ADVERTISEMENT

ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವಿಕೆಟ್ ಕೀಪರ್, ಬ್ಯಾಟರ್ ವೃದ್ಧಿಮಾನ್ ಸಹಾ

ಪಿಟಿಐ
Published 4 ನವೆಂಬರ್ 2024, 5:11 IST
Last Updated 4 ನವೆಂಬರ್ 2024, 5:11 IST
<div class="paragraphs"><p>ವೃದ್ಧಿಮಾನ್‌ ಸಹಾ </p></div>

ವೃದ್ಧಿಮಾನ್‌ ಸಹಾ

   

ಪಿಟಿಐ ಸಂಗ್ರಹ ಚಿತ್ರ

ನವದೆಹಲಿ: ಹಿರಿಯ ವಿಕೆಟ್‌ ಕೀಪರ್‌– ಬ್ಯಾಟರ್‌ ವೃದ್ಧಿಮಾನ್ ಸಹಾ ಅವರು ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಹಾಲಿ ರಣಜಿ ಋತು ತಮ್ಮ ಪಾಲಿನ ಕೊನೆಯದು ಎಂದು ಭಾನುವಾರ ತಡರಾತ್ರಿ ಘೋಷಿಸಿದ್ದಾರೆ.

ADVERTISEMENT

40 ವರ್ಷ ವಯಸ್ಸಿನ ವೃದ್ಧಿಮಾನ್ ಅವರು 2010ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ನಂತರ 40 ಟೆಸ್ಟ್‌ ಮತ್ತು 9 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

‘ಕ್ರಿಕೆಟ್‌ನ ಸುಮಧುರ ಪಯಣದಲ್ಲಿ ಈ ಋತು ನನ್ನ ಪಾಲಿನ ಕೊನೆಯದು. ಕೊನೆಯ ಬಾರಿ ಬೆಂಗಾಲ ತಂಡವನ್ನು ಪ್ರತಿನಿಧಿಸುತ್ತಿರುವುದು ನನಗೆ ಗೌರವದ ವಿಷಯ. ರಣಜಿ ನಂತರ ಕ್ರಿಕೆಟ್‌ನಿಂದ  ನಿವೃತ್ತನಾಗುತ್ತೇನೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಅವರು ಪೋಸ್ಟ್‌ ಮಾಡಿದ್ದಾರೆ.

‘ಈ ಋತುವನ್ನು ಸ್ಮರಣೀಯವಾಗಿಸೋಣ’ ಎಂದು ಅವರು ಭಾನುವಾರ ತಡರಾತ್ರಿ ಹಾಕಿದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಅವರು ಮಹೇಂದ್ರ ಸಿಂಗ್ ಧೋನಿ ರೀತಿಯ ಪ್ರಭಾವಳಿ ಹೊಂದಿರಲಿಲ್ಲ. ಅಥವಾ ರಿಷಭ್ ಪಂತ್ ಅವರಂತೆ ಆಕ್ರಮಣಕಾರಿ ಆಟದಿಂದ ಹೆಸರು ಮಾಡಲಿಲ್ಲ. ಆದರೆ ವಿಕೆಟ್‌ ಕೀಪರ್ ಆಗಿ ಅವರು ತಮ್ಮ ಕೆಲಸದಲ್ಲಿ ಅಚ್ಚುಕಟ್ಟುತನ ನಿಭಾಯಿಸಿದ್ದರು.

ಅವರು ದೀರ್ಘ ಕಾಲ ಟೆಸ್ಟ್‌ ತಂಡದ ಭಾಗವಾಗಿದ್ದರು. ಅವರನ್ನು ಕಳೆದ ವರ್ಷ ಕೇಂದ್ರೀಯ ಗುತ್ತಿಗೆಯಿಂದ ಹೊರಗಿಡಲಾಗಿತ್ತು.

2016ರಲ್ಲಿ ನ್ಯೂಜಿಲೆಂಡ್ ತಂಡದ ಭಾರತ ಪ್ರವಾಸದಲ್ಲಿ ಅವರು ಈಡನ್‌ ಗಾರ್ಡನ್‌ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಅಜೇಯ ಶತಕ ಬಾರಿಸಿದ್ದರು. ಬೌಲಿಂಗ್‌ ಪಿಚ್‌ನಲ್ಲಿ ಟ್ರೆಂಟ್‌ ಬೌಲ್ಟ್‌, ಮ್ಯಾಟ್‌ ಹೆನ್ರಿ, ನೀಲ್ ವ್ಯಾಗ್ನರ್ ಮತ್ತು ಮಿಚೆಲ್ ಸ್ಟಾರ್ಕ್ ಅವರನ್ನು ಒಳಗೊಂಡ ದಾಳಿಯನ್ನು ವಿಶ್ವಾಸದಿಂದ ಎದುರಿಸಿದ್ದರು. ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಒಲಿದಿತ್ತು.

ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ಅವರು ಟೆಸ್ಟ್‌ನಲ್ಲಿ ಮೂರು ಶತಕಗಳನ್ನು ಒಳಗೊಂಡಂತೆ 1353 ರನ್ ಗಳಿಸಿದ್ದಾರೆ. ದೇಶಿಯ ಕ್ರಿಕೆಟ್‌ನಲ್ಲಿ ಅವರ ಸಾಧನೆ ಅತ್ಯುತ್ತಮವಾಗಿದೆ. 2007ರಲ್ಲಿ ಬಂಗಾಳ ತಂಡಕ್ಕೆ ಪದಾರ್ಪಣೆ ಮಾಡಿದ ನಂತರ ಅವರು 138 ಪಂದ್ಯಗಳಿಂದ 7013 ರನ್ ಗಳಿಸಿದ್ದಾರೆ.

2022ರಲ್ಲಿ ಬಂಗಾಳ ಕ್ರಿಕೆಟ್‌ ಸಂಸ್ಥೆ ಜೊತೆ ಭಿನ್ನಾಭಿಪ್ರಾಯ ತಲೆದೋರಿದ ನಂತರ ಎರಡು ವರ್ಷ ತ್ರಿಪುರ ತಂಡಕ್ಕೆ ಆಟಗಾರ– ಮೆಂಟರ್‌ ಆಗಿ ಆಡಿದ್ದರು. ಈ ವರ್ಷ ಮತ್ತೆ ಬಂಗಾಳ ತಂಡಕ್ಕೆ ಮರಳಿದ್ದರು.

ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್, ಸನ್‌ರೈಸರ್ಸ್‌ ಹೈದರಾಬಾದ್ ಮತ್ತು ಗುಜರಾತ್ ಟೈಟನ್ಸ್ ಸೇರಿ ವಿವಿಧ ತಂಡಗಳನ್ನು ಪ್ರತಿನಿಧಿಸಿದ್ದು 170 ಪಂದ್ಯಗಳಲ್ಲಿ ಆಡಿದ್ದಾರೆ.  2014ರ ಫೈನಲ್‌ನಲ್ಲಿ ಅವರು ಪಂಜಾಬ್ ಕಿಂಗ್ಸ್ ಪರ (ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ) 55 ಎಸೆತಗಳಲ್ಲಿ 115 ರನ್ ಬಾರಿಸಿದ್ದು, ಇದು ಐಪಿಎಲ್‌ನಲ್ಲಿ ಅವರ ಏಕೈಕ ಶತಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.