ADVERTISEMENT

ಧೋನಿಯಿಂದ ಎಲ್ಲವನ್ನೂ ಕಲಿಯುತ್ತಿದ್ದೇವೆ: ರೋಹಿತ್‌ ಶರ್ಮಾ

ಏಷ್ಯಾಕಪ್‌ನಲ್ಲಿ ಭಾರತಕ್ಕೆ ಪ್ರಶಸ್ತಿ ಗೆದ್ದುಕೊಟ್ಟ ರೋಹಿತ್ ಶರ್ಮಾ ಮನದಾಳ

ಪಿಟಿಐ
Published 29 ಸೆಪ್ಟೆಂಬರ್ 2018, 19:58 IST
Last Updated 29 ಸೆಪ್ಟೆಂಬರ್ 2018, 19:58 IST
ಭಾರತ ತಂಡದ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು -ಎಪಿ/ಪಿಟಿಐ ಚಿತ್ರ
ಭಾರತ ತಂಡದ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು -ಎಪಿ/ಪಿಟಿಐ ಚಿತ್ರ   

ದುಬೈ: ‘ಕ್ರಿಕೆಟ್‌ ಲೋಕ ಕಂಡ ಶ್ರೇಷ್ಠ ನಾಯಕರಲ್ಲಿ ಮಹೇಂದ್ರ ಸಿಂಗ್‌ ಧೋನಿ ಕೂಡಾ ಒಬ್ಬರು. ಪಂದ್ಯದ ವೇಳೆ ನಮ್ಮಲ್ಲಿ ಸಂದೇಹಗಳು ಮೂಡಿದರೆ ಅವುಗಳನ್ನು ಧೋನಿ ಬಳಿ ಹೇಳಿಕೊಳ್ಳುತ್ತೇವೆ. ಅವರು ಎಲ್ಲವನ್ನೂ ಪರಿಹರಿಸುತ್ತಾರೆ. ಅವರಿಂದ ನಾವು ಎಲ್ಲಾ ವಿಷಯಗಳನ್ನು ಕಲಿಯುತ್ತಿದ್ದೇವೆ’ ಎಂದು ಭಾರತ ತಂಡದ ನಾಯಕ ರೋಹಿತ್‌ ಶರ್ಮಾ, ಧೋನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ರಾತ್ರಿ ನಡೆದಿದ್ದ ಏಷ್ಯಾಕಪ್‌ ಏಕದಿನ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ 3 ವಿಕೆಟ್‌ಗಳಿಂದ ಬಾಂಗ್ಲಾದೇಶವನ್ನು ಮಣಿಸಿ ಏಳನೇ ಬಾರಿ ಕಿರೀಟ ಮುಡಿಗೇರಿಸಿಕೊಂಡಿತ್ತು. ಅಂತಿಮ ಓವರ್‌ನಲ್ಲಿ ರೋಹಿತ್‌ ಬಳಗದ ಗೆಲುವಿಗೆ ಆರು ರನ್‌ಗಳು ಬೇಕಿದ್ದವು. ಕುಲದೀಪ್‌ ಯಾದವ್‌ ಮತ್ತು ಕೇದಾರ್‌ ಜಾಧವ್‌ ದಿಟ್ಟ ಆಟ ಆಡಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ಪಂದ್ಯದ ನಂತರ ಮಾತನಾಡಿದ ರೋಹಿತ್‌ ‘ತಂಡದಲ್ಲಿರುವ ಎಲ್ಲರಿಗೂ ಧೋನಿ ಪ್ರೇರಣೆ. ಎಂತಹುದೇ ಪರಿಸ್ಥಿತಿಯಲ್ಲೂ ಅವರು ಒತ್ತಡಕ್ಕೆ ಒಳಗಾಗುವುದಿಲ್ಲ. ಎಲ್ಲವನ್ನೂ ಶಾಂತ ಚಿತ್ತದಿಂದಲೇ ನಿಭಾಯಿಸುವ ಅವರ ಗುಣವನ್ನು ನಾನು ಮೈಗೂಡಿಸಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ.

ADVERTISEMENT

‘ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕರೆ ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ. ಸವಾಲಿಗೆ ಅಂಜಿ ಓಡಿಹೋಗುವ ಸ್ವಭಾವ ನನ್ನದಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವವನು ನಿಜವಾದ ನಾಯಕ. ಟೂರ್ನಿಗೂ ಮುನ್ನ ತಂಡದ ಎಲ್ಲಾ ಆಟಗಾರರ ಜೊತೆ ಮಾತನಾಡಿದ್ದೆ. ಎಲ್ಲರಿಗೂ ಅವಕಾಶ ನೀಡುವ ಭರವಸೆ ನೀಡಿದ್ದೆ. ಆ ಮೂಲಕ ಎಲ್ಲರಲ್ಲೂ ಹೊಸ ಉತ್ಸಾಹ ತುಂಬಲು ಪ್ರಯತ್ನಿಸಿದ್ದೆ’ ಎಂದೂ ನುಡಿದಿದ್ದಾರೆ.

‘ರವೀಂದ್ರ ಜಡೇಜ ಈ ಟೂರ್ನಿಯಲ್ಲಿ ಆಲ್‌ರೌಂಡ್‌ ಆಟ ಆಡಿದರು. ಆ ಮೂಲಕ ಏಕದಿನ ಮಾದರಿಯಲ್ಲಿ ಆಡುವ ಸಾಮರ್ಥ್ಯ ತನ್ನಲ್ಲಿ ಇನ್ನೂ ಇದೆ ಎಂಬುದನ್ನು ನಿರೂಪಿಸಿದ್ದಾರೆ. ತಂಡದಿಂದ ಹೊರಗಿಟ್ಟಾಗ ಜಡೇಜ ಎದೆಗುಂದಲಿಲ್ಲ. ಬದಲಿಗೆ ಇನ್ನಷ್ಟು ಕಠಿಣ ಪರಿಶ್ರಮದಿಂದ ಹೊಸ ತಂತ್ರಗಳನ್ನು ಕಲಿತು ತಂಡಕ್ಕೆ ಮರಳಿದರು. ಅವರಂತೆ ಎಲ್ಲರೂ ಹೋರಾಟ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ರೋಹಿತ್‌ ಕಿವಿಮಾತು ಹೇಳಿದರು.

ಸೋತರೂ ಮನಗೆದ್ದ ಬಾಂಗ್ಲಾ: ಫೈನಲ್‌ನಲ್ಲಿ ಭಾರತಕ್ಕೆ ಕಠಿಣ ಪೈಪೋಟಿ ನೀಡಿದ ಬಾಂಗ್ಲಾದೇಶ ತಂಡದ ಕುರಿತು ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

ಬಾಂಗ್ಲಾದೇಶದ ಮಾಧ್ಯಮಗಳು ಮಷ್ರಫೆ ಮೊರ್ತಜ ಬಳಗದ ಹೋರಾಟ ಮನೋಭಾವವನ್ನು ಕೊಂಡಾಡಿವೆ.

700ನೇ ಜಯದ ಮೈಲಿಗಲ್ಲು ದಾಟಿದ ಭಾರತ
ಬಾಂಗ್ಲಾದೇಶ ವಿರುದ್ಧ ಶನಿವಾರ ಗಳಿಸಿದ ಜಯದೊಂದಿಗೆ ಭಾರತ ತಂಡ ಎಲ್ಲ ಮಾದರಿಗಳಲ್ಲಿ ಒಟ್ಟು 700 ಅಂತರರಾಷ್ಟ್ರೀಯ ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿತು. ಈ ಮಹತ್ವದ ಮೈಲು ಗಲ್ಲು ದಾಟಿದ ಮೂರನೇ ತಂಡ ಎಂಬ ಖ್ಯಾತಿಯನ್ನೂ ತನ್ನದಾಗಿಸಿ ಕೊಂಡಿತು.

ಭಾರತ ಒಟ್ಟು 1579 ಪಂದ್ಯ ಗಳನ್ನು ಆಡಿದ್ದು 611ರಲ್ಲಿ ಸೋತಿದೆ. 216 ಪಂದ್ಯಗಳು ಡ್ರಾ ಮತ್ತು 10 ಪಂದ್ಯಗಳು ಟೈ ಆಗಿವೆ. 42 ಪಂದ್ಯಗಳು ಫಲಿತಾಂಶ ಇಲ್ಲದೆ ಮುಗಿದಿವೆ.

ಆಸ್ಟ್ರೇಲಿಯಾ, ಹೆಚ್ಚು ಪಂದ್ಯ ಗಳನ್ನು ಗೆದ್ದ ತಂಡಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದೆ. ಆ ತಂಡ 1834 ಪಂದ್ಯಗಳನ್ನು ಆಡಿದ್ದು 995ರಲ್ಲಿ ಗೆಲುವು ಸಾಧಿಸಿದೆ. 583ರಲ್ಲಿ ಸೋತಿದೆ. ಎರಡನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ 1824 ಪಂದ್ಯಗಳ ಪೈಕಿ 767ರ‌ಲ್ಲಿ ಗೆಲುವು ದಾಖಲಿಸಿದೆ. 675ರಲ್ಲಿ ಸೋತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.