ADVERTISEMENT

ದೊಡ್ಡ ಬಿರುಕು, ಟಿ–20ಗೆ ಯೋಗ್ಯವಲ್ಲ: ಅಮೆರಿಕ ಕ್ರಿಕೆಟ್‌ ಪಿಚ್‌ಗಳ ಬಗ್ಗೆ ಆತಂಕ

ಪಿಟಿಐ
Published 6 ಜೂನ್ 2024, 5:19 IST
Last Updated 6 ಜೂನ್ 2024, 5:19 IST
   

ನ್ಯೂಯಾರ್ಕ್: ತೋಳಿನ ಗಾಯಕ್ಕೆ ತುತ್ತಾಗಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭಾನುವಾರ ಪಾಕಿಸ್ತಾನ ಎದುರಿನ ಪಂದ್ಯದ ವೇಳೆಗೆ ಸುಧಾರಿಸಿಕೊಳ್ಳುವ ನಿರೀಕ್ಷೆ ಇದೆ.

ಆದರೆ, ರೋಹಿತ್ ಶರ್ಮಾ ಗಾಯಗೊಂಡ ನ್ಯೂಯಾರ್ಕ್‌ನ ನಾಸೌ ಕೌಂಟಿ ಪಿಚ್ ಬಗ್ಗೆ ಆಟಗಾರರಲ್ಲಿ ಆತಂಕ ಮನೆ ಮಾಡಿದೆ. ಪಿಚ್‌ನಲ್ಲಿ ದೊಡ್ಡ ಬಿರುಕುಗಳಿರುವುದರಿಂದ ಎಲ್ಲ ತಂಡಗಳ ಆಟಗಾರರು ಚಿಂತಿತರಾಗಿದ್ದಾರೆ. ಇದೇ ಪಿಚ್‌ನಲ್ಲಿ ಬುಧವಾರ ನಡೆದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೇಗವಾಗಿ ಬಂದ ಚೆಂಡು ನಿರೀಕ್ಷಿತ ಮಟ್ಟದಲ್ಲಿ ಪುಟಿಯದ ಕಾರಣ ರೋಹಿತ್ ಶರ್ಮಾಗೆ ಬಡಿದಿತ್ತು.37 ಎಸೆತಗಳಿಂದ 52 ರನ್ ಗಳಿಸಿದ್ದ ಅವರು ನೋವಿನಿಂದ ಮೈದಾನದಿಂದ ಹೊರಹೋಗಿದ್ದರು.

ಇಂಗ್ಲೆಂಡ್‌ನ ಮಾಜಿ ನಾಯಕ ಮತ್ತು ಟೂರ್ನಿಯಲ್ಲಿ ವೀಕ್ಷಕ ವಿವರಣೆಗಾರರಾಗಿ ಕೆಲಸ ಮಾಡುತ್ತಿರುವ ಮೈಕಲ್ ವಾನ್ ಅಮೆರಿಕ ಪಿಚ್‌ಗಳ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ದೊಡ್ಡ ಟೂರ್ನಿಗೂ ಮುನ್ನ ಇಲ್ಲಿ ಹೆಚ್ಚು ಅಭ್ಯಾಸ ಪಂದ್ಯಗಳನ್ನು ನಡೆಸಲಿಲ್ಲವೇಕೆ? ಎಂದು ಪ್ರಶ್ನಿಸಿದ್ದಾರೆ. ಅಭ್ಯಾಸ ಪಂದ್ಯಗಳು ಹೆಚ್ಚು ನಡೆದಿದ್ದರೆ ಪಿಚ್ ಸುಧಾರಿಸುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ರೋಹಿತ್‌ಗೆ ಆಗಿರುವ ಗಾಯ ಗಂಭೀರವಾದುದಲ್ಲ. ಅದು ತೋಳಿನ ಮಾಂಸಖಂಡಕ್ಕೆ ಆಗಿರುವ ಸಣ್ಣ ಪೆಟ್ಟು ಎಂದು ಅವರೇ ಹೇಳಿದ್ದಾರೆ. ಪಾಕಿಸ್ತಾನ ಎದುರಿನ ಪಂದ್ಯದ ವೇಳೆಗೆ ಅವರು ಸುಧಾರಿಸಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಎರಡು ಅಭ್ಯಾಸ ಪಂದ್ಯಗಳು ನಡೆಯಲಿವೆ’ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದರೆ, ಪಿಚ್ ಕುರಿತಂತೆ ಯಾವುದೇ ಅಧಿಕೃತ ದೂರು ದಾಖಲಿಸುವ ಬಗ್ಗೆ ಬಿಸಿಸಿಐ ನಿರ್ಧರಿಸಿಲ್ಲ. ಆದರೆ, ಪಿಚ್ ಬಗ್ಗೆ ಸಮಾಧಾನವಂತೂ ಇದ್ದು, ಸ್ವಲ್ಪ ಅಪಾಯಕಾರಿ ಮತ್ತು ಟಿ20 ಕ್ರಿಕೆಟ್‌ಗೆ ಯೋಗ್ಯ ವಾದುದಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

‘ಇದು ಹೊಸ ಪಿಚ್ ಆಗಿದ್ದು, ಉತ್ತಮವಾದ ಹುಲ್ಲಿನ ಹೊದಿಕೆ ಇದೆ. ಆದರೆ, ಅದರೊಂದಿಗೆ ದೊಡ್ಡ ಬಿರುಕುಗಳೂ ಇವೆ. ಇದರಿಂದ ಚೆಂಡಿನ ಬೌನ್ಸ್ ಕುಗ್ಗುತ್ತದೆ. ಹೊಸ ಆ್ಯಪ್‌ನ ಬೇಟಾ ಟೆಸ್ಟ್ ಮಾಡಿದಂತೆ ಈ ರೀತಿಯ ಪಿಚ್‌ಗಳಲ್ಲಿ ಅಭ್ಯಾಸ ಪಂದ್ಯಗಳನ್ನು ನಡೆಸಿ ಕುದುರಿಸಬೇಕು. ಬಳಿಕ, ದೊಡ್ಡ ಪಂದ್ಯಗಳನ್ನು ಆಯೋಜಿಸಬೇಕು. ಎಲ್ಲ 4 ಪಿಚ್‌ಗಳು ಇದೇ ರೀತಿ ಆಗಿದ್ದು, ಟಿ–20 ಟೂರ್ನಿಗೆ ಯೋಗ್ಯವಲ್ಲ’ಎಂದು ಭಾರತ ತಂಡದ ಹತ್ತಿರದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.