ADVERTISEMENT

SA vs ENG | 150 ಟೆಸ್ಟ್‌ ಪಂದ್ಯ ಆಡಿದ ಮೊದಲ ಬೌಲರ್ ಜೇಮ್ಸ್ ಆ್ಯಂಡರ್ಸನ್

ಕ್ರಿಕೆಟ್

ಏಜೆನ್ಸೀಸ್
Published 26 ಡಿಸೆಂಬರ್ 2019, 11:20 IST
Last Updated 26 ಡಿಸೆಂಬರ್ 2019, 11:20 IST
   

ಸೆಂಚೂರಿಯನ್:ಇಲ್ಲಿನ ಸೂಪರ್‌ ಸ್ಪೋರ್ಟ್ಸ್‌ ಕ್ರೀಡಾಂಗಣದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪಂದ್ಯವುಇಂಗ್ಲೆಂಡ್‌ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಪಾಲಿಗೆ 150ನೇಯದು. ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಬೌಲರ್‌ ಎಂಬ ಶ್ರೇಯಕ್ಕೆ ಅವರು ಭಾಜರಾದರು.

2003ರ ಮೇ 22ರಂದು ಜಿಂಬಾಬ್ವೆ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಜೇಮ್ಸ್‌ ಇದುವರೆಗೆ 26.93ರ ಸರಾಸರಿಯಲ್ಲಿ 576 ವಿಕೆಟ್‌ ಕಬಳಿಸಿದ್ದಾರೆ.

ಹೆಚ್ಚು ಪಂದ್ಯ ಆಡಿದ ಬೌಲರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಲೆಗ್‌ ಸ್ಪಿನ್ನರ್‌ ಶೇನ್‌ ವಾರ್ನ್‌ ಎರಡನೇ ಸ್ಥಾನದಲ್ಲಿದ್ದಾರೆ. ಅವರು 145 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಉಳಿದಂತೆ ಜೇಮ್ಸ್‌ ಸಹ ಆಟಗಾರ ಸ್ಟುವರ್ಟ್‌ ಬ್ರಾಡ್‌ (135) ಮೂರನೇ ಸ್ಥಾನದಲ್ಲಿದ್ದಾರೆ.

ADVERTISEMENT

ಒಟ್ಟಾರೆ ಹೆಚ್ಚು ಟೆಸ್ಟ್ ಆಡಿದ ಆಟಗಾರರ ಸಾಲಿನಲ್ಲಿ ಜೇಮ್ಸ್‌ 7ನೇ ಸ್ಥಾನದಲ್ಲಿದ್ದಾರೆ.ಭಾರತದ ಸಚಿನ್‌ ತೆಂಡೂಲ್ಕರ್‌ (200), ಆಸ್ಟ್ರೇಲಿಯಾದ ರಿಕಿಪಾಂಟಿಂಗ್‌ (168), ದಕ್ಷಿಣ ಆಪ್ರಿಕಾದ ಜಾಕ್‌ ಕಾಲೀಸ್‌ (166), ವೆಸ್ಟ್‌ ಇಂಡೀಸ್‌ನ ಶಿವನಾರಾಯಣ್ ಚಂದ್ರಪಾಲ್‌ (164), ಭಾರತದ ರಾಹುಲ್‌ ದ್ರಾವಿಡ್‌ (164), ಇಂಗ್ಲೆಂಡ್‌ನ ಆಲಿಸ್ಟರ್‌ ಕುಕ್‌ (161) ಹಾಗೂ ಆಸ್ಟ್ರೇಲಿಯಾದ ಅಲನ್‌ ಬಾರ್ಡರ್‌ (156) ಮೊದಲ ಆರು ಸ್ಥಾನಗಳಲ್ಲಿ ಇದ್ದಾರೆ.

ಇಂದು ಆರಂಭವಾಗಿರುವ ಟೆಸ್ಟ್‌ನಲ್ಲಿ ಮೊದಲ ಬ್ಯಾಟಿಂಗ್ ಆರಂಭಿಸಿರುವ ಆತಿಥೇಯ ದಕ್ಷಿಣ ಆಫ್ರಿಕಾ, 33 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 97 ರನ್‌ ಗಳಿಸಿದೆ. ಜೇಮ್ಸ್‌ ಆ್ಯಂಡರ್ಸನ್‌ ಎಸೆದ ಇನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಆರಂಭಿಕ ಡೀನ್‌ ಎಲ್ಗರ್‌ ಸೊನ್ನೆ ಸುತ್ತಿದರು.

ಆ್ಯಡಂ ಮರ್ಕರಮ್‌ (20) ಹಾಗೂ ಜೇಬಯರ್ ಹಮ್ಜಾ (39) ಬೇಗನೆ ನಿರ್ಗಮಿಸಿದ್ದು, ನಾಯಕ ಫಾಫ್‌ ಡು ಪ್ಲೆಸಿ (29) ಹಾಗೂ ರಸ್ಸಿ ವಾನ್‌ ಡೆರ್‌ ಡಸ್ಸೇನ್‌ (6) ಕ್ರೀಸ್‌ನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.