ADVERTISEMENT

ಪಿಚ್‌ನ ಮಣ್ಣು ತಿಂದು ಬಾರ್ಬಡೋಸ್‌ ನೆಲಕ್ಕೆ ಧನ್ಯವಾದ ಅರ್ಪಿಸಿದ ರೋಹಿತ್ ಶರ್ಮಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜೂನ್ 2024, 9:58 IST
Last Updated 30 ಜೂನ್ 2024, 9:58 IST
   

ನವದೆಹಲಿ: ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ಗಳಲ್ಲಿ ಅಮೋಘ ಸಾಧನೆ ತೋರಿದ ಭಾರತ ತಂಡ ಶನಿವಾರ ನಡೆದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ ರೋಚಕ ಜಯ ಸಾಧಿಸಿದೆ. ಆ ಮೂಲಕ ಕೋಟ್ಯಾಂತರ ಭಾರತೀಯರ ಕನಸು ನನಸು ಮಾಡಿದೆ.

ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಹರಿಣಗಳ ವಿರುದ್ಧ ಭಾರತ ಏಳು ರನ್‌ಗಳ ರೋಚಕ ಜಯ ಸಾಧಿಸಿತ್ತು.

ಟ್ರೋಫಿ ಗೆದ್ದ ಭಾರತ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕ್ರಿಕೆಟ್‌ ದಿಗ್ಗಜರು ಆಟಗಾರರಿಗೆ ಅಭಿನಂದನೆ ತಿಳಿಸಿದ್ದಾರೆ.

ADVERTISEMENT

ಟ್ರೋಫಿ ಗೆದ್ದ ಖುಷಿಯನ್ನು ನಾಯಕ ರೋಹಿತ್ ಶರ್ಮಾ ವಿಭಿನ್ನ ರೀತಿಯಲ್ಲಿ ನೆನಪಿಸಿಕೊಂಡಿದ್ದಾರೆ. ಪಿಚ್‌ನ ಮಣ್ಣನ್ನು ತಿನ್ನುವ ಮೂಲಕ ಬಾರ್ಬಡೋಸ್ ನೆಲಕ್ಕೆ ಧನ್ಯವಾದ ತಿಳಿಸಿದ್ದಾರೆ. ಈ ಹಿಂದೆ ಟೆನಿಸ್ ತಾರೆ ನೊವಾಕ್ ಜೋಕೊವಿಚ್ ಕೂಡ ಇದೇ ರೀತಿ ಮೈದಾನದ ಮಣ್ಣನ್ನು ತಿಂದಿದ್ದರು.

ರೋಹಿತ್ ಶರ್ಮಾ ಅವರ ಈ ವಿಡಿಯೊವನ್ನು ಐಸಿಸಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ‘ಇದೊಂದು ನೆನಪಿಗಾಗಿ’ ಎಂದು ಬರೆದುಕೊಂಡಿದೆ.

2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಮೊದಲ ಟಿ20 ವಿಶ್ವಕಪ್‌ ಟ್ರೋಫಿ ಗೆದ್ದಿತ್ತು. 2013ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಜಯಿಸಿದ ನಂತರ ಭಾರತವು ಯಾವುದೇ ಮಾದರಿಯ ಐಸಿಸಿ ಟ್ರೋಫಿ ಗೆದ್ದಿರಲಿಲ್ಲ. 2022ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋತಿತ್ತು.

ಟ್ರೋಫಿ ಜೊತೆ ಮಲಗಿ ಪೋಸ್ಟ್‌ ಮಾಡಿದ ‘ಸ್ಕೈ’

ಬೌಂಡರಿ ಲೈನ್‌ನಲ್ಲಿ ‘ಸರ್ಕಸ್‌’ ಮಾಡಿ ಡೇವಿಡ್‌ ಮಿಲ್ಲರ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದ್ದ ಸೂರ್ಯ ಕುಮಾರ್‌ ಯಾದವ್(SKY), ನಿನ್ನೆ ಪಂದ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಭಾರತಕ್ಕೆ ಜಯ ಒಲಿಯಲು ಅವರ ಕ್ಯಾಚ್‌ ಕೂಡ ಕಾರಣವಾಗಿತ್ತು.

ಟ್ರೋಫಿ ಗೆದ್ದ ಖುಷಿಯಲ್ಲಿ ಇನ್‌ಸ್ಟಾಗ್ರಾಂನಲ್ಲಿ ಫೋಟೊವೊಂದನ್ನು ಪೋಸ್ಟ್ ಮಾಡಿರುವ ಸೂರ್ಯ ಕುಮಾರ್, ‘ಇದು ಉತ್ತಮ ರಾತ್ರಿಯ ನಿದ್ರೆಯಾಗಲಿದೆ’ ಎಂದು ಬರೆದುಕೊಂಡಿದ್ದಾರೆ.

ಫೋಟೋದಲ್ಲಿ ಟ್ರೋಫಿಯನ್ನು ಬೆಡ್‌ನ ಮಧ್ಯದಲ್ಲಿ ಇಟ್ಟು ಸೂರ್ಯಕುಮಾರ್ ದಂಪತಿ ಮಲಗಿರುವುದು ಕಾಣಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.