ADVERTISEMENT

ನ್ಯೂಜಿಲೆಂಡ್ ಆಟಗಾರ ರಾಸ್ ಟೇಲರ್ ಕ್ರಿಕೆಟ್‌ಗೆ ವಿದಾಯ

ಏಜೆನ್ಸೀಸ್
Published 4 ಏಪ್ರಿಲ್ 2022, 19:30 IST
Last Updated 4 ಏಪ್ರಿಲ್ 2022, 19:30 IST
ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಟಗಾರ ರಾಸ್ ಟೇಲರ್ ಅವರು ಬೀಳ್ಕೊಡುಗೆ ಸಮಾರಂಭದಲ್ಲಿ ತಮ್ಮ ಮಗಳು ಮೆಕೆಂಜಿ, ಮಗ ಜಾಂಟಿ ಮತ್ತು ಪತ್ನಿ ವಿಕ್ಟೋರಿಯಾ ಬ್ರೌನ್ ಅವರೊಂದಿಗೆ  –ಎಎಫ್‌ಪಿ ಚಿತ್ರ 
ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಟಗಾರ ರಾಸ್ ಟೇಲರ್ ಅವರು ಬೀಳ್ಕೊಡುಗೆ ಸಮಾರಂಭದಲ್ಲಿ ತಮ್ಮ ಮಗಳು ಮೆಕೆಂಜಿ, ಮಗ ಜಾಂಟಿ ಮತ್ತು ಪತ್ನಿ ವಿಕ್ಟೋರಿಯಾ ಬ್ರೌನ್ ಅವರೊಂದಿಗೆ  –ಎಎಫ್‌ಪಿ ಚಿತ್ರ    

ಹ್ಯಾಮಿಲ್ಟನ್: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಟಗಾರ ರಾಸ್ ಟೇಲರ್ 16 ವರ್ಷಗಳ ವೃತ್ತಿ ಜೀವನಕ್ಕೆ ವಿದಾಯ ಹೇಳಿದರು.

ಸೋಮವಾರ ನೆದರ್ಲೆಂಡ್ಸ್ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಪಂದ್ಯದ ನಂತರ ಟೇಲರ್ ಅವರಿಗೆ ಬೀಳ್ಕೋಡುಗೆ ನೀಡಲಾಯಿತು. ನ್ಯೂಜಿಲೆಂಡ್ ಕ್ರಿಕೆಟ್ ಮುಖ್ಯಸ್ಥ ಮಾರ್ಟಿನ್ ಸ್ನೇಡನ್ ಅವರು ಟೇಲರ್‌ ಅವರನ್ನು ಸನ್ಮಾನಿಸಿದರು.

ಸೆಡಾನ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡವು 115 ರನ್‌ಗಳಿಂದ ಜಯಿಸಿತು. ತಮ್ಮ ವೃತ್ತಿಜೀವನದ ಕೊನೆಯ ಇನಿಂಗ್ಸ್‌ನಲ್ಲಿ 14 ರನ್‌ ಗಳಿಸಿ ಔಟಾದರು.

ADVERTISEMENT

ಹೋದ ಜನವರಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಸರಣಿಯ ನಂತರ ಟೆಸ್ಟ್ ಕ್ರಿಕೆಟ್‌ಗೆ ಟೇಲರ್ ವಿದಾಯ ಹೇಳಿದ್ದರು.

2006ರಿಂದ ನ್ಯೂಜಿಲೆಂಡ್ ತಂಡದ ಪ್ರಮುಖ ಬ್ಯಾಟರ್ ಆಗಿದ್ದರು ಟೇಲರ್. ಟೆಸ್ಟ್ ಮತ್ತ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. 2015ರಲ್ಲಿ ಅವರು ಪರ್ತ್‌ನಲ್ಲಿ ಗಳಿಸಿದ್ದ 290 ರನ್‌ಗಳು ನ್ಯೂಜಿಲೆಂಡ್ ಪರವಾಗಿ ದಾಖಲಾಗಿರುವ ವೈಯಕ್ತಿಕ ಶ್ರೇಷ್ಠ ಸ್ಕೋರ್ ಆಗಿದೆ.

‘ಹದಿನಾರು ವರ್ಷಗಳ ಈ ಪಯಣದಲ್ಲಿ ಹಲವಾರು ಮಧುರ ಕ್ಷಣಗಳನ್ನು ಅನುಭವಿಸಿದ್ದೇನೆ. ಸುಂದರ ನೆನಪುಗಳು ನನ್ನೊಂದಿಗೆ ಇವೆ. ಕ್ರಿಕೆಟ್ ಈಗ ಜಾಗತಿಕ ಕ್ರೀಡೆಯಾಗಿ ಬೆಳೆಯುತ್ತಿದೆ. ಇಂದಿನ ಎಲ್ಲ ಯುವ ಆಟಗಾರರಿಗೆ ಮತ್ತು ನೆದರ್ಲೆಂಡ್ಸ್‌ನಂತಹ ಹೊಸ ತಂಡಗಳಿಗೆ ಉತ್ತಮ ಭವಿಷ್ಯ ಇದೆ. ನಾನು ಕ್ರಿಕೆಟಿಗನಾಗಿ ಬೆಳೆಯಲು ಸಹಾಯ ಮಾಡಿದ ನ್ಯೂಜಿಲೆಂಡ್ ಸಂಸ್ಥೆ ಮತ್ತು ಅಭಿಮಾನಿಗಳಿಗೆ ಚಿರಋಣಿಯಾಗಿರುವೆ’ ಎಂದು ಟೇಲರ್ ಈ ಸಂದರ್ಭದಲ್ಲಿ ಹೇಳಿದರು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 50 ಓವರ್‌ಗಳಲ್ಲಿ 8ಕ್ಕೆ 333 (ಮಾರ್ಟಿನ್ ಗಪ್ಟಿಲ್ 106, ವಿಲ್ ಯಂಗ್ 120, ಫ್ರೆಡ್ ಕ್ಲಾಸನ್ 62ಕ್ಕೆ2, ಲಾಗನ್ ವ್ಯಾನ್ ಬೀಕ್ 58ಕ್ಕೆ2, ಕ್ಲೇಟನ್ ಫ್ಲಾಯ್ಡ್ 41ಕ್ಕೆ2) ನೆದರ್ಲೆಂಡ್ಸ್: 42.3 ಓವರ್‌ಗಳಲ್ಲಿ 218 (ಸ್ಟೀಫನ್ ಮೈಬರ್ಗ್ 64, ವಿಕ್ರಂಜೀತ್ ಸಿಂಗ್ 25, ಲಾಗನ್ ವ್ಯಾನ್ ಬೀಕ್ 32, ಮ್ಯಾಟ್ ಹೆನ್ರಿ 36ಕ್ಕೆ4, ಡಫ್ ಬ್ರೇಸ್‌ವೆಲ್ 23ಕ್ಕೆ2) ಫಲಿತಾಂಶ: ನ್ಯೂಜಿಲೆಂಡ್‌ಗೆ 115 ರನ್‌ಗಳ ಜಯ. 3–0ಯಿಂದ ಸರಣಿ ಜಯ.

ಆಡಿದ ಪ್ರಮುಖ ತಂಡಗಳು

ನ್ಯೂಜಿಲೆಂಡ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪುಣೆ ವಾರಿಯರ್ಸ್, ಟ್ರೆಬಾಂಗೊ ನೈಟ್ ರೈಡರ್ಸ್, ಸೇಂಟ್ ಲೂಸಿಯಾ ಕಿಂಗ್ಸ್, ವಿಶ್ವ ಇಲೆವನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.