ಹರಾರೆ: ಅನುಭವಿ ಆಟಗಾರ ಸಂಜು ಸ್ಯಾಮ್ಸನ್ ಅರ್ಧಶತಕ ಮತ್ತು ಮುಕೇಶ್ ಕುಮಾರ್ ಅವರ ಶಿಸ್ತಿನ ದಾಳಿಯ ಮುಂದೆ ಜಿಂಬಾಬ್ವೆ ಮುಗ್ಗರಿಸಿತು. ಭಾರತ ತಂಡವು 4–1ರಿಂದ ಟಿ20 ಕ್ರಿಕೆಟ್ ಸರಣಿಯನ್ನು ತನ್ನದಾಗಿಸಿಕೊಂಡಿತು.
ಭಾನುವಾರ ಇಲ್ಲಿ ನಡೆದ ಐದನೇ ಮತ್ತು ಕೊನೆಯ ಪಂದ್ಯದಲ್ಲಿ ಭಾರತ ತಂಡವು 42 ರನ್‌ಗಳಿಂದ ಜಿಂಬಾಬ್ವೆ ಎದುರು ಜಯಿಸಿತು.
ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 167 ರನ್ ಗಳಿಸಿತು. ಅದಕ್ಕುತ್ತರವಾಗಿ 18.3 ಓವರ್‌ಗಳಲ್ಲಿ 125 ರನ್ ಗಳಿಸಿ ಜಿಂಬಾಬ್ವೆ ಎಲ್ಲ ವಿಕೆಟ್ ಕಳೆದುಕೊಂಡಿತು. ವೇಗಿ ಮುಕೇಶ್ (22ಕ್ಕೆ4) ಮತ್ತು ಶಿವಂ ದುಬೆ (25ಕ್ಕೆ2) ಜಿಂಬಾಬ್ವೆ ಪತನಕ್ಕೆ ಕಾರಣರಾದರು.
ಜಿಂಬಾಬ್ವೆ ತಂಡದ ಟೆಡಿವನಾಶಿ ಮರುಮನಿ (27 ರನ್), ಡಿಯಾನ್ ಮೈಯರ್ಸ್ (34; 32ಎ) ಮತ್ತು ಫರಾಜ್ ಅಕ್ರಮ (27; 13ಎ) ಅವರು ಹೋರಾಟ ತೋರಿದರು.
ಸಂಜು–ರಿಯಾನ್ ಜೊತೆಯಾಟ: ಆತಿಥೇಯ ಬೌಲರ್‌ಗಳು ಭಾರತ ತಂಡಕ್ಕೆ ಆರಂಭದಲ್ಲಿಯೇ ಪೆಟ್ಟುಕೊಟ್ಟರು. ಇದರಿಂದಾಗಿ ಪವರ್‌ಪ್ಲೇ ಅವಧಿಯಲ್ಲಿಯೇ ಭಾರತ ತಂಡವು 40 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು.
ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಸಂಜು (58; 45ಎ, 4X1, 6X4) ಹಾಗೂ ರಿಯಾನ್ ಪರಾಗ್ (22; 24ಎ, 6X1) ಐದನೇ ವಿಕೆಟ್ ಜೊತೆಯಾಟದಲ್ಲಿ 65 ರನ್ ಸೇರಿಸಿದರು. ಇದರಿಂದಾಗಿ ತಂಡದ ಮೊತ್ತವು ಶತಕದ ಗಡಿ ದಾಟಿತು. ಇನಿಂಗ್ಸ್‌ನಲ್ಲಿ ಐದು ಓವರ್‌ಗಳು ಬಾಕಿ ಇದ್ದಾಗ ಪರಾಗ್ ಔಟಾದರು ಕ್ರೀಸ್‌ಗೆ ಶಿವಂ ದುಬೆ (26; 12ಎ) ಬೀಸಾಟವಾಡಿದರು. ಎರಡು ಬೌಂಡರಿ ಮತ್ತು ಎರಡು ಸಿಕ್ಸರ್ ಬಾರಿಸಿದರು. 216.67ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದರು. ರಿಂಕು ಸಿಂಗ್ ಕೂಡ 9 ಎಸೆತಗಳಲ್ಲಿ 11 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 167 (ಸಂಜು ಸ್ಯಾಮ್ಸನ್ 58, ರಿಯಾನ್ ಪರಾಗ್ 22, ಶಿವಂ ದುಬೆ 26, ಬ್ಲೆಸಿಂಗ್ ಮುಜರಾಬಾನಿ 19ಕ್ಕೆ2) ಜಿಂಬಾಬ್ವೆ: 18.3 ಓವರ್‌ಗಳಲ್ಲಿ 125 (ಟೆಡಿವನಾಶೆ ಮರುಮನಿ 27, ಡಿಯಾನ್ ಮೆಯರ್ಸ್ 34, ಫರಾಜ್ ಅಕ್ರಂ 27, ಮುಕೇಶ್ ಕುಮಾರ್ 22ಕ್ಕೆ4, ಶಿವಂ ದುಬೆ 25ಕ್ಕೆ2) ಫಲಿತಾಂಶ: ಭಾರತ ತಂಡಕ್ಕೆ 42 ರನ್‌ಗಳ ಜಯ, 4–1ರಿಂದ ಸರಣಿ ಗೆಲುವು. ಪಂದ್ಯಶ್ರೇಷ್ಠ: ಶಿವಂ ದುಬೆ. ಸರಣಿಶ್ರೇಷ್ಠ: ವಾಷಿಂಗ್ಟನ್ ಸುಂದರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.