ಚೆನ್ನೈ: ಭಾರತ ಕ್ರಿಕೆಟ್ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರ ಮಗಳು ರೂಪಾ ಗುರುನಾಥ್ ಅವರು ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್‌ಸಿಎ)ಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.ಇದರೊಂದಿಗೆ ಶ್ರೀನಿವಾಸನ್ ಅವರು ಟಿಎನ್‌ಸಿಎ ಮೇಲಿನ ತಮ್ಮ ಹಿಡಿತವನ್ನು ಕಾಯ್ದುಕೊಳ್ಳಲಿದ್ದಾರೆ.
ಭಾನುವಾರ ಇಲ್ಲಿ ನಡೆದ ಆಡಳಿತ ಸಮಿತಿ ಸಭೆಯಲ್ಲಿ ಶ್ರೀನಿವಾಸನ್ ಪರ ಕಣಕ್ಕಿಳಿಯುವ ತಂಡದ ಪಟ್ಟಿಯನ್ನು ಅನುಮೋದಿಸಲಾಯಿತು. ರೂಪಾ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಖಚಿತವಾಯಿತು. ಇದರೊಂದಿಗೆ ಟಿಎನ್‌ಸಿಎಗೆ ಪ್ರಥಮ ಮಹಿಳಾ ಅಧ್ಯಕ್ಷೆ ಅಧಿಕಾರಕ್ಕೆ ಬರಲಿದ್ದರೆ.
ಇದೇ 26ರಂದು ನಡೆಯಲಿರುವ ಸಂಸ್ಥೆಯ ಸರ್ವಸದಸ್ಯರ ಸಭೆಯಲ್ಲಿ ಅವರನ್ನು ಅವಿರೋಧ ಆಯ್ಕೆ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಸ್ಪರ್ಧೆಗೆ ನಾಮಪತ್ರ ಸಲ್ಲಿಸಲು ಇದೇ 24 ಕೊನೆಯ ದಿನವಾಗಿದೆ. ಅವರ ವಿರುದ್ಧ ಕಣಕ್ಕಿಳಿಯಲು ಯಾರಾದರೂ ನಾಮಪತ್ರ ಸಲ್ಲಿಸಬಹುದೇ ಎಂಬ ಕುತೂಹಲವೂ ಇದೆ.
ಇನ್ನುಳಿದ ಸ್ಥಾನಗಳಿಗೆ; ಆರ್.ಎಂ. ಗುರುಸ್ವಾಮಿ (ಉಪಾಧ್ಯಕ್ಷ), ಕೆ.ಎ. ಶಂಕರ್ (ಜಂಟಿ ಕಾರ್ಯದರ್ಶಿ), ಜೆ. ಪಾರ್ಥಸಾರಥಿ (ಖಜಾಂಚಿ), ಎನ್. ವೆಂಕಟರಾಮನ್ (ಜಂಟಿ ಖಜಾಂಚಿ) ಅವರ ಹೆಸರು ಅಂತಿಮಗೊಳಿಸಲಾಗಿದೆ.
ರೂಪಾ ಅವರ ಪತಿ ಗುರುನಾಥ್ ಮೇಯಪ್ಪನ್ ಅವರು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಫ್ರಾಂಚೈಸ್‌ನ ಅಧಿಕಾರಿಯಾಗಿದ್ದರು. ಅವರು 2013ರ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಆರೋಪಿಯಾಗಿ, ಬಿಸಿಸಿಐನಿಂದ ಆಜೀವ ಶಿಕ್ಷೆಗೊಳಗಾಗಿದ್ದಾರೆ.
ಮೂರು ದಿನಗಳ ಹಿಂದೆ ಟಿಎನ್‌ಸಿಎ ಚುನಾವಣೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದೆ. ಕೂಲಿಂಗ್ ಆಫ್ ನಿಯಮವು ಪದಾಧಿಕಾರಿಗೆ ಮಾತ್ರ, ಆಡಳಿತ ಮಂಡಳಿ ಸದಸ್ಯರಿಗಲ್ಲ ಎಂಬ ತೀರ್ಪನ್ನು ನ್ಯಾಯಪೀಠ ನೀಡಿತ್ತು. ಆದ್ದರಿಂದಾಗಿ ಚುನಾವಣೆಗೆ ಹಾದಿ ಸುಗಮವಾಗಿದೆ.
ಶಾ ಕುಟುಂಬದ ಹಿಡಿತ: ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯಲ್ಲಿಯೂ ಬಿಸಿಸಿಐ ಮಾಜಿ ಕಾರ್ಯದರ್ಶಿ ನಿರಂಜನ್ ಶಾ ಅವರ ಕುಟುಂಬದ ಹಿಡಿತ ಮತ್ತಷ್ಟು ಬಿಗಿಯಾಗಿದೆ.
ಸೌರಾಷ್ಟ್ರ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ನಿರಂಜನ್ ಅವರ ಮಗ ಜಯದೇವ್ ಶಾ ಅವರು ಸೌರಾಷ್ಟ್ರ ಸಂಸ್ಥೆಗೆ ಅಧ್ಯಕ್ಷರಾಗಿದ್ದಾರೆ.
ಅತ್ತ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯಲ್ಲಿಯೂ ಕುಟುಂಬ ರಾಜಕಾರಣವೇ ಮುಂಚೂಣಿಯಲ್ಲಿದೆ. ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ತಮ್ಮ ಅರುಣ್ ಠಾಕೂರ್ ಅವರು ಇದೇ 27ರಂದು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.