ದುಬೈ: ಐಸಿಸಿ ವರ್ಷದ ಏಕದಿನ ಕ್ರಿಕೆಟ್ ತಂಡದ ನಾಯಕನಾಗಿ ರೋಹಿತ್ ಶರ್ಮಾ ಮಂಗಳವಾರ ಆಯ್ಕೆಯಾಗಿದ್ದಾರೆ. ಅವರ ಜೊತೆ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ, ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಸೇರಿದಂತೆ ಇತರ ಐವರು ಭಾರತೀಯರು ಸ್ಥಾನ ಪಡೆದಿದ್ದಾರೆ.
ವಿಶ್ವಕಪ್ ಫೈನಲ್ ತಲುಪಿದ್ದ ಭಾರತ (ರನ್ನರ್ ಅಪ್) ಮತ್ತು ಆಸ್ಟ್ರೇಲಿಯಾ (ವಿಜೇತರು) ಮತ್ತು ಸೆಮಿಫೈನಲ್ ತಲುಪಿದ್ದ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದ ಆಟಗಾರರು ಈ ತಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ‘ವರ್ಷದ ಟೆಸ್ಟ್ ತಂಡ’ದಲ್ಲಿ ಸ್ಥಾನ ಪಡೆದ ಇಬ್ಬರು ಭಾರತೀಯರಾಗಿದ್ದು, ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ಈ ತಂಡದ ನಾಯಕರಾಗಿದ್ದಾರೆ. ಬಾರ್ಡರ್-ಗಾವಸ್ಕರ್ ಸರಣಿಯಲ್ಲಿ ಅಶ್ವಿನ್ 25 ವಿಕೆಟ್‌ಗಳೊಡನೆ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದರು.
ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಜಡೇಜಾ ಉತ್ತಮ ಪ್ರದರ್ಶನ ನೀಡಿದ್ದು, ನಾಲ್ಕು ವಿಕೆಟ್‌ಗಳ ಜೊತೆ 48 ರನ್ ಕೂಡ ಗಳಿಸಿದ್ದರು. ಆದರೂ ತಂಡ ಸೋತಿತ್ತು.
ಭಾರತದ ಮೂವರು– ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್ ಮತ್ತು ಅರ್ಷ್‌ದೀಪ್ ಸಿಂಗ್ ಅವರು ಐಸಿಸಿ ವರ್ಷದ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಏಕದಿನ ತಂಡದಲ್ಲಿ ಶರ್ಮಾ ಜೊತೆಗೆ ಮೂರನೇ ಕ್ರಮಾಂಕದಲ್ಲಿ, ಸ್ಥಿರ ಪ್ರದರ್ಶನ ನೀಡಿದ್ದ ಆಸ್ಟ್ರೇಲಿಯಾ ಬ್ಯಾಟರ್ ಟ್ರಾವಿಸ್ ಹೆಡ್ ಸ್ಥಾನ ಪಡೆದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ, ಡೇರಿಲ್ ಮಿಚೆಲ್ (ನ್ಯೂಜಿಲೆಂಡ್), ಹೆನ್ರಿಚ್ ಕ್ಲಾಸೆನ್ ಮತ್ತು ಮಾರ್ಕೊ ಯಾನ್ಸೆನ್ (ದಕ್ಷಿಣ ಆಫ್ರಿಕಾ) ಒಳಗೊಂಡಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಆ್ಯಡಂ ಜಂಪಾ ಜೊತೆಗೆ ಭಾರತದ ಮೂವರು– ಮೊಹಮ್ಮದ್ ಸಿರಾಜ್, ಶಮಿ ಮತ್ತು ಕುಲದೀಪ್ ಯಾದವ್ ಇದ್ದಾರೆ. ಜಂಪಾ ಕಳೆದ ವರ್ಷ 26.31 ಸರಾಸರಿಯಲ್ಲಿ 38 ವಿಕೆಟ್‌ಗಳನ್ನು ಪಡೆದಿದ್ಗದರು. ಸಿರಾಜ್ ಕಳೆದ ವರ್ಷ 44 ವಿಕೆಟ್‌ಗಳೊಡನೆ ಮಿಂಚಿದ್ದರು.
ಐಸಿಸಿ ಮಹಿಳಾ ಏಕದಿನ ತಂಡದಲ್ಲಿ ಭಾರತದ ಆಟಗಾರ್ತಿಯರು ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.