ADVERTISEMENT

ನೂರರಲ್ಲಿ ಇನ್ನೂರು: ಇಂಗ್ಲೆಂಡ್ ನಾಯಕ ಜೋ ರೂಟ್ ದಾಖಲೆ

ಚೆನ್ನೈ ಟೆಸ್ಟ್‌: ನಾಯಕನೊಂದಿಗೆ ಶತಕದ ಜೊತೆಯಾಟವಾಡಿದ ಬೆನ್ ಸ್ಟೋಕ್ಸ್‌; ಸ್ಪಿನ್, ವೇಗದ ದಾಳಿ ಮೀರಿನಿಂತ ಬ್ಯಾಟ್ಸ್‌ಮನ್‌ಗಳು

ಪಿಟಿಐ
Published 6 ಫೆಬ್ರುವರಿ 2021, 13:12 IST
Last Updated 6 ಫೆಬ್ರುವರಿ 2021, 13:12 IST
ಜೋ ರೂಟ್ –ಪಿಟಿಐ ಚಿತ್ರ
ಜೋ ರೂಟ್ –ಪಿಟಿಐ ಚಿತ್ರ   

ಚೆನ್ನೈ: ನೂರನೇ ಪಂದ್ಯದ ಮೊದಲ ದಿನ ಶತಕ ಸಿಡಿಸಿದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಎರಡನೇ ದಿನವೂ ಅಮೋಘ ಬ್ಯಾಟಿಂಗ್ ಮುಂದುವರಿಸಿದರು. ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದ ಅವರು ವೃತ್ತಿಬದುಕಿನ ಮೈಲುಗಲ್ಲಿನ ಪಂದ್ಯವನ್ನು ಅವಿಸ್ಮರಣೀಯವಾಗಿಸಿದರು. ನೂರನೇ ಟೆಸ್ಟ್‌ ಪಂದ್ಯದಲ್ಲಿ ದ್ವಿಶತಕ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನು ಬರೆದರು.

ರೂಟ್ (218; 377 ಎಸೆತ, 536 ನಿಮಿಷ, 19 ಬೌಂಡರಿ, 2 ಸಿಕ್ಸರ್‌) ಗಳಿಸಿದ ಮೋಹಕ ದ್ವಿಶತಕ ಮತ್ತು ಅವರೊಂದಿಗೆ ಶತಕದ ಜೊತೆಯಾಟ ಆಡಿದ ಬೆನ್ ಸ್ಟೋಕ್ಸ್‌ (82; 118 ಎ, 10 ಬೌಂ, 3 ಸಿ) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ‍ಪಂದ್ಯದ ಎರಡನೇ ದಿನ 8 ವಿಕೆಟ್‌ ಕಳೆದುಕೊಂಡು 555 ರನ್ ಕಲೆ ಹಾಕಿದೆ.

ಮೊದಲ ದಿನವಾದ ಶುಕ್ರವಾರ ಮೂರು ವಿಕೆಟ್‌ಗಳಿಗೆ 263 ರನ್ ಗಳಿಸಿದ್ದ ಬ್ಯಾಟ್ಸ್‌ಮನ್‌ಗಳು ಶನಿವಾರವೂ ಭಾರತದ ಬೌಲರ್‌ಗಳನ್ನು ದಂಡಿಸಿದರು. ವೇಗದ ಬೌಲಿಂಗ್ ಜೋಡಿ ಜಸ್‌ಪ್ರೀತ್ ಬೂಮ್ರಾ ಮತ್ತು ಇಶಾಂತ್ ಶರ್ಮಾ ಸ್ವಲ್ಪ ಮಟ್ಟಿಗೆ ಪ್ರವಾಸಿ ತಂಡವನ್ನು ನಿಯಂತ್ರಿಸಿದರೂ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್, ಶಹಬಾಜ್ ನದೀಮ್ ಮತ್ತು ವಾಷಿಂಗ್ಟನ್ ಸುಂದರ್ ದುಬಾರಿಯಾದರು. ಅಶ್ವಿನ್ 50 ಓವರ್‌ಗಳಲ್ಲಿ 132 ರನ್ ನೀಡಿದರೆ ನದೀಮ್ ಕೇವಲ 44 ಓವರ್‌ಗಳಲ್ಲಿ 167 ರನ್ ಬಿಟ್ಟುಕೊಟ್ಟರು. ಜೋ ರೂಟ್ ಅವರ ಇನಿಂಗ್ಸ್‌, ಭಾರತದ ಪಿಚ್‌ಗಳಲ್ಲಿ ಸ್ಪಿನ್ ಮತ್ತು ವೇಗದ ದಾಳಿಯನ್ನು ಹೇಗೆ ಎದುರಿಸಬೇಕು ಎಂಬುದಕ್ಕೆ ತಾಜಾ ಉದಾಹರಣೆಯಂತಿತ್ತು.

ADVERTISEMENT

ಶುಕ್ರವಾರ 90ನೇ ಓವರ್‌ನ ಮೂರನೇ ಎಸೆತದಲ್ಲಿ ವಿಕೆಟ್ ಬಿದ್ದ ಕಾರಣ ದಿನದಾಟವನ್ನು ಮುಕ್ತಾಯಗೊಳಿಸಲಾಗಿತ್ತು. ಶನಿವಾರ ಬೆಳಿಗ್ಗೆ ನಾಯಕನೊಂದಿಗೆ ಬ್ಯಾಟಿಂಗ್ ಆರಂಭಿಸಿದ ಬೆನ್ ಸ್ಟೋಕ್ಸ್ ಆರಂಭದಿಂದಲೇ ಆಕ್ರಮಣಕ್ಕೆ ಮುಂದಾದರು. ಬೌಂಡರಿಯೊಂದಿಗೆ ಖಾತೆ ತೆರೆದ ಅವರು ಸ್ಟ್ರೈಕ್ ಬದಲಾಯಿಸುತ್ತ ನಾಯಕನಿಗೆ ದ್ವಿಶತಕದ ಹಾದಿಯಲ್ಲಿ ಸಾಗಲು ಸಾಕಷ್ಟು ಅವಕಾಶ ನೀಡಿದರು. ನಾಲ್ಕನೇ ವಿಕೆಟ್‌ಗೆ 124 ರನ್ ಸೇರಿಸಿದ ಅವರು ತಂಡದ ಮೊತ್ತವನ್ನು 400ರ ಸನಿಹ ತಲುಪಿಸಿದರು. ವೇಗಿಗಳ ವಿರುದ್ಧ ನಾಯಕ ರೂಟ್ ಅವರ ಸ್ಟ್ರೈಕ್ ರೇಟ್ 30ರ ಆಸುಪಾಸಿನಲ್ಲಿದ್ದರೆ ಸ್ಪಿನ್ನರ್‌ಗಳ ಎದುರು ಅದು 70 ಸನಿಹ ತಲುಪಿತ್ತು. ವಾಷಿಂಗ್ಟನ್ ಮತ್ತು ನದೀಮ್ ಎಸೆತಗಳಲ್ಲಿ ಅವರು ಹೆಚ್ಚು ರನ್ ಕಲೆ ಹಾಕಿದರು. ಒಂದು ಮತ್ತು ಎರಡು ರನ್‌ಗಳ ಮೂಲಕ ಎದುರಾಳಿ ಫೀಲ್ಡರ್‌ಗಳು ಬಸವಳಿಯುವಂತೆ ಮಾಡಿದ ರೂಟ್‌ ನಡುನಡುವೆ ಮೂರು ರನ್‌ಗಳನ್ನು ಓಡಿಯೂ ತಮ್ಮ ದೈಹಿಕ ಸಾಮರ್ಥ್ಯ ಸಾಬೀತು ಮಾಡಿದರು. ಬೌಂಡರಿಗಳು ಹೊರತಾಗಿ ಅವರು 130 ರನ್ ಗಳಿಸಿದರು.

ಅನುಭವಿ ಸ್ಪಿನ್ನರ್ ಅಶ್ವಿನ್ ಎಸೆತವನ್ನು ಲಾಫ್ಟ್ ಮಾಡಿ ಸಿಕ್ಸರ್‌ಗೆ ಎತ್ತಿದ ಸ್ಟೋಕ್ಸ್ ಸ್ವೀಪ್ ಮೂಲಕ ಬೌಂಡರಿಗಳನ್ನೂ ಗಳಿಸಿದರು. ಜೋ ರೂಟ್ ಕೂಡ ಅಶ್ವಿನ್ ಎಸೆತಗಳಲ್ಲಿ ಎರಡು ಸಿಕ್ಸರ್‌ ಗಳಿಸಿದರು. ಎರಡನೇ ಸಿಕ್ಸರ್ ಮೂಲಕ ಅವರು ಐದನೇ ದ್ವಿಶತಕ ಪೂರೈಸಿದರು. ವೇಗಿ ಇಶಾಂತ್ ಶರ್ಮಾ ಅವರ ಎಸೆತಗಳನ್ನು ರೂಟ್ ಜಾಗರೂಕತೆಯಿಂದ ಎದುರಿಸಿದರೆ ಸ್ಟೋಕ್ಸ್ ಸತತ ಎರಡು ಎಸೆತಗಳಲ್ಲಿ ಆನ್ ಡ್ರೈವ್ ಮತ್ತು ಸ್ಕ್ವೇರ್ ಡ್ರೈವ್ ಮೂಲಕ ಬೌಂಡರಿ ಗಳಿಸಿದರು. ಸ್ಟೋಕ್ಸ್ ಮತ್ತು ರೂಟ್ ಅವರನ್ನು ವಾಪ‌ಸ್ ಕಳುಹಿಸುವಲ್ಲಿ ನದೀಮ್ ಯಶಸ್ವಿಯಾದರು. ಇಶಾಂತ್ ಶರ್ಮಾ ದಿನದಾಟದ ಕೊನೆಯಲ್ಲಿ ಎರಡು ವಿಕೆಟ್‌ಗಳನ್ನು ಉರುಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.