ಮುಂಬೈ: ‘ರೋಹಿತ್ ಶರ್ಮಾಗೆ ನಾಯಕತ್ವವು ಹೊರೆ ಎಂದು ಯಾವತ್ತೂ ಅನಿಸಲೇ ಇಲ್ಲ. ಜವಾಬ್ದಾರಿಗಳನ್ನು ಸುಲಭವಾಗಿ ಮತ್ತು ಸುಸೂತ್ರವಾಗಿ ನಿಭಾಯಿಸುವಲ್ಲಿ ಅವರು ನಿಪುಣರು. ಶಾಲಾ ದಿನಗಳಿಂದಲೇ ಅವರು ನಾಯಕತ್ವ ಗುಣವನ್ನು ಮೈಗೂಡಿಸಿಕೊಂಡಿದ್ದಾರೆ’ ಎಂದು ರೋಹಿತ್ ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಅಭಿಪ್ರಾಯಪಟ್ಟರು.
‘ರೋಹಿತ್‌ಗೆ ಜಯ ಗಳಿಸುವುದರಲ್ಲೇ ಆಸಕ್ತಿಯೇ ಹೊರತು ಸೋಲೊಪ್ಪಿಕೊಳ್ಳುವ ಬಗ್ಗೆ ಯೋಚನೆ ಮಾಡುವುದಿಲ್ಲ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಐದು ಬಾರಿ ಪ್ರಶಸ್ತಿ ಗಳಿಸಿಕೊಡುವಲ್ಲಿ ಅವರ ಈ ಗುಣ ನೆರವಾಗಿದೆ. ಈಗ ಅವರ ಜವಾಬ್ದಾರಿ ಹೆಚ್ಚಿದೆಯೇ ಹೊರತು ಒತ್ತಡವೇನೂ ಅಧಿಕವಾಗಲಿಲ್ಲ’ ಎಂದು ಶಾಲಾ ದಿನಗಳಲ್ಲಿ ರೋಹಿತ್ ಹೆಗಲಿಗೆ ನಾಯಕನ ಜವಾಬ್ದಾರಿ ವಹಿಸಿದ್ದ ಲಾಡ್ ಹೇಳಿದರು.
’ಶಾಲಾ ದಿನಗಳಲ್ಲೇ ಅವರ ಸಾಮರ್ಥ್ಯದ ಬಗ್ಗೆ ನನಗೆ ತಿಳಿದಿತ್ತು. ಶಾಲಾ ತಂಡವನ್ನು ಮುನ್ನಡೆಸಲು ಹೇಳಿದಾಗ ಬೇಗನೇ ಒಪ್ಪಿಕೊಂಡ ಅವರು ಕೆಲವು ಪಂದ್ಯಗಳಲ್ಲಿ ಏಕಾಂಗಿಯಾಗಿ ಗೆಲುವು ತಂದುಕೊಡುತ್ತಿದ್ದರು. ಪಂದ್ಯವೊಂದರಲ್ಲಿ 40 ರನ್‌ಗಳಿಗೆ ಐದು ವಿಕೆಟ್‌ಗಳು ಉರುಳಿದ್ದಾಗ ಆರಂಭಿಕ ಆಟಗಾರನಾಗಿದ್ದ ರೋಹಿತ್ ಒಬ್ಬರೇ ಕ್ರೀಸ್‌ನಲ್ಲಿ ತಳವೂರಿ ತಂಡ 220 ರನ್ ಸೇರಿಸಲು ನೆರವಾಗಿದ್ದರು. ವಿಕೆಟ್‌ಗಳು ಉರುಳುತ್ತಿದ್ದಾಗ ಆತಂಕಗೊಂಡಿದ್ದ ನನಗೆ ಈ ಪಂದ್ಯವನ್ನು ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆ ನೀಡಿದ್ದ ರೋಹಿತ್ ಅದನ್ನು ಸಾಧಿಸಿ ತೋರಿಸಿದರು‘ ಎಂದು ಲಾಡು ನೆನಪಿಸಿಕೊಂಡರು.
ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ಭಾರತ ತಂಡದ ಮೊದಲ ಟೆಸ್ಟ್ ನಂತರ ನಾಯಕ ವಿರಾಟ್ ಕೊಹ್ಲಿ ವಾಪಸ್ ಆಗಲಿದ್ದಾರೆ. ಉಳಿದ ಮೂರು ಪಂದ್ಯಗಳಲ್ಲಿ ರೋಹಿತ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಲಾಡ್ ’ಅದು ಬಿಸಿಸಿಐ ಮತ್ತು ಆಯ್ಕೆ ಸಮಿತಿಗೆ ಬಿಟ್ಟ ವಿಷಯ. ಆದ್ದರಿಂದ ನಾನೇನೂ ಹೇಳಲಾರೆ. ರೋಹಿತ್‌ಗೆ ನಾಯಕತ್ವ ನೀಡಿದರೆ ಚೆನ್ನಾಗಿ ನಿಭಾಯಿಸುವರು ಎಂಬುದರಲ್ಲಿ ಸಂದೇಹ ಇಲ್ಲ. ನಿದ್ಹಾಸ್ ಟ್ರೋಫಿಯಂಥ ಕೆಲವು ಟೂರ್ನಿಗಳಲ್ಲಿ ಭಾರತ ತಂಡವನ್ನು ರೋಹಿತ್ ಮುನ್ನಡೆಸಿ ಯಶಸ್ವಿಯಾಗಿದ್ದಾರೆ. ನಿದ್ಹಾಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಕೂಡ ಆಗಿತ್ತು‘ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.