ADVERTISEMENT

IND vs SA T20: ವರುಣ್ ಚಕ್ರವರ್ತಿ 5 ವಿಕೆಟ್‌ ಪಡೆದರೂ ಭಾರತಕ್ಕೆ ಸೋಲು

ಪಿಟಿಐ
Published 11 ನವೆಂಬರ್ 2024, 3:07 IST
Last Updated 11 ನವೆಂಬರ್ 2024, 3:07 IST
ಭಾರತದ ಹಾರ್ದಿಕ್‌ ಪಾಂಡ್ಯ ಬ್ಯಾಟಿಂಗ್‌
ಭಾರತದ ಹಾರ್ದಿಕ್‌ ಪಾಂಡ್ಯ ಬ್ಯಾಟಿಂಗ್‌   

ಗೆಬರ್ಹಾ: ದಕ್ಷಿಣ ಆಫ್ರಿಕಾದ ನೆಲದಲ್ಲಿ ಸ್ಪಿನ್ ಮೋಡಿ ಪ್ರದರ್ಶಿಸಿದ ವರುಣ ಚಕ್ರವರ್ತಿ ಐದು ವಿಕೆಟ್ ಗೊಂಚಲು ಗಳಿಸಿದರು. ಆದರೆ ಈ ಸಾಧನೆಯಿಂದಾಗಿ ಭಾರತಕ್ಕೆ ಒಲಿಯಬೇಕಿದ್ದ ಗೆಲುವನ್ನು ಆತಿಥೇಯ ತಂಡದ ಟ್ರಿಸ್ಟನ್ ಸ್ಟಬ್ಸ್ ಮತ್ತು ಗೆರಾಲ್ಡ್‌ ಕೋಝಿ ಕಸಿದುಕೊಂಡರು. 

ಭಾರತ ತಂಡವು ಒಡ್ಡಿದ್ದ 124 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆತಿಥೇಯ ತಂಡವು ಒಂದು ಹಂತದಲ್ಲಿ ಸೋಲಿನ ಭೀತಿ ಎದುರಿಸಿತ್ತು. ಸ್ಪಿನ್ನರ್ ವರುಣ್ ಚಕ್ರವರ್ತಿ (17ಕ್ಕೆ5) ಅದಕ್ಕೆ ಕಾರಣರಾಗಿದ್ದರು. ಯುವ ಬ್ಯಾಟರ್ ಸ್ಟಬ್ಸ್‌ (ಔಟಾಗದೆ 47; 41ಎ, 4X7) ನಿರೀಕ್ಷೆ ಹುಸಿಗೊಳಿಸಲಿಲ್ಲ. ಅವರಿಗೆ ಗೆರಾಲ್ಡ್ (ಔಟಾಗದೆ 19, 9ಎ, 4X2, 6X1)  ಉತ್ತಮ ಆಟದ ಬಲದಿಂದ ದಕ್ಷಿಣ ಆಫ್ರಿಕಾ ತಂಡವು 3 ವಿಕೆಟ್‌ಗಳ ರೋಚಕ ಜಯಗಳಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು.  

ವರುಣ ಸ್ಪಿನ್ ದಾಳಿಯಿಂದಾಗಿ ಆತಿಥೇಯ ತಂಡವು 15.4 ಓವರ್‌ಗಳಲ್ಲಿ 86 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತು.  ಗೆಲುವಿಗೆ ಬೇಕಾಗಿದ್ದ ಬಾಕಿ ರನ್‌ಗಳನ್ನು ಗಳಿಸುವ ಹೊಣೆ ಹೊತ್ತು ನಿಂತಿದ್ದ ಸ್ಟಬ್ಸ್‌ ಮತ್ತು ಗೆರಾಲ್ಡ್‌ ಮುರಿಯದ 8ನೇ ವಿಕೆಟ್ ಜೊತೆಯಾಟದಲ್ಲಿ 42 ರನ್ ಸೇರಿಸಿದರು. ಇದರೊಂದಿಗೆ ಭಾರತದ ಬೌಲರ್‌ಗಳ ದಿಟ್ಟ ಹೋರಾಟಕ್ಕೆ ತೆರೆಬಿತ್ತು.  ದಕ್ಷಿಣ ಆಫ್ರಿಕಾ ತಂಡವು 19 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 128 ರನ್ ಗಳಿಸಿ ಗೆದ್ದಿತು. 

ADVERTISEMENT

ಬ್ಯಾಟರ್‌ಗಳ ವೈಫಲ್ಯ

ಈ ಸರಣಿಯ ಮೊದಲ ಪಂದ್ಯದಲ್ಲಿ ಮಿಂಚಿದ್ದ ಭಾರತದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಇಲ್ಲಿ ವಿಫಲರಾದರು. ಅದರಿಂದಾಗಿ ಭಾರತ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 124 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅದಕ್ಕೆ ತಕ್ಕಂತೆ ಬೌಲರ್‌ಗಳು ದಾಳಿ ನಡೆಸಿದರು.  ಆತಿಥೇಯ ಬಳಗದ ಐವರು ಬೌಲರ್‌ಗಳು ತಲಾ ಒಂದು ವಿಕೆಟ್ ಗಳಿಸಿದರು. 

ಸರಣಿಯ ಮೊದಲ ಪಂದ್ಯದಲ್ಲಿ ಅಬ್ಬರದ ಶತಕ ಬಾರಿಸಿದ್ದ ಸಂಜು ಸ್ಯಾಮ್ಸನ್ ಅವರನ್ನು ಮೊದಲ ಓವರ್‌ನಲ್ಲಿಯೇ ಮಾರ್ಕೊ ಯಾನ್ಸೆನ್ ಕ್ಲೀನ್‌ಬೌಲ್ಡ್ ಮಾಡಿದರು.   ಅಭಿಷೇಕ್ ಶರ್ಮಾ, ನಾಯಕ ಸೂರ್ಯಕುಮಾರ್ ಯಾದವ್ ತಲಾ 4 ರನ್ ಗಳಿಸಿ ನಿರ್ಗಮಿಸಿದರು. ತಿಲಕ್ ವರ್ಮಾ (20; 20ಎ) ಮತ್ತು ಅಕ್ಷರ್ ಪಟೇಲ್ (27; 21ಎ) ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಹಾರ್ದಿಕ್ ಪಾಂಡ್ಯ ಅವರು  45ಎಸೆತಗಳಲ್ಲಿ  ಅಜೇಯ 39 ರನ್‌ ಗಳಿಸಿದರು. 1 ಸಿಕ್ಸರ್ ಮತ್ತು 4 ಬೌಂಡರಿ ಇದ್ದವು.  

ಸಂಕ್ಷಿಪ್ತ ಸ್ಕೋರು:

ಭಾರತ: 20 ಓವರ್‌ಗಳಲ್ಲಿ 6ಕ್ಕೆ124 (ತಿಲಕ್ ವರ್ಮಾ 20, ಅಕ್ಷರ್ ಪಟೇಲ್ 27, ಹಾರ್ದಿಕ್ ಪಾಂಡ್ಯ ಔಟಾಗದೆ 39, ಮಾರ್ಕೊ ಯಾನ್ಸೆನ್ 25ಕ್ಕೆ1, ಗೆರಾಲ್ಡ್ ಕೋಜಿ 25ಕ್ಕೆ1, ಸೈಮಲೇನ್ 20ಕ್ಕೆ1, ಏಡನ್ ಮರ್ಕರಂ 4ಕ್ಕೆ1, ಪೀಟರ್ 20ಕ್ಕೆ1) ದಕ್ಷಿಣ ಆಫ್ರಿಕಾ: 19 ಓವರ್‌ಗಳಲ್ಲಿ 7ಕ್ಕೆ128 (ರೀಜಾ ಹೆನ್ರಿಕ್ಸ್ 24, ಟ್ರಿಸ್ಟನ್ ಸ್ಟಬ್ಸ್ ಔಟಾಗದೆ 47, ಗೆರಾಲ್ಡ್ ಕೋಜಿ ಔಟಾಗದೆ 19, ವರುಣ್ ಚಕ್ರವರ್ತಿ 17ಕ್ಕೆ5, ರವಿ ಬಿಷ್ಣೋಯಿ 21ಕ್ಕೆ1) ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 3 ವಿಕೆಟ್‌ಗಳ ಜಯ, ಸರಣಿ 1–1. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.