ADVERTISEMENT

ಸಚಿನ್‌, ಡೊನಾಲ್ಡ್‌, ಫಿಟ್ಜ್‌ಪ್ಯಾಟ್ರಿಕ್‌ಗೆ ಐಸಿಸಿ ಹಾಲ್‌ ಆಫ್‌ ಫೇಮ್‌ ಗೌರವ

ಕ್ರಿಕೆಟ್‌ ದಿಗ್ಗಜರು

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 11:55 IST
Last Updated 19 ಜುಲೈ 2019, 11:55 IST
   

ಲಂಡನ್‌:ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ರಿಕೆಟಿಗ, ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಹೆಸರನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯ ಪ್ರತಿಷ್ಠಿತ ‘ಹಾಲ್‌ ಆಫ್‌ ಫೇಮ್‌’ ಪಟ್ಟಿಗೆ ಸೇರ್ಪಡೆ ಮಾಡಿದೆ.

ದಕ್ಷಿಣ ಆಫ್ರಿಕಾದ ಅಲನ್‌ ಡೊನಾಲ್ಡ್‌ ಮತ್ತು ಭಾರತದ ಸಚಿನ್‌ ತೆಂಡೂಲ್ಕರ್‌ ಹೆಸರುಗಳು ಹಾಲ್‌ ಆಫ್‌ ಫೇಮ್‌ಗೆ ಸೇರ್ಪಡೆಯಾಗಿವೆ. ಎರಡು ಬಾರಿ ವಿಶ್ವಕಪ್‌ ಪ್ರಶಸ್ತಿ ವಿಜೇತ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ಆಟಗಾರ್ತಿ ಕ್ಯಾಥ್ರಿನ್‌ ಫಿಟ್ಸ್‌ಪ್ಯಾಟ್ರಿಕ್‌ ಸಹ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದೊಂದು ದೊಡ್ಡ ಗೌರವ ಎಂದು ಸಚಿನ್‌ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ತೆಂಡೂಲ್ಕರ್‌ ಹಾಲ್‌ ಆಫ್‌ ಫೇಮ್‌ ಗೌರವಕ್ಕೆ ಪಾತ್ರರಾಗಿರುವ ಭಾರತದ ಆರನೇ ಕ್ರಿಕೆಟಿಗ. ಈ ಹಿಂದೆ, ಬಿಷನ್‌ ಸಿಂಗ್‌ ಬೇಡಿ (2009), ಕಪಿಲ್‌ ದೇವ್‌ (2009), ಸುನಿಲ್‌ ಗವಾಸ್ಕರ್‌ (2009), ಅನಿಲ್‌ ಕುಂಬ್ಳೆ (2015) ಹಾಗೂ ರಾಹುಲ್‌ ದ್ರಾವಿಡ್‌ (2018) ಈ ಗೌರವಹೊಂದಿದ್ದಾರೆ.

46 ವರ್ಷ ವಯಸ್ಸಿನ ಬಲಗೈ ಬ್ಯಾಟ್ಸ್‌ಮನ್‌ ಸಚಿನ್‌ ತೆಂಡೂಲ್ಕರ್‌, ಅಂತರರಾಷ್ಟ್ರೀಯ ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ ಎರಡರಲ್ಲೂ ಅತಿ ಹೆಚ್ಚು ರನ್‌ ಕಲೆ ಹಾಕಿರುವ ದಾಖಲೆ ಹೊಂದಿದ್ದಾರೆ. ಒಟ್ಟು 34,357 ರನ್‌ ಗಳಿಸಿದ್ದು, 100 ಅಂತರರಾಷ್ಟ್ರೀಯ ಶತಕಗಳನ್ನು ದಾಖಲಿಸಿರುವ ಏಕೈಕ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.

2003ರಲ್ಲಿ ವೃತ್ತಿ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ದಕ್ಷಿಣ ಆಫ್ರಿಕಾದ ಬೌಲರ್‌ ಅಲೆನ್‌ ಡೊನಾಲ್ಡ್‌(52), ಅತ್ಯುತ್ತಮ ಬೌಲರ್‌ ಆಗಿ ಗುರುತಿಸಿಕೊಂಡವರು. ಟೆಸ್ಟ್‌ನಲ್ಲಿ 330 ವಿಕೆಟ್‌ ಮತ್ತು ಏಕದಿನ ಪಂದ್ಯದಲ್ಲಿ 272 ವಿಕೆಟ್ ಕಬಳಿಸಿದ ದಾಖಲೆ ಹೊಂದಿದ್ದಾರೆ.

ಆಸ್ಟ್ರೇಲಿಯಾದ ಆಟಗಾರ್ತಿ ಫಿಟ್ಜ್‌ಪ್ಯಾಟ್ರಿಕ್‌ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಗಳಿಸಿರುವವರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 180 ವಿಕೆಟ್‌ ಹಾಗೂ ಟೆಸ್ಟ್‌ನಲ್ಲಿ 60 ವಿಕೆಟ್‌ ಪಡೆದಿದ್ದಾರೆ. ಇವರು ತರಬೇತಿ ನೀಡಿದ್ದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡ 2013ರಲ್ಲಿ ವಿಶ್ವಕಪ್‌, 2012 ಮತ್ತು 2014 ಟಿ20 ವಿಶ್ವಕಪ್‌ ಚಾಂಪಿಯನ್‌ ಪಟ್ಟ ಗಳಿಸಿವೆ.

ಒಟ್ಟು 87 ಕ್ರಿಕೆಟಿಗರು ಈ ಗೌರವ ಪಡೆದಿದ್ದಾರೆ. ಇಂಗ್ಲೆಂಡ್‌ನ 28 ಕ್ರಿಕೆಟಿಗರು, ಆಸ್ಟ್ರೇಲಿಯಾದ 26, ವೆಸ್ಟ್‌ ಇಂಡೀಸ್‌ನ 18, ಪಾಕಿಸ್ತಾನದ ಐವರು, ನ್ಯೂಜಿಲೆಂಡ್‌ ಮತ್ತು ದಕ್ಷಿಣ ಆಫ್ರಿಕಾದ ತಲಾ ಮೂವರು ಹಾಗೂ ಶ್ರೀಲಂಕಾದ ಒಬ್ಬ ಕ್ರಿಕೆಟಿಗ ಈ ವಿಶೇಷ ಗೌರವದ ಕ್ಲಬ್‌ನಲ್ಲಿ ಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.