ADVERTISEMENT

ನೆಟ್ಸ್‌ನಲ್ಲಿ ಬ್ಯಾಟರ್‌ಗಳಿಗೆ ‍ಪಾಠ

ರವೀಂದ್ರ ಜಡೇಜ ಫಿಟ್; ಪ್ರಸಿದ್ಧಕೃಷ್ಣ ಬೌಲಿಂಗ್ ಮೇಲೆ ವಿಶೇಷ ನಿಗಾ

ರೋಶನ್‌ ತ್ಯಾಗರಾಜನ್‌
Published 30 ಡಿಸೆಂಬರ್ 2023, 19:24 IST
Last Updated 30 ಡಿಸೆಂಬರ್ 2023, 19:24 IST
ಶನಿವಾರ ಭಾರತ ತಂಡದ ಅಭ್ಯಾಸದ ಸಂದರ್ಭದಲ್ಲಿ ಬೌಲರ್ ಪ್ರಸಿದ್ಧ ಕೃಷ್ಣ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಮಾತುಕತೆ   –ಪಿಟಿಐ ಚಿತ್ರ
ಶನಿವಾರ ಭಾರತ ತಂಡದ ಅಭ್ಯಾಸದ ಸಂದರ್ಭದಲ್ಲಿ ಬೌಲರ್ ಪ್ರಸಿದ್ಧ ಕೃಷ್ಣ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಮಾತುಕತೆ   –ಪಿಟಿಐ ಚಿತ್ರ   

ಸೆಂಚುರಿಯನ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣದ ಮೊದಲ ಟೆಸ್ಟ್ ಪಂದ್ಯಕ್ಕೆ ಶನಿವಾರ ಕೊನೆಯ ದಿನವಾಗಬೇಕಿತ್ತು. ಆದರೆ ಈ ದಿನವು ಅಭ್ಯಾಸಕ್ಕೆ ಮೀಸಲಾಯಿತು.

ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗವು ಮೂರೇ ದಿನಗಳಲ್ಲಿ ಸೋತಿತ್ತು. ಶನಿವಾರ ಬೆಳಿಗ್ಗೆ ತಂಡದ ಆಯ್ದ ಆಟಗಾರರ ತಾಲೀಮು ನಡೆಸಲು ವ್ಯವಸ್ಥಾಪಕರು ನಿರ್ಧರಿಸಿದರು. ಅದರಿಂದಾಗಿ ಬೆಳಗಿನ ಚುಮುಚುಮು ಚಳಿಯಲ್ಲಿ ಮೂರು ಗಂಟೆಗಳ ಅವಧಿಯ ತಾಲೀಮು ನಡೆಯಿತು.

ಈ ಅಭ್ಯಾಸದಲ್ಲಿ ನಾಯಕ ರೋಹಿತ್ ಶರ್ಮಾ ಮುಂಚೂಣಿಯಲ್ಲಿದ್ದರು. ಅವರೊಂದಿಗೆ 15 ಮಂದಿ ನೆರವು ಸಿಬ್ಬಂದಿ ಕೂಡ ಇದ್ದರು. ರವೀಂದ್ರ ಜಡೇಜ, ಆರ್. ಅಶ್ವಿನ್, ಶಾರ್ದೂಲ್ ಠಾಕೂರ್, ಯಶಸ್ವಿ ಜೈಸ್ವಾಲ್, ಮುಕೇಶ್ ಕುಮಾರ್, ಪ್ರಸಿದ್ಧ ಕೃಷ್ಣ, ಅಭಿಮನ್ಯು ಈಶ್ವರನ್ ಮತ್ತು ಕೆ.ಎಸ್. ಭರತ್  ಹಾಜರಿದ್ದರು.

ADVERTISEMENT

ಆಲ್‌ರೌಂಡರ್  ಜಡೇಜ, ಗುರುವಾರದ ನೆಟ್ಸ್‌ನಲ್ಲಿ  ಬೌಲಿಂಗ್ ಮತ್ತು ಫೀಲ್ಡಿಂಗ್‌ ಅಭ್ಯಾಸ ಮಾಡಿದ್ದರು. ಇವತ್ತು ಅವರು ಮತ್ತು ಅಶ್ವಿನ್ ಹೆಚ್ಚು ಬೌಲಿಂಗ್ ಮಾಡಲಿಲ್ಲ. ಆದರೆ ಬ್ಯಾಟಿಂಗ್‌ನಲ್ಲಿ ಹೆಚ್ಚು ಹೊತ್ತು ಬೆವರಿಳಿಸಿದರು.  ಬ್ಯಾಟಿಂಗ್ ವಿಭಾಗದ ಲೋಪಗಳನ್ನು ತಿದ್ದುವಲ್ಲಿ ಹೆಚ್ಚು ಹೊತ್ತು ವಿನಿಯೋಗವಾಯಿತು.

ವೇಗಿಗಳಾದ ಮುಕೇಶ್ ಕುಮಾರ್ ಮತ್ತು  ಪ್ರಸಿದ್ಧಕೃಷ್ಣ ಬೌಲಿಂಗ್‌ ಅಭ್ಯಾಸದಲ್ಲಿ ಹೆಚ್ಚು ಹೊತ್ತು ತೊಡಗಿಸಿಕೊಂಡರು. ಈಚೆಗೆ ನಡೆದ ನಿಗದಿಯ ಓವರ್‌ಗಳ ಸರಣಿಯಲ್ಲಿ ಉತ್ತಮ ಲಯದಲ್ಲಿದ್ದ ಮುಕೇಶ್ ಅವರ ಎಸೆತಗಳನ್ನು ರೋಹಿತ್ ಎದುರಿಸಿದರು. ಮುಕೇಶ್ ಅವರು ತಮ್ಮ ಕೆಲವು ಬೌನ್ಸರ್‌ಗಳಿಂದ ರೋಹಿತ್ ಅವರನ್ನೂ ಚಕಿತಗೊಳಿಸಿದರು.

ಕರ್ನಾಟಕದ ಪ್ರಸಿದ್ಧ ಕೃಷ್ಣ  ಅವರ ಅಭ್ಯಾಸದ ಮೇಲೆ ಬೌಲಿಂಗ್ ಕೋಚ್ ಪಾರಸ್‌ ಮಾಂಬ್ರೆ ವಿಶೇಷ ನಿಗಾ ವಹಿಸಿದ್ದರು. ನಂತರ ಪಾರಸ್ ಅವರು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೂ ದೀರ್ಘ ಮಾತುಕತೆ ನಡೆಸಿದರು. ದ್ರಾವಿಡ್ ಕೂಡ ನೆಟ್ಸ್‌ನಲ್ಲಿ ಒಂದಷ್ಟು ಬೌಲಿಂಗ್ ಅಭ್ಯಾಸ ನಡೆಸಿದರು.

ಪ್ರಸಿದ್ಧ ಅವರ ಎಸೆತಗಳು ನೆಲಸ್ಪರ್ಶ ಮಾಡುತ್ತಿದ್ದ ಜಾಗ, ರನ್‌ಅಪ್ ಮತ್ತು ಶೈಲಿಗಳ ಸುಧಾರಣೆಯಲ್ಲಿ ಕುರಿತು ಪಾರಸ್ ಕೆಲವು ಸಲಹೆಗಳನ್ನು ನೀಡುತ್ತಿರುವುದು ಸ್ಪಷ್ಟವಾಗಿತ್ತು. ಸುಮಾರು ಒಂದು ಗಂಟೆ ಪ್ರಸಿದ್ಧ ಅವರ ತಾಲೀಮು ನಡೆಯಿತು.

ಪಾರಸ್ ಅವರು ಅಶ್ವಿನ್ ಜೊತೆಗೂ ಒಂದಿಷ್ಟು ಹೊತ್ತು ನೆಟ್ಸ್‌ನಲ್ಲಿ ಸಮಯ ಕಳೆದರು.  ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಅವರು ಅಶ್ವಿನ್ ಬ್ಯಾಟಿಂಗ್ ಬಗ್ಗೆ ಹೆಚ್ಚು ಒತ್ತು ನೀಡಿದರು. ಮೊದಲ ಪಂದ್ಯದಲ್ಲಿ ಅವರು ಕೆಟ್ಟ ಹೊಡೆತವಾಡಿ ಔಟಾಗಿದ್ದರು.

ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಕೂಡ ಅಭ್ಯಾಸ ನಡೆಸಿದರು. ಆದರೆ ಅವರ ಆಟದಲ್ಲಿ ಆತ್ಮವಿಶ್ವಾಸದ ಸೆಳಕು ಇರಲಿಲ್ಲ. ಕೆಲವು ಎಸೆತಗಳು ಅವರ ಶರೀರಕ್ಕೂ ತಾಗಿ ಹೋದವು. ತಮ್ಮ ಅಭ್ಯಾಸದ ನಂತರ ಯಶಸ್ವಿ ಅವರು ದ್ರಾವಿಡ್ ಜೊತೆಗೆ ಸ್ವಲ್ಪ ಹೊತ್ತು ಮಾತುಕತೆ ನಡೆಸಿದರು.

ಇನ್ನೊಂದೆಡೆ ರೋಹಿತ್ ಸುಮಾರು 20 ನಿಮಿಷ ಬ್ಯಾಟಿಂಗ್ ಅಭ್ಯಾಸ ನಡೆಸಿದ ನಂತರ ಉಳಿದೆಲ್ಲ ಆಟಗಾರರ ತಾಲೀಮನ್ನು ಹತ್ತಿರದಿಂದ ಗಮನಿಸುವಲ್ಲಿ ನಿರತರಾಗಿದ್ದರು.

ಉಭಯ ತಂಡಗಳ ನಡುವಣ ಎರಡನೇ ಟೆಸ್ಟ್ ಜನವರಿ 3ರಿಂದ ನ್ಯೂಲ್ಯಾಂಡ್ಸ್‌ನಲ್ಲಿ ನಡೆಯಲಿದೆ.

ರವೀಂದ್ರ ಜಡೇಜ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್  –ಪಿಟಿಐ ಚಿತ್ರ

ಜೆರಾಲ್ಡ್ ಅಲಭ್ಯ ಸೆಂಚುರಿಯನ್

ದಕ್ಷಿಣ ಆಫ್ರಿಕಾ ತಂಡದ ಬೌಲರ್ ಜೆರಾಲ್ಡ್ ಕೊಟ್ಙಿಯಾ ಅವರು ಸೊಂಟದ ನೋವಿನಿಂದ ಬಳಲುತ್ತಿದ್ದು ಎರಡನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. 23 ವರ್ಷದ ಮೊದಲ ಪಂದ್ಯದಲ್ಲಿ ಆಡುವಾಗಲೇ ಸೊಂಟದಲ್ಲಿ ನೋವು ಮತ್ತು ಉರಿಯೂತ ಅನುಭವಿಸಿದ್ದರು. ಅದು ಉಲ್ಬಣಿಸಿದ್ದರಿಂದ ಅವರು ವಿಶ್ರಾಂತಿಗೆ ತೆರಳಿದ್ದಾರೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.