ADVERTISEMENT

51ನೇ ವಸಂತಕ್ಕೆ ಕಾಲಿಟ್ಟ ಸಚಿನ್‌ ತೆಂಡೂಲ್ಕರ್ ವೃತ್ತಿ ಜೀವನದ 5 ಪ್ರಮುಖ ಘಟ್ಟಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಏಪ್ರಿಲ್ 2024, 11:09 IST
Last Updated 24 ಏಪ್ರಿಲ್ 2024, 11:09 IST
   

ಸಣ್ಣ ವಯಸ್ಸಿನಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಸಚಿನ್ ಕ್ರಿಕೆಟ್‌ ಲೋಕದ ಚಾಂಪಿಯನ್ ಬ್ಯಾಟರ್ ಆಗಿಯಷ್ಟೇ ಬೆಳೆಯಲಿಲ್ಲ. ಕೋಟಿ ಕೋಟಿ ಅಭಿಮಾನಿಗಳ ಹೃದಯಬಡಿತದಲ್ಲಿ ಇದ್ದಾರೆ. ಕ್ರಿಕೆಟ್‌ ಪ್ರಿಯರಿಂದ ‘ದೇವರ’ ಪಟ್ಟವೂ ಲಭಿಸಿತು. 24 ವರ್ಷ ಆಡಿದ ಸಚಿನ್ ಒಂದು ಯುಗವನ್ನೇ ಸೃಷ್ಟಿಸಿದ್ದರು. ಇದೀಗ 51ನೇ ವಸಂತ ಪೂರೈಸಿದ್ದಾರೆ. 

16ನೇ ವಯಸ್ಸಿನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ

ಚಿತ್ರ ಕೃಪೆ: ಸಚಿನ್‌ ತೆಂಡೂಲ್ಕರ್ ಇನ್‌ಸ್ಟಾಗ್ರಾಂ

ತಮ್ಮ 16ನೇ ವಯಸ್ಸಿನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಚಿನ್ ತೆಂಡೂಲ್ಕರ್, ಕರಾಚಿನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಆಡಿದ್ದರು. ಆ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿದ ಅತ್ಯಂತ ಕಿರಿಯ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ADVERTISEMENT

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಾಧನೆ

ಚಿತ್ರ ಕೃಪೆ: ಸಚಿನ್‌ ತೆಂಡೂಲ್ಕರ್ ಇನ್‌ಸ್ಟಾಗ್ರಾಂ

ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಶತಕ ಗಳಿಸುವುದೇ ದೊಡ್ಡ ಸಾಧನೆ ಎಂಬ ಕಾಲವಿತ್ತು. ಆದರೆ 50–50 ಓವರ್‌ಗಳ ಪಂದ್ಯದಲ್ಲಿ ದ್ವಿಶತಕವನ್ನೂ ಬಾರಿಸಬಹುದು ಎಂದು ತೋರಿಸಿಕೊಟ್ಟವರು ಭಾರತದ ‘ಮಾಸ್ಟರ್‌ ಬ್ಲಾಸ್ಟರ್‌’ ಸಚಿನ್ ತೆಂಡೂಲ್ಕರ್.

2010ರ ಫೆಬ್ರುವರಿ 24ರಂದು ಗ್ವಾಲಿಯರ್‌ನ ಕ್ಯಾಪ್ಟನ್ ರೂಪ್‌ ಸಿಂಗ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಇನಿಂಗ್ಸ್ ಆರಂಭಿಸಿದ್ದ ಸಚಿನ್ (ಅಜೇಯ 200; 147ಎಸೆತ, 226ನಿಮಿಷ, 25ಬೌಂಡರಿ, 3ಸಿಕ್ಸರ್) ವಿಶ್ವದಾಖಲೆ ಬರೆದಿದ್ದರು. ಈ ಪಂದ್ಯದಲ್ಲಿ ಭಾರತವು 153 ರನ್‌ಗಳಿಂದ ಜಯಿಸಿತ್ತು.

ವಿಶ್ವಕಪ್ ಗೆದ್ದ ಕ್ಷಣ

ಚಿತ್ರ ಕೃಪೆ: ರಾಯಿಟರ್ಸ್‌

2011 ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯ ಭಾರತದ ಪಾಲಿಗೆ ಮರೆಯಲಾಗದ ಕ್ಷಣ. ಕ್ರಿಕೆಟ್ ಪ್ರೇಮಿಗಳ ದಶಕಗಳ ಕನಸು ಅಂದು ನನಸಾಗಿತ್ತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಸೋಲಿಸಿದ ಮಹೇಂದ್ರ ಸಿಂಗ್ ನಾಯಕತ್ವದ ಭಾರತ ತಂಡ ಟ್ರೋಫಿಯನ್ನು ಜಯಿಸಿತ್ತು. ‍ಈ ಪಂದ್ಯದಲ್ಲಿ ಸಚಿನ್ ನಿರ್ಣಾಯಕ ಪಾತ್ರ ವಹಿಸಿದ್ದರು. ಅಲ್ಲದೇ ವಿಶ್ವಕಪ್‌ನ ಗೆಲುವನ್ನು ಧೋನಿ ಪಡೆ ಸಚಿನ್‌ಗೆ ಸಮರ್ಪಿಸಿತ್ತು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100ನೇ ಶತಕ

ಚಿತ್ರಕೃಪೆ: ಪಿಟಿಐ

2012ರ ಮಾರ್ಚ್‌ 16ರಂದು ಢಾಕಾದಲ್ಲಿ ನಡೆದ ಏಪ್ಯಾಕಪ್‌ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸಚಿನ್ ಶತಕ ಗಳಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು. ಜತೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರೆನಿಸಿಕೊಂಡರು.

ಈ ಪಂದ್ಯದಲ್ಲಿ ಸಚಿನ್ 147 ಎಸೆತಗಳಲ್ಲಿ 114 ರನ್ ಗಳಿಸಿದ್ದರು. ಇದರಲ್ಲಿ 12 ಬೌಂಡರಿ, 1 ಸಿಕ್ಸರ್ ಸೇರಿದ್ದವು.

ಏಕದಿನ ಕ್ರಿಕೆಟ್‌ಗೆ ವಿದಾಯ

ಚಿತ್ರಕೃಪೆ: ಪಿಟಿಐ

2012ರ ಡಿಸೆಂಬರ್‌ನಲ್ಲಿ ಏಕದಿನ ಕ್ರಿಕೆಟ್‌ಗೆ ಸಚಿನ್‌ ವಿದಾಯ ಘೋಷಿಸಿದ್ದರು. 463 ಏಕದಿನ ಪಂದ್ಯಗಳನ್ನು ಆಡಿರುವ ಅವರು 18,426 ರನ್ ಗಳಿಸಿದ್ದಾರೆ. ಬಳಿಕ 2013ರ ನವೆಂಬರ್‌ನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. 200 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 15,921 ರನ್ ಕಲೆ ಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.