ADVERTISEMENT

Youth ODIs: ಸಾಹಿಲ್ ಪರಖ್ ಅಜೇಯ ಶತಕ

ಭಾರತ ಯುವ ತಂಡಕ್ಕೆ ಏಕದಿನ ಸರಣಿ

ಪಿಟಿಐ
Published 23 ಸೆಪ್ಟೆಂಬರ್ 2024, 14:07 IST
Last Updated 23 ಸೆಪ್ಟೆಂಬರ್ 2024, 14:07 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಪುದುಚೇರಿ: ಆರಂಭ ಆಟಗಾರ ಸಾಹಿಲ್ ಪರಖ್ ಅವರ ಆಕ್ರಮಣಕಾರಿ ಶತಕದ (ಔಟಾಗದೇ 109, 75ಎಸೆತ) ನೆರವಿನಿಂದ ಭಾರತ ತಂಡ, ಏಕದಿನ ಯುವ (19 ವರ್ಷದೊಳಗಿನವರ) ಸರಣಿಯ ಎರಡನೇ ಪಂದ್ಯವನ್ನು ಗೆದ್ದು 9 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಮೂರು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಪಡೆಯಿತು.

ADVERTISEMENT

ಶನಿವಾರ ನಡೆದ ಮೊದಲ ಪಂದ್ಯವನ್ನು ಭಾರತ ಏಳು ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು.

ಮುಂಬೈನ 19 ವರ್ಷ ವಯಸ್ಸಿನ ಪರಖ್ ಅವರ ಬಿರುಸಿನ ಇನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು ಐದು ಸಿಕ್ಸರ್‌ಗಳಿದ್ದವು. 177 ರನ್‌ಗಳ ಗುರಿಯನ್ನು ಭಾರತ ಕೇವಲ 22 ಓವರುಗಳಲ್ಲಿ (1 ವಿಕೆಟ್‌ಗೆ 177) ದಾಟಿತು. ರುದ್ರ ಪಟೇಲ್ (10) ನಿರ್ಗಮನದ ನಂತರ ಅಭಿಗ್ಯಾನ್ ಕುಂದು (ಔಟಾಗದೇ 53) ಜೊತೆ ಅವರು ಮುರಿಯದ ಎರಡನೇ ವಿಕೆಟ್‌ಗೆ 153 ರನ್ ಸೇರಿಸಿದರು.

ಇದಕ್ಕೆ ಮೊದಲು ಕರ್ನಾಟಕದ ವೇಗಿ ಸಮರ್ಥ ನಾಗರಾಜ್ (34ಕ್ಕೆ2), ಕೇರಳದ ಲೆಗ್‌ ಸ್ಪಿನ್ನರ್ ಮೊಹಮ್ಮದ್ ಇನಾನ್ ಮತ್ತು ಆಫ್ ಸ್ಪಿನ್ನರ್ ಕಿರಣ್ ಚೋರ್ಮಲೆ (29ಕ್ಕೆ2) ಅವರ ದಾಳಿಗೆ ಪರದಾಡಿದ  ಆಸ್ಟ್ರೇಲಿಯಾ ಯುವ ತಂಡ 49.3 ಓವರುಗಳಲ್ಲಿ 176 ರನ್‌ಗಳಿಗೆ ಉರುಳಿತ್ತು.

ಔಪಚಾರಿಕವಾದ ಮೂರನೇ ಏಕದಿನ ಪಂದ್ಯ ಗುರುವಾರ ಇಲ್ಲಿಯೇ ನಡೆಯಲಿದೆ. ಎರಡು ‘ಅನಧಿಕೃತ’ ಟೆಸ್ಟ್‌ ಪಂದ್ಯಗಳ ಸರಣಿಯ ಮೊದಲ ಪಂದ್ಯ ಚೆನ್ನೈನಲ್ಲಿ ಇದೇ ತಿಂಗಳ 30ರಂದು ಆರಂಭವಾಗಲಿದೆ.

ಸ್ಕೋರುಗಳು:

ಆಸ್ಟ್ರೇಲಿಯಾ ಯುವ ತಂಡ: 49.3 ಓವರುಗಳಲ್ಲಿ 176 (ಅಡಿಸನ್ ಶೆರಿಫ್‌ 39, ಕ್ರಿಸ್ಟಿಯನ್ ಹೋವ್ 28; ಸಮರ್ಥ್ ನಾಗರಾಜ್ 34ಕ್ಕೆ2, ಮೊಹಮ್ಮದ್ ಇನಾನ್ 30ಕ್ಕೆ2, ಕಿರಣ್ ಚೋರ್ಮಲೆ 29ಕ್ಕೆ2); ಭಾರತ ಯುವ ತಂಡ: 22 ಓವರುಗಳಲ್ಲಿ 1 ವಿಕೆಟ್‌ಗೆ 177 (ಸಾಹಿಲ್ ಪರಖ್ ಔಟಾಗದೇ 109, ಅಭಿಗ್ಯಾನ್ ಕುಂದು ಔಟಾಗದೇ 53). ಪಂದ್ಯದ ಆಟಗಾರ: ಸಾಹಿಲ್ ಪರಖ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.