ಜೋಹಾನ್ಸ್‌ಬರ್ಗ್: ಇಲ್ಲಿಯ ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾರತ ತಂಡವು ಇದೇ ಮೊದಲ ಬಾರಿ ಟೆಸ್ಟ್ ಪಂದ್ಯದಲ್ಲಿ ಸೋಲನುಭವಿಸಿತು.
ನಾಯಕನಿಗೆ ತಕ್ಕ ಆಟವಾಡಿದ ಡೀನ್ ಎಲ್ಗರ್ (ಅಜೇಯ 96; 188ಎಸೆತ, 4X10) ಆತಿಥೇಯದಕ್ಷಿಣಆಫ್ರಿಕಾತಂಡಕ್ಕೆ 7 ವಿಕೆಟ್‌ಗಳಿಂದ ಗೆಲುವಿನ ಕಾಣಿಕೆ ನೀಡಿದರು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1–1 ರ ಸಮಬಲ ಸಾಧನೆಗೆ ಕಾರಣರಾದರು.
ದಕ್ಷಿಣಆಫ್ರಿಕಾದಲ್ಲಿ ಮೊದಲ ಬಾರಿ ಸರಣಿ ಗೆಲ್ಲುವ ಕನಸು ಕಾಣುತ್ತಿರುವ ಭಾರತ ತಂಡವು ಇದೇ 11ರಿಂದ ಕೇಪ್‌ಟೌನ್‌ನಲ್ಲಿ ಆರಂಭವಾಗಲಿರುವ ಪಂದ್ಯದಲ್ಲಿ ಜಯಿಸಬೇಕು.
ಬುಧವಾರ ಸಂಜೆ240 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದದಕ್ಷಿಣಆಫ್ರಿಕಾತಂಡವು ದಿನದಾಟದ ಮುಕ್ತಾಯಕ್ಕೆ 2 ವಿಕೆಟ್‌ಗಳಿಗೆ 118 ರನ್ ಗಳಿಸಿತ್ತು.ಗುರುವಾರ ಬೆಳಿಗ್ಗೆಯಿಂದ ಸುರಿದ ಮಳೆಯಿಂದಾಗಿ ಮಧ್ಯಾಹ್ನ ಆಟ ಆರಂಭವಾಯಿತು.
ಮಧ್ಯಾಹ್ನ ಆರಂಭವಾದ ನಂತರ ಭಾರತದ ಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಿದ ಎಲ್ಗರ್‌ಗೆ ನಾಲ್ಕು ರನ್‌ಗಳಿಂದ ಶತಕ ಕೈತಪ್ಪಿತು. ಆದರೆ, ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು.ಆತಿಥೇಯ ಬಳಗವು 67.4 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 243 ರನ್ ಗಳಿಸಿತು. ನಾಲ್ಕನೇ ದಿನದಾಟದಲ್ಲಿ ಭಾರತಕ್ಕೆ ಲಭಿಸಿದ್ದು ಒಂದು ವಿಕೆಟ್ ಮಾತ್ರ.
ಡೀನ್ ಜೊತೆಗೆ ಮೂರನೇ ವಿಕೆಟ್‌ಗೆ 82 ರನ್ ಸೇರಿಸಿದ್ದ ರಸಿ ವ್ಯಾನ್ ಡರ್ ಡಸೆ (40 ರನ್) ವಿಕೆಟ್ ಅನ್ನು ಮೊಹಮ್ಮದ್ ಶಮಿ ಗಳಿಸಿದರು.
ಆದರೆ ಡೀನ್ ಜೊತೆಗೂಡಿದ ಭರವಸೆಯ ಆಟಗಾರ ತೆಂಬಾ ಬವುಮಾ (ಅಜೇಯ 23; 45ಎ) ತಂಡವನ್ನು ಸುರಕ್ಷಿತವಾಗಿ ಗೆಲುವಿನತ್ತ ಮುನ್ನಡೆಸಿದರು.ದಕ್ಷಿಣಆಫ್ರಿಕಾತಂಡವು ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮೊತ್ತದ ಮುನ್ನಡೆ ಗಳಿಸಲೂ ಬವುಮಾ ಅವರ ಅರ್ಧಶತಕ ನೆರವಾಗಿತ್ತು.
ಮೊದಲ ಇನಿಂಗ್ಸ್‌ನಲ್ಲಿ ಏಳು ವಿಕೆಟ್ ಗಳಿಸಿದ್ದ ಭಾರತದ ಮಧ್ಯಮವೇಗಿ ಶಾರ್ದೂಲ್ ಠಾಕೂರ್ ಅವರಿಗೆ ಈ ಇನಿಂಗ್ಸ್‌ನಲ್ಲಿ ಕೇವಲ ಒಂದು ವಿಕೆಟ್ ಮಾತ್ರ ಲಭಿಸಿತು.
ವಾಂಡರರ್ಸ್‌ನಲ್ಲಿ ಭಾರತಕ್ಕೆ ಇದು ಆರನೇ ಪಂದ್ಯ. ಇದಕ್ಕೂ ಮುನ್ನ ಇಲ್ಲಿ ಭಾರತ ತಂಡವು ಎರಡು ಗೆಲುವು ಮತ್ತು ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿತ್ತು.
ವಿರಾಟ್ ಕೊಹ್ಲಿ ಬೆನ್ನುನೋವಿನಿಂದಾಗಿ ಕಣಕ್ಕಿಳಿದಿರಲಿಲ್ಲ. ಅವರ ಬದಲಿಗೆ ಕೆ.ಎಲ್. ರಾಹುಲ್ ತಂಡವನ್ನು ಮುನ್ನಡೆಸಿದರು. ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ ಸಾಧಾರಣ ಮೊತ್ತಕ್ಕೆ ಆಲೌಟ್ ಆಗಿತ್ತು.
ಸರಣಿಯ ಮೊದಲ ಪಂದ್ಯವನ್ನು ಭಾರತ ತಂಡವು ಜಯಿಸಿತ್ತು. ಸೆಂಚುರಿಯನ್ ಕ್ರೀಡಾಂಗಣದಲ್ಲಿ ಗೆದ್ದ ಏಷ್ಯಾದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನಿಂಗ್ಸ್ 202 (63.1 ಓವರ್)
ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ 229 (79.4 ಓವರ್)
ಭಾರತ ಎರಡನೇ ಇನಿಂಗ್ಸ್ 266 (60.1 ಓವರ್)
ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್ 3ಕ್ಕೆ 243 (67.4 ಓವರ್)
(ಬುಧವಾರ 40 ಓವರ್‌ಗಳಲ್ಲಿ 2ಕ್ಕೆ 118)
ಎಲ್ಗರ್ ಔಟಾಗದೆ 96 (188 ಎ, 4X10), ಡಸೆ ಸಿ ಪೂಜಾರ ಬಿ ಶಮಿ 40 (92 ಎ, 4X5), ತೆಂಬ ಔಟಾಗದೆ 23 (45 ಎ, 4X3)
ಇತರೆ: (ಲೆಗ್‌ಬೈ 8, ನೋಬಾಲ್ 1, ವೈಡ್ 16) 25
ವಿಕೆಟ್ ಪತನ:
3-175 (ರಸಿ ವ್ಯಾನ್ ಡಸೆ, 53.6)
ಬೌಲಿಂಗ್: ಜಸ್‌ಪ್ರೀತ್ ಬೂಮ್ರಾ 17–2–70–0, ಮೊಹಮ್ಮದ್ ಶಮಿ 17–3–55–1, ಶಾರ್ದೂಲ್ ಠಾಕೂರ್ 16–2–47–1, ಮೊಹಮ್ಮದ್ ಸಿರಾಜ್ 6–0–37–0, ರವಿಚಂದ್ರನ್ ಅಶ್ವಿನ್ 11.4–2–26–1
ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 7 ವಿಕೆಟ್‌ಗಳ ಜಯ; 3 ಪಂದ್ಯಗಳ ಸರಣಿ 1–1 ಸಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.