ADVERTISEMENT

Domestic Cricket: ಉತ್ತರಾಖಂಡದತ್ತ ಕರ್ನಾಟಕದ ಸಮರ್ಥ್

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 23:50 IST
Last Updated 20 ಜೂನ್ 2024, 23:50 IST
ಆರ್‌. ಸಮರ್ಥ್
ಆರ್‌. ಸಮರ್ಥ್   

ಬೆಂಗಳೂರು: ಮುಂಬರುವ ದೇಶಿ ಕ್ರಿಕೆಟ್ ಋತುವಿನಲ್ಲಿ ಕರ್ನಾಟಕದ ತಂಡದ ಆರಂಭಿಕ ಬ್ಯಾಟರ್ ಆರ್. ಸಮರ್ಥ್ ಅವರು ಉತ್ತರಾಖಂಡ ತಂಡದಲ್ಲಿ ಆಡಲಿದ್ದಾರೆ. 

ಬೇರೆ ರಾಜ್ಯಕ್ಕೆ ವಲಸೆ ಹೋಗಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ನಿರಾಕ್ಷೇಪಣಾ ಪತ್ರವನ್ನು ನೀಡಿದೆ. 

‘ದಶಕಕ್ಕೂ ಹೆಚ್ಚು ಕಾಲ ಕರ್ನಾಟಕದಲ್ಲಿ ಕ್ರಿಕೆಟ್ ಆಡಿದ್ದೇನೆ. ಮೂರು ಮಾದರಿಗಳಲ್ಲಿಯೂ ಆಡಿದ್ದೇನೆ. ಇದೀಗ ಹೊಸ ಸವಾಲು ಎದುರಿಸುವ ಸಮಯ ಬಂದಿದೆ. ಆದ್ದರಿಂದ ಇಲ್ಲಿಂದ ಬೇರೆಡೆಗೆ ಸಾಗಲು ನಿರ್ಧರಿಸಿದ್ದೇನೆ’ ಎಂದು ಸಮರ್ಥ್ ‘ಪ್ರಜಾವಾಣಿ’ಗೆ ತಿಳಿಸಿದರು. 

ADVERTISEMENT

‘ಕೆಎಸ್‌ಸಿಎ ನನಗೆ ಎಲ್ಲವನ್ನೂ ನೀಡಿದೆ. ರಣಜಿ ಟ್ರೊಫಿ ಟೂರ್ನಿಯಲ್ಲಿ ಮುಂಬೈ ಎದುರಿನ ಪಂದ್ಯದಲ್ಲಿ ಪದಾರ್ಪಣೆ (2013) ಮಾಡಿದ್ದೆ. ರಣಜಿ ಟ್ರೋಫಿ ಜಯಿಸಿದ ತಂಡದಲ್ಲಿದ್ದೆ. ಭಾರತ  ಎ ತಂಡದಲ್ಲಿಯೂ ಆಡಿದೆ. ಇದೊಂದು ಅದ್ಬುತ ಅನುಭವ ನೀಡಿದ ಪ್ರಯಾಣ. ಇದಕ್ಕಾಗಿ ಎಲ್ಲರಿಗೂ ಆಭಾರಿಯಾಗಿರುವೆ’ ಎಂದು 32 ವರ್ಷದ ಸಮರ್ಥ್ ಹೇಳಿದ್ದಾರೆ. 

ಸಮರ್ಥ್ ಅವರು 88 ಪ್ರಥಮ ದರ್ಜೆ ಪಂದ್ಯಗಳಿಂದ 5508 ರನ್‌ ಗಳಿಸಿದ್ದಾರೆ. ಅದರಲ್ಲಿ 13 ಶತಕ, 29 ಅರ್ಧಶತಕಗಳಿವೆ. 64  ಲಿಸ್ಟ್ ಎ ಪಂದ್ಯಗಳಿಂದ 2665 ರನ್‌ ಗಳಿಸಿದ್ದಾರೆ. 8 ಶತಕ ಮತ್ತು 16 ಅರ್ಧಶತಕ ಹೊಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ ಆಡಿ 275 ರನ್ ಕಲೆಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.