ಇಂದೋರ್: ಮೂರು ವರ್ಷಗಳ ನಂತರ ಶತಕ ದಾಖಲಿಸಿದ ರೋಹಿತ್ ಶರ್ಮಾ ಮತ್ತು ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ ಎರಡನೇ ಬಾರಿ ನೂರರ ಗಡಿ ದಾಡಿದ ಶುಭಮನ್ ಗಿಲ್ ಭಾರತ ತಂಡಕ್ಕೆ ಕ್ಲೀನ್‌ಸ್ವೀಪ್ ಕಾಣಿಕೆ ನೀಡಿದರು.
ಇದರೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿತು. ಇಲ್ಲಿಯ ಹೋಳ್ಕರ್ ಮೈದಾನದಲ್ಲಿ ಮಂಗಳವಾರ ನಡೆದ ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವು 90 ರನ್‌ಗಳಿಂದ ಜಯಿಸಿತು.
ಟಾಸ್ ಗೆದ್ದ ಕಿವೀಸ್ ಬಳಗವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಆತಿಥೇಯ ತಂಡದ ನಾಯಕ ರೋಹಿತ್ (101ರನ್) ಮತ್ತು ಶುಭಮನ್ (112ರನ್) ಅವರು ಮೊದಲ ವಿಕೆಟ್‌ಗೆ 212 ರನ್ ಸೇರಿಸಿ ನ್ಯೂಜಿಲೆಂಡ್ ಯೋಜನೆಯನ್ನು ವಿಫಲಗೊಳಿಸಿದರು. ಇದರಿಂದಾಗಿ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 385 ರನ್ ಗಳಿಸಿತು. ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು 41.2 ಓವರ್‌ಗಳಲ್ಲಿ 295 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ (138; 100ಎ) ಅವರ ಹೋರಾಟ ವ್ಯರ್ಥವಾಯಿತು. ಈ ಪಂದ್ಯದಲ್ಲಿ ಒಟ್ಟು 680 ರನ್‌ಗಳು ಹರಿದವು.
ರೋಹಿತ್–ಗಿಲ್ ಜೊತೆಯಾಟ: ಆರಂಭಿಕ ಜೋಡಿ ರೋಹಿತ್ ಮತ್ತು ಗಿಲ್ ಅಬ್ಬರಕ್ಕೆ ಎದುರಾಳಿ ಬೌಲರ್‌ಗಳು ಬಸವಳಿದರು. ಈ ಜೋಡಿಯು 156 ಎಸೆತಗಳಲ್ಲಿ 212 ರನ್ ಸೇರಿಸಿದರು.
ರೋಹಿತ್ 2020ರ ಜನವರಿಯಲ್ಲಿ ಶತಕ ಗಳಿಸಿದ್ದರು. ಅದರ ನಂತರ ಮೂರಂಕಿ ಮೊತ್ತ ಮುಟ್ಟಿದ್ದು ಇಲ್ಲಿಯೇ. ಅವರಿಗಿಂತಲೂ ಹೆಚ್ಚು ವೇಗದ ಆಟವಾಡಿದ ಗಿಲ್ ಅಬ್ಬರಿಸಿದರು. ಇದೇ ಸರಣಿಯ ಮೊದಲ ಪಂದ್ಯದಲ್ಲಿ ಅವರು ದ್ವಿಶತಕ ಗಳಿಸಿದ್ದರು.
ಆದರೆ 27ನೇ ಓವರ್‌ನಲ್ಲಿ ರೋಹಿತ್ ಮತ್ತು 28ನೇ ಓವರ್‌ನಲ್ಲಿ ಗಿಲ್ ಔಟಾದರು. ಈ ಹಂತದಲ್ಲಿ ಇನಿಂಗ್ಸ್ ಮೇಲೆ ಹಿಡಿತ ಸಾಧಿಸಲು ಕಿವೀಸ್ ಬೌಲರ್‌ಗಳು ಪ್ರಯತ್ನಿಸಿದರು. ಇದರಿಂದಾಗಿ ತಂಡದ ಮೊತ್ತವು 300ರ ಗಡಿ ಮುಟ್ಟುವ ಮುನ್ನವೇ ವಿರಾಟ್ (36), ಇಶಾನ್ ಮತ್ತು ಸೂರ್ಯಕುಮಾರ್ ಪೆವಿಲಿಯನ್‌ಗೆ ಮರಳಿದರು.
ಆದರೆ ಹಾರ್ದಿಕ್ ಪಾಂಡ್ಯ ಮಾತ್ರ ಬೌಲರ್‌ಗಳ ಬೆವರಿಳಿಸಿದರು. ಮೂರು ಸಿಕ್ಸರ್ ಮತ್ತು ಮೂರು ಬೌಂಡರಿಗಳನ್ನು ಬಾರಿಸಿದ ಅವರು 38 ಎಸೆತಗಳಲ್ಲಿ 54 ರನ್ ಗಳಿಸಿದರು. ಶಾರ್ದೂಲ್ ಠಾಕೂರ್ ಕೂಡ 25 ರನ್‌ಗಳ ಕಾಣಿಕೆ ನೀಡಿದರು.
ಕಾನ್ವೆ–ಹೆನ್ರಿ ಶತಕದ ಜೊತೆಯಾಟ: ಬೌಲಿಂಗ್‌ನಲ್ಲಿಯೂ ಮಿಂಚಿದ ಹಾರ್ದಿಕ್ ನ್ಯೂಜಿಲೆಂಡ್ ತಂಡವು ಖಾತೆಯ ತೆರೆಯುವ ಮುನ್ನವೇ ಮೊದಲ ವಿಕೆಟ್ ಉರುಳಿಸಿದರು. ಆದರೆ ಕಾನ್ವೆ ಏಕಾಗ್ರತೆ ಭಂಗ ಬರಲಿಲ್ಲ. ಅವರು ಅವರು ಎರಡನೇ ವಿಕೆಟ್‌ಗೆ ಹೆನ್ರಿ ನಿಕೊಲ್ಸ್ ಅವರೊಂದಿಗಿನ ಜೊತೆಯಾಟದಲ್ಲಿ 106 ರನ್ ಸೇರಿಸಿದರು. ಡೆರಿಲ್ ಮಿಚೆಲ್ ಜೊತೆಗೆ ಮೂರನೇ ವಿಕೆಟ್‌ಗೆ 78 ರನ್ ಸೇರಿಸಿದರು. ಆದರೆ ಅವರ ಪ್ರಯತ್ನಗಳಿಗೆ ಆತಿಥೇಯ ಬೌಲರ್‌ಗಳು ತಡೆಯೊಡ್ಡಿದರು.
ಶಾರ್ದೂಲ್ ಠಾಕೂರ್ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ತಲಾ ಮೂರು ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ ಮೊದಲ ಓವರ್‌ನಲ್ಲಿಯೇ ವಿಕೆಟ್ ಗಳಿಸಿ ಮಿಂಚಿದರು. ಯಜುವೇಂದ್ರ ಚಾಹಲ್ ಮತ್ತು ಉಮ್ರಾನ್ ಮಲಿಕ್ ಕೂಡ ತಲಾ ಒಂದು ವಿಕೆಟ್ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.