ನವದೆಹಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯದ ಸಂದರ್ಭದಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಕ್ಕೆ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ಪಂದ್ಯ ಶುಲ್ಕದ ಶೇ 30ರಷ್ಟನ್ನು ದಂಡವಾಗಿ ವಿಧಿಸಲಾಗಿದೆ.
ಮಂಗಳವಾರ ನಡೆದ ಈ ಪಂದ್ಯದಲ್ಲಿ ಸಂಜು 86 ರನ್ ಮಾಡಿದ್ದರು. ಅವರು ನಿರ್ದಿಷ್ಟವಾಗಿ ಯಾವ ನಿಯಮ ಉಲ್ಲಂಘನೆ ಮಾಡಿದ್ದಾರೆಂದು ಸ್ಪಷ್ಟಪಡಿಸಿಲ್ಲ. ಆದರೆ 16ನೇ ಓವರಿನಲ್ಲಿ ಶಾಯಿ ಹೋಪ್ ಬೌಂಡರಿ ಬಳಿ ಪಡೆದ ಕ್ಯಾಚಿಗೆ ಸಂಬಂಧಿಸಿ ಅವರು ಅಂಪೈರ್ ಜೊತೆ ವಾದಿಸಿದ್ದಕ್ಕೆ ದಂಡ ವಿಧಿಸಲಾಗಿದೆ ಎನ್ನಲಾಗುತ್ತಿದೆ.
ಚೆಂಡನ್ನು ಲಾಂಗ್‌ಆನ್‌ನಲ್ಲಿ ಕ್ಯಾಚ್ ಪಡೆದ ವೇಳೆ ಸೀಮಾರೇಖೆಗೆ ಕಾಲು ತಾಗಿಸದಿರುವುದನ್ನು ಮರುಪರಿಶೀಲಿಸಿದ ನಂತರ ಮೂರನೇ ಅಂಪೈರ್ ಔಟ್ ನೀಡಿದ್ದರು. ಈ ಬಗ್ಗೆ ಸಂಜು ಅವರಿಗೆ ಸಮಾಧಾನ ಇರಲಿಲ್ಲ. ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಿದ್ದ ಅವರು ಮರಳಿ ಆನ್‌ಫೀಲ್ಡ್ ಅಂಪೈರ್‌ಗಳ ಜೊತೆ ಮಾತನಾಡಿದ್ದರು.
ಐಪಿಎಲ್ ನೀತಿಸಂಹಿತೆಯ 2.8ನೇ ವಿಧಿಯನ್ನು ಸ್ಯಾಮ್ಸನ್ ಉಲ್ಲಂಘಿಸಿದ್ದಾರೆ. ಸ್ಯಾಮ್ಸನ್ ಇದನ್ನು ಒಪ್ಪಿಕೊಂಡಿದ್ದಾರೆ. ಈ ವಿಷಯದಲ್ಲಿ ಮ್ಯಾಚ್ ರೆಫ್ರಿ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಹೇಳಿಕೆಯಲ್ಲಿ ಐಪಿಎಲ್ ತಿಳಿಸಿದೆ.
ಜೈಪುರದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಪಂದ್ಯದ ವೇಳೆ ರಾಯಲ್ಸ್ ತಂಡ ನಿಧಾನಗತಿಯಲ್ಲಿ ಓವರುಗಳನ್ನು ಮಾಡಿದ್ದಕ್ಕೆ ಸ್ಯಾಮ್ಸನ್ ಅವರಿಗೆ ₹12 ಲಕ್ಷ ದಂಡ ವಿಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.