ADVERTISEMENT

34ನೇ ವರ್ಷಕ್ಕೆ ಕಾಲಿರಿಸಿದ ಹಿಟ್‌ಮ್ಯಾನ್ ದಾಖಲೆಗಳತ್ತ ಹದ್ದು ನೋಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಏಪ್ರಿಲ್ 2021, 11:45 IST
Last Updated 30 ಏಪ್ರಿಲ್ 2021, 11:45 IST
ರೋಹಿತ್ ಶರ್ಮಾ
ರೋಹಿತ್ ಶರ್ಮಾ   

ಮುಂಬೈ: ಹಿಟ್‌ಮ್ಯಾನ್ ಖ್ಯಾತಿಯ ಭಾರತ ಕ್ರಿಕೆಟ್ ತಂಡದ ಉಪನಾಯಕ ರೋಹಿತ್ ಶರ್ಮಾ, 34ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ವಿರಾಟ್ ಕೊಹ್ಲಿ ಬಳಿಕ ಅತಿ ಹೆಚ್ಚು ಜನಪ್ರಿಯತೆಯನ್ನು ಕಾಪಾಡಿಕೊಂಡಿರುವ ರೋಹಿತ್ ಶರ್ಮಾ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಈ ಕುರಿತು ಹದ್ದು ನೋಟ ಇಲ್ಲಿದೆ.

*ಏಕದಿನ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ದಾಖಲೆಯು ರೋಹಿತ್ ಶರ್ಮಾ ಅವರಿಗೆ ಸಲ್ಲುತ್ತದೆ. 2014ರಲ್ಲಿ ಶ್ರೀಲಂಕಾ ವಿರುದ್ಧ ಕೋಲ್ಕತ್ತದ ಈಡೆನ್ ಗಾರ್ಡೆನ್ಸ್ ಮೈದಾನದಲ್ಲಿ 264 ರನ್ ಗಳಿಸಿದ್ದರು.

*ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಮೂರು ದ್ವಿಶತಕ ಬಾರಿಸಿದ ದಾಖಲೆಯು ರೋಹಿತ್ ಹೆಸರಲ್ಲಿದೆ.

ADVERTISEMENT

*ಏಕದಿನದಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಬೌಂಡರಿ-ಸಿಕ್ಸರ್‌ಗಳ ಮೂಲಕ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯು ರೋಹಿತ್ ಹೆಸರಲ್ಲಿದೆ. ಶ್ರೀಲಂಕಾ ವಿರುದ್ಧ ದ್ವಿಶತಕ (264) ಸಾಧನೆ ಮಾಡಿದ್ದ ರೋಹಿತ್, ಬೌಂಡರಿ ಹಾಗೂ ಸಿಕ್ಸರ್ ಮೂಲಕವೇ 186 ರನ್ ಚಚ್ಚಿದ್ದರು. ಇದರಲ್ಲಿ 33 ಬೌಂಡರಿ ಹಾಗೂ ಒಂಬತ್ತು ಸಿಕ್ಸರ್‌ಗಳು ಸೇರಿದ್ದವು.

*2019ನೇ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್, ಐದು ಶತಕಗಳನ್ನು ಬಾರಿಸಿದ್ದರು. ಈ ಮೂಲಕ ವಿಶ್ವಕಪ್‌ವೊಂದರಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆ ಬರೆದರು. ಅಲ್ಲದೆ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಆರು ದ್ವಿಶತಕಗಳನ್ನು ಬಾರಿಸಿದ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿದ್ದರು.

*2019ನೇ ವಿಶ್ವಕಪ್‌ನಲ್ಲಿ ರೋಹಿತ್ ಒಟ್ಟು 648 ರನ್ ಸಿಡಿಸಿದ್ದರು. ಈ ಮೂಲಕ ಸಚಿನ್ ತೆಂಡೂಲ್ಕರ್ (673) ಹಾಗೂ ಕುಮಾರ ಸಂಗಕ್ಕರ (659) ಬಳಿಕ ವಿಶ್ವಕಪ್‌ವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಮೂರನೇ ಸ್ಥಾನ ಆಲಂಕರಿಸಿದ್ದರು.

*2019ರಲ್ಲಿ ಟೆಸ್ಟ್ ಆರಂಭಿಕನಾಗಿ ಮೊದಲೆರಡು ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸುವ ಮೂಲಕ ರೋಹಿತ್ ಅಬ್ಬರಿಸಿದರು. ಹಾಗೆಯೇ ಟೆಸ್ಟ್ ಪಂದ್ಯವೊಂದರ ಎರಡು ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ದಾಖಲೆಯು ಅವರದ್ದಾಗಿದೆ.

*ಐಪಿಎಲ್‌ನಲ್ಲಿ ಓರ್ವ ಆಟಗಾರನಾಗಿ ಆರು ಪ್ರಶಸ್ತಿಗಳನ್ನು ಗೆದ್ದ ದಾಖಲೆಗೆ ರೋಹಿತ್ ಅರ್ಹವಾಗಿದ್ದಾರೆ. ಈ ಪೈಕಿ ಮುಂಬೈ ಇಂಡಿಯನ್ಸ್ ನಾಯಕರಾಗಿ ಐದು ಕಿರೀಟಗಳನ್ನು ಗೆದ್ದಿದ್ದಾರೆ. ಇನ್ನುಳಿದಂತೆ 2009ರಲ್ಲಿ ಐಪಿಎಲ್ ಗೆದ್ದ ಡೆಕ್ಕನ್ ಚಾರ್ಜರ್ಸ್ ತಂಡದ ಸದಸ್ಯರಾಗಿದ್ದರು.

ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಪ್ರಶಸ್ತಿಗಳು: 2013, 2015, 2017, 2019, 2020

ರೋಹಿತ್ ಶರ್ಮಾ

ಪ್ರಮುಖ ಪ್ರಶಸ್ತಿಗಳು:
2015: ಅರ್ಜನ ಪ್ರಶಸ್ತಿ
2019: ಐಸಿಸಿ ಏಕದಿನ ಕ್ರಿಕೆಟಿಗ
2020: ರಾಜೀವ್ ಗಾಂಧಿ ಖೇಲ್ ರತ್ನ

ರೋಹಿತ್ ಬ್ಯಾಟಿಂಗ್ ಅಂಕಿಅಂಶ:
ಟೆಸ್ಟ್: ಪಂದ್ಯ:38, ಇನ್ನಿಂಗ್ಸ್: 64, ರನ್: 2615, ಸರಾಸರಿ: 46.7, ಶತಕ: 7, ದ್ವಿಶತಕ: 1, ಅರ್ಧಶತಕ: 12
ಏಕದಿನ: ಪಂದ್ಯ: 227, ಇನ್ನಿಂಗ್ಸ್: 220, ರನ್: 9,205, ಸರಾಸರಿ: 48.96, ಶತಕ: 29, ದ್ವಿಶತಕ: 3, ಅರ್ಧಶತಕ: 43, ವಿಕೆಟ್: 8
ಟ್ವೆಂಟಿ-20: ಪಂದ್ಯ: 111, ಇನ್ನಿಂಗ್ಸ್: 103, ರನ್: 2,864, ಸರಾಸರಿ: 32.18, ಶತಕ: 4, ಅರ್ಧಶತಕ: 22

3 ದ್ವಿಶತಕ ಸಾಧನೆ: 264, 209, 208

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.