ಬೆಂಗಳೂರು: ವಿಶ್ವದ ಶ್ರೇಷ್ಠ ಲೆಗ್ ಸ್ಪಿನ್ನರ್ ಎಂದೇ ಮಾನ್ಯರಾದ ಆಸ್ಟ್ರೇಲಿಯಾದ ಶೇನ್ ವಾರ್ನ್ (52) ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.
ಶೇನ್ ವಾರ್ನ್ ನಿಧನಕ್ಕೆ ಭಾರತದ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.
‘ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಭಾರತೀಯರಿಗೆ ನಿಮ್ಮ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಹಾಗೆಯೇ ಭಾರತೀಯರ ಹೃದಯದಲ್ಲೂ ನೀವು ವಿಶೇಷ ಸ್ಥಾನ ಗಳಿಸಿದ್ದೀರಿ. ನೀವಿದ್ದ ಜಾಗದಲ್ಲಿ ಹರುಷಕ್ಕೆ ಕೊರತೆ ಇರುತ್ತಿರಲಿಲ್ಲ. ನಿಮ್ಮ ಸಾವು ತುಂಬಾ ದುಃಖ ತಂದಿದೆ. ವಿಲ್ ಮಿಸ್ ಯು ವಾರ್ನಿ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮೈದಾನದಲ್ಲಿ ನಮ್ಮ ಸ್ಪರ್ಧೆ ಮತ್ತು ಮೈದಾನದ ಹೊರಗೆ ನಮ್ಮ ಹಾಸ್ಯಮಯ ಕ್ಷಣಗಳನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ’ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
‘ನಂಬಲು ಸಾಧ್ಯವಿಲ್ಲ. ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರು, ಸೂಪರ್‌ಸ್ಟಾರ್ ಶೇನ್ ವಾರ್ನ್ ಇನ್ನಿಲ್ಲ. ಜೀವನ ತುಂಬಾ ದುರ್ಬಲವಾಗಿದೆ. ಆದರೆ, ಇದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು’ ಎಂದು ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ), ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಅನೇಕರು ಟ್ವಿಟರ್‌ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.
ವಾರ್ನ್ ವೃತ್ತಿಜೀವನ...
2007ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಶೇನ್ ವಾರ್ನ್ ಅವರು ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ಅಗಲಿದ್ದಾರೆ. 145 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಶೇನ್ ವಾರ್ನ್ ವೃತ್ತಿ ಬದುಕು 1992ರಲ್ಲಿ ಭಾರತದ ವಿರುದ್ಧ ಚೊಚ್ಚಲ ಪಂದ್ಯದಿಂದ ಆರಂಭವಾಗಿತ್ತು. ವಾರ್ನ್ ಟೆಸ್ಟ್ ಬದುಕಿನಲ್ಲಿ ಒಟ್ಟಾರೆ 708 ವಿಕೆಟ್ ಪಡೆದಿದ್ದಾರೆ. ಹಾಗೆಯೇ 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್ ಪಡೆದು ಮಿಂಚಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.