ಐಪಿಎಲ್–2020 ಟೂರ್ನಿಯ 43ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕಿಂಗ್ಸ್ ಇಲವೆನ್ ಪಂಜಾಬ್ ತಂಡಗಳು ಸೆಣಸಾಟ ನಡೆಸಿದ್ದವು. ಅಕ್ಟೋಬರ್ 24 ರಂದು ನಡೆದ ಈ ಪಂದ್ಯದ ಸಂದರ್ಭ ಚೆಂಡು ಬಡಿದು ರೈಸರ್ಸ್‌ನ ಆಲ್‌ರೌಂಡರ್ ವಿಜಯ್ ಶಂಕರ್ ತಲೆಗೆ ಪೆಟ್ಟಾಗಿತ್ತು. ಈ ಸಂಬಂಧ ಅಭಿಪ್ರಾಯ ವ್ಯಕ್ತಪಡಿಸಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ವೃತ್ತಿಪರ ಕ್ರಿಕೆಟ್‌ನಲ್ಲಿ ಹೆಲ್ಮೆಟ್ ಬಳಕೆ ಕಡ್ಡಾಯವಾಗಬೇಕು ಎಂದು ಹೇಳಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 124 ರನ್ ಗಳಿಸಿತ್ತು. ಈ ಗುರಿ ಎದುರು ಬ್ಯಾಟಿಂಗ್ ಆರಂಭಿಸಿದ ರೈಸರ್ಸ್ ಕೇವಲ 114 ರನ್ ಗಳಿಸಿ ಆಲೌಟ್ ಆಗಿತ್ತು. 18ನೇ ಓವರ್‌ನಲ್ಲಿ ಜೇಸನ್ ಹೋಲ್ಡರ್ ಜೊತೆಗೆ ಶಂಕರ್ ಕ್ರೀಸ್‌ನಲ್ಲಿದ್ದರು. ಈ ಓವರ್‌ನ 4ನೇ ಎಸೆತವನ್ನು ಗಲ್ಲಿ ಫೀಲ್ಡರ್‌ನತ್ತ ಆಡಿದ ಹೋಲ್ಡರ್ ರನ್‌ಗಾಗಿ ಓಡಿದರು. ನಾನ್‌ಸ್ಟ್ರೈಕರ್ ಆಗಿದ್ದ ಶಂಕರ್ ಮತ್ತೊಂದು ತುದಿಯತ್ತ ಸಾಗಿದರು.
ಈ ವೇಳೆ ಶಂಕರ್ ಅವರನ್ನು ರನ್‌ಔಟ್ ಮಾಡಲು ಯತ್ನಿಸಿದ ಫೀಲ್ಡರ್ ನಿಕೋಲಸ್ ಪೂರನ್ ಚೆಂಡನ್ನು ಸ್ಟಂಪ್ಸ್‌ನತ್ತ ಎಸೆದರು. ಆದರೆ ಚೆಂಡು ಬ್ಯಾಟ್ಸ್‌ಮನ್ ಹೆಲ್ಮೆಟ್‌ಗೆ ಬಡಿಯಿತು. ಶಂಕರ್ ಕುಸಿದು ಬಿದ್ದರು. ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ವಲ್ಪ ಸಮಯದ ಬಳಿಕ ಸುಧಾರಿಸಿಕೊಂಡ ಅವರು ಬ್ಯಾಟಿಂಗ್ ಮುಂದುವರಿಸಿದರು. ಒಂದುವೇಳೆ ಶಂಕರ್ ಹೆಲ್ಮೆಟ್ ಧರಿಸದೇ ಇದ್ದಿದ್ದರೆ ಗಂಭೀರವಾಗಿ ಗಾಯಗೊಂಡಿರುತ್ತಿದ್ದರು. ಆದಾಗ್ಯೂಅವರು ಟೂರ್ನಿಯಿಂದ ಹೊರಗುಳಿದಿದ್ದಾರೆ.
ಈ ಘಟನೆಯನ್ನು ಉದಾಹರಣೆಯನ್ನಾಗಿ ನೀಡಿ ಟ್ವೀಟ್ ಮಾಡಿರುವ ಸಚಿನ್, ಎಲ್ಲ ವೃತ್ತಿಪರ ಕ್ರಿಕೆಟಿಗರು ಹೆಲ್ಮೆಟ್ ಧರಿಸುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಇದನ್ನು ಆದ್ಯತೆಯ ವಿಚಾರವನ್ನಾಗಿಸುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೂ (ಐಸಿಸಿ) ಮನವಿ ಮಾಡಿದ್ದಾರೆ.
‘ಆಟವು ಸಾಕಷ್ಟು ವೇಗ ಪಡೆದುಕೊಂಡಿದೆ. ಆದರೆ, ಸುರಕ್ಷಿತವಾಗುತ್ತಿದೆಯೇ? ಇತ್ತೀಚೆಗೆ ನಾವು ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದ್ದೇವೆ. ಸ್ಪಿನ್ನರ್ ಅಥವಾ ವೇಗಿ ಇರಲಿ, ವೃತ್ತಿಪರ ಮಟ್ಟದ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಬೇಕು. ಇದನ್ನು ಆದ್ಯತೆಯ ವಿಚಾರವಾಗಿ ಪರಿಗಣಿಸುವಂತೆ ಐಸಿಸಿಗೆ ಮನವಿ ಮಾಡುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ 2014ರ ನವೆಂಬರ್ 25ರಂದು ನಡೆದ ದೇಶೀ ಕ್ರಿಕೆಟ್ ಪಂದ್ಯವೊಂದರಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಫಿಲಿಪ್ ಹ್ಯೂಸ್ ಅವರ ತಲೆಗೆ ಬೌನ್ಸರ್ ಎಸೆತವೊಂದು ಅಪ್ಪಳಿಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಎರಡು ದಿನಗಳ ನಂತರ ಮೃತಪಟ್ಟಿದ್ದರು. ಆ ಪ್ರಕರಣದ ಬಳಿಕ ತಲೆ ಗಾಯಕ್ಕೆ ಸಂಬಂಧಿಸಿದ ಸುರಕ್ಷತಾ ಮಾನದಂಡಗಳನ್ನು ಬದಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.