ADVERTISEMENT

ಸಚಿನ್, ಯುವಿ ಗತಕಾಲದ ಬ್ಯಾಟಿಂಗ್ ವೈಭವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮಾರ್ಚ್ 2021, 16:51 IST
Last Updated 13 ಮಾರ್ಚ್ 2021, 16:51 IST
ಸಚಿನ್ ಹೊಡೆತದ ಭಂಗಿ (ಚಿತ್ರ ಕೃಪೆ: ಟ್ವಿಟರ್ - ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್)
ಸಚಿನ್ ಹೊಡೆತದ ಭಂಗಿ (ಚಿತ್ರ ಕೃಪೆ: ಟ್ವಿಟರ್ - ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್)   

ರಾಯಿಪುರ: ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟ್ವೆಂಟಿ-20 ಟೂರ್ನಿಯಲ್ಲಿ ಇಂಡಿಯಾ ಲೆಜೆಂಡ್ಸ್ ತಂಡದ ನಾಯಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ 'ಸಿಕ್ಸರ್ ಕಿಂಗ್' ಖ್ಯಾತಿಯ ಯುವರಾಜ್ ಸಿಂಗ್ ಬಿರುಸಿನ ಅರ್ಧಶತಕ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ.

ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ವಿರುದ್ಧ ಶನಿವಾರ ನಡೆಯುತ್ತಿರುವ ಪಂದ್ಯದಲ್ಲಿ ಸಚಿನ್ ಹಾಗೂ ಯುವಿ ತಮ್ಮ ಗತಕಾಲದ ಬ್ಯಾಟಿಂಗ್ ವೈಭವವನ್ನು ನೆನಪಿಸಿದರು. ಈ ಮೂಲಕ ಇಂಡಿಯಾ ಲೆಜೆಂಡ್ಸ್ ಮೂರು ವಿಕೆಟ್ ನಷ್ಟಕ್ಕೆ 204 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದೆ.

ಭಾರತಕ್ಕೆ ಆರಂಭದಲ್ಲೇ ವೀರೇಂದ್ರ ಸೆಹ್ವಾಗ್ (6) ವಿಕೆಟ್ ನಷ್ಟವಾದರೂ ಸುಬ್ರಹ್ಮಣ್ಯ ಬದ್ರೀನಾಥ್ ಜೊತೆ ಸೇರಿದ ಸಚಿನ್ ತೆಂಡೂಲ್ಕರ್ ಇನ್ನಿಂಗ್ಸ್ ಬೆಳೆಸಿದರು.

ADVERTISEMENT

47ರ ಹರೆಯದಲ್ಲೂ ಬಹಳ ಸಲೀಸಾಗಿ ಮೈದಾನದ ಎಲ್ಲ ದಿಕ್ಕಿಗೂ ಚೆಂಡನ್ನು ಅಟ್ಟಿದ ಸಚಿನ್ ತೆಂಡೂಲ್ಕರ್ 37 ಎಸೆತಗಳಲ್ಲಿ 60 ರನ್ ಬಾರಿಸಿದರು. ಇದರಲ್ಲಿ 9 ಅಮೋಘ ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು.

ಕೊನೆಯ ಹಂತದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಯುವಿ ಕೇವಲ 22 ಎಸೆತಗಳಲ್ಲಿ ಫಿಫ್ಟಿ ಬಾರಿಸಿದರು. ಇದರಲ್ಲಿ ಆರು ಮನಮೋಹಕ ಸಿಕ್ಸರ್‌ಗಳು ಮತ್ತು ಎರಡು ಬೌಂಡರಿಗಳು ಸೇರಿದ್ದವು. ಯುವಿ52 ರನ್ ಗಳಿಸಿ ಅಜೇಯರಾಗುಳಿದರು.

ಅಲ್ಲದೆ ಒಂದೇ ಓವರ್‌ನಲ್ಲಿ ಸತತನಾಲ್ಕು ಸಿಕ್ಸರ್ ಸಿಡಿಸಿ ಮಿಂಚಿದರು. ಈಮೂಲಕ 2007ರ ಚೊಚ್ಚಲ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಓವರ್‌ವೊಂದರ ಎಲ್ಲ ಆರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿರುವ ನೆನಪನ್ನು ತಾಜಾವಾಗಿಸಿದರು.

'ಕ್ರಿಕೆಟ್ ದೇವರು' ಮತ್ತು 'ಸಿಕ್ಸರ್ ಕಿಂಗ್' ಆಟವನ್ನು ಮಗದೊಮ್ಮೆ ಕಣ್ಣಾರೆ ನೋಡುವ ಅದೃಷ್ಟ ಅಭಿಮಾನಿಗಳಿಗೆ ಒಲಿದಿದೆ. ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದು ಟೂರ್ನಿಯ ಉದ್ದೇಶವಾಗಿದೆ.

ವೆಸ್ಟ್‌ಇಂಡೀಸ್‌ನ ಎಡಗೈ ಬ್ಯಾಟಿಂಗ್ ದಿಗ್ಗಜ ಬ್ರಿಯಾನ್ ಲಾರಾ ಸೇರಿದಂತೆ ಅನೇಕ ಮಾಜಿ ದಿಗ್ಗಜರು ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ.

ಭಾರತ ಲೆಜೆಂಡ್ಸ್ ತಂಡವನ್ನು ಸಚಿನ್, ಸೆಹ್ವಾಗ್ ಹೊರತಾಗಿ ಯುವರಾಜ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಮುನಾಫ್ ಪಟೇಲ್ ಹಾಗೂ ಕರ್ನಾಟಕದ ವಿನಯ್ ಕುಮಾರ್ ಸೇರಿದಂತೆ ಮಾಜಿ ಪ್ರಮುಖರು ಪ್ರತಿನಿಧಿಸುತ್ತಿದ್ದಾರೆ.

2013ನೇ ಇಸವಿಯಲ್ಲಿ ಸಚಿನ್ ತೆಂಡೂಲ್ಕರ್ ಅಂತರ ರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಈಗ ಎಂಟು ವರ್ಷಗಳ ಬಳಿಕವೂ ಬ್ಯಾಟಿಂಗ್ ಕೌಶಲ್ಯ ಮೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ತ ಯುವಿ 2017ರಲ್ಲಿ ಕೊನೆಯದಾಗಿ ಅಂತರ ರಾಷ್ಟ್ರೀಯ ಕ್ರಿಕೆಟ್ ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.