾಕಷ್ಟು ಬೆವರು ಸುರಿಸುತ್ತಿದ್ದೆ. ಕಠಿಣ ತಾಲೀಮು ನಡೆಸಿದರೂ ಪಂದ್ಯದ ವೇಳೆ ರನ್ ಗಳಿಸಲು ಪರದಾಡುತ್ತಿದ್ದೆ.ಆ ದಿನಗಳಲ್ಲಿ ಕೊಠಡಿಯಿಂದ ಹೊರಗೆ ಓಡಿ ಹೋಗಿ ಮನೆಯ ಬಾಲ್ಕನಿಯಿಂದ ಕೆಳಗೆ ಜಿಗಿದು ಬಿಡೋಣ ಎಂದು ಅನಿಸುತ್ತಿತ್ತು. ಆದರೆ ಯಾವುದೊ ಅಗೋಚರ ಶಕ್ತಿಯೊಂದು ನನ್ನನ್ನು ತಡೆದು ನಿಲ್ಲಿಸುತ್ತಿತ್ತು. ಕ್ರಮೇಣ ಆ ಆಲೋಚನೆ ಮನದಿಂದ ದೂರ ಸರಿಯಿತು. ಇದಕ್ಕೆ ನೆರವಾಗಿದ್ದು ಕ್ರಿಕೆಟ್’ ಎಂದು ಅವರು ತಿಳಿಸಿದ್ದಾರೆ.
‘ನನ್ನನ್ನು ನಾನು ಅರ್ಥಮಾಡಿಕೊಳ್ಳಲು ಶುರು ಮಾಡಿದೆ. ತಪ್ಪುಗಳನ್ನು ಒಪ್ಪಿಕೊಳ್ಳುವ ಗುಣ ಮೈಗೂಡಿಸಿಕೊಂಡೆ. ಸೋಲುಗಳನ್ನೆಲ್ಲಾ ಗೆಲುವಿನ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುವುದನ್ನು ಕಲಿತೆ. ಬಳಿಕ ನನ್ನ ಜೀವನದಲ್ಲಿ ಮಹತ್ವದ ಬದಲಾವಣೆಗಳಾದವು. ಕುಟುಂಬದವರು ಹಾಗೂ ಆತ್ಮೀಯರು ನನ್ನ ಬೆನ್ನಿಗೆ ನಿಂತರು’ ಎಂದು ನುಡಿದಿದ್ದಾರೆ.
34 ವರ್ಷ ವಯಸ್ಸಿನ ರಾಬಿನ್, 2014–15ರ ರಣಜಿ ಋತುವಿನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದರು. 2015ರ ಬಳಿಕ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ.
‘ಸೋಲು ಮತ್ತು ಗೆಲುವು ಜೀವನದ ಅವಿಭಾಜ್ಯ ಅಂಗಗಳು. ಇವುಗಳನ್ನು ಸಮಾನವಾಗಿ ಸ್ವೀಕರಿಸಿ ಮುಂದಡಿ ಇಡಬೇಕು ಎಂಬುದು ನನಗೆ ತಡವಾಗಿ ಮನದಟ್ಟಾಯಿತು’ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.