ನವದೆಹಲಿ:ವೀಕ್ಷಕ ವಿವರಣೆಗಾರರ ಪ್ಯಾನಲ್‌ನಿಂದಸಂಜಯ್ ಮಾಂಜ್ರೇಕರ್ ಅವರನ್ನು ಕೈಬಿಟ್ಟಿರುವ ತನ್ನ ನಿರ್ಧಾರವನ್ನುಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಮರುಪರಿಶೀಲಿಸಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ಚಂದ್ರಕಾಂತ್ ಪಂಡಿತ್ ಹೇಳಿದ್ದಾರೆ.
ಸಂಜಯ್ ಅವರನ್ನು ತಂಬಾ ಹತ್ತಿರದಿಂದ ನೋಡಿರುವುದಾಗಿ ಹೇಳಿರುವ ಪಂಡಿತ್, ‘ಸಂಜಯ್ ಬಗ್ಗೆ ಬಾಲ್ಯದಿಂದಲೂ ನನಗೆ ಗೊತ್ತು. ಇನ್ನೊಬ್ಬರಿಗೆ ಸಹಾಯ ಮಾಡಲು ಹೆಗಲು ನೀಡುವ ವ್ಯಕ್ತಿ ಆತ. ನೇರಮಾತಿನವ. ಅದಕ್ಕಾಗಿ ನಾನು ಆತನನ್ನು ಯಾವಾಗಲೂ ಮೆಚ್ಚುತ್ತೇನೆ. ನೇರವಾಗಿ ಮಾತನಾಡುವವರನ್ನು ಯಾರೊಬ್ಬರೂ ಇಷ್ಟಪಡುವುದಿಲ್ಲ’ ಎಂದಿದ್ದಾರೆ.
‘ಒಬ್ಬ ವೀಕ್ಷಕ ವಿವರಣೆಗಾರನಾಗಿ ಆತ ಕೆಲವೊಮ್ಮೆ ಹೇಳಿರುವ ಮಾತುಗಳನ್ನು ಕೆಲವರು ಇಷ್ಟಪಟ್ಟಿರಲಾರರು. ಆತ ಜನರನ್ನು ಮೆಚ್ಚಿಸಲು, ಕೆಲಸ ಉಳಿಸಿಕೊಳ್ಳುವ ಸಲುವಾಗಿ ಮಾತನಾಡುವವನಲ್ಲ’ ಎಂದು ಹೇಳಿದ್ದಾರೆ.
‘ಸಂಜಯ್ ಯಾರೊಬ್ಬರ ವಿರುದ್ಧವಾಗಿ ಇರಲಿಲ್ಲ. ಆತನನ್ನು ಪ್ಯಾನಲ್‌ನಿಂದ ತೆಗೆದಿರುವುದಕ್ಕೆ ಯಾರೊಬ್ಬರನ್ನು ದೂರಲು ನನಗೂ ಇಷ್ಟವಿಲ್ಲ. ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ, ಎಲ್ಲ ವೀಕ್ಷಕ ವಿವರಣೆಗಾರರು ಯುವ ಆಟಗಾರರಿ ಮಾತ್ರವಲ್ಲ ನಮ್ಮಂತಹಕೋಚ್‌ಗಳಿಗೂ ನೆರವಾಗುವಂತೆ ಪಂದ್ಯದ ಬಗೆಗಿನ ಅಂಕಿ ಅಂಶವನ್ನು ನೀಡುತ್ತಾರೆ. ಇಂತಹ ಸಂದರ್ಭದಲ್ಲಿ ಸಂಜಯ್ ಸ್ವಲ್ಪ ಕಟುವಾಗಿ ಹೇಳಿರಬಹುದು. ಆದರೆ, ಮಾತನಾಡುವ ರೀತಿ ಬದಲಿಸಿಕೊಳ್ಳುವಂತೆ ಬಿಸಿಸಿಐ ಸೂಚಿಸಬೇಕು. ಅದನ್ನು ಬಿಟ್ಟು ಕೆಲಸದಿಂದ ಹೊರಗಿಡಬಾರದಿತ್ತು.
‘ನೇರವಾಗಿ ಮಾತನಾಡುವುದನ್ನು ಸಾಕಷ್ಟು ಜನರು ಇಷ್ಟಪಡುತ್ತಾರೆ. ಒಂದು ವೇಳೆ ಒಬ್ಬ ಬ್ಯಾಟ್ಸ್‌ಮನ್ ಮಹತ್ವದ ಸಂದರ್ಭದಲ್ಲಿ ಕೆಟ್ಟ ಹೊಡೆತ ಪ್ರಯೋಗಿಸಿದರೆ, ನೇರಪ್ರಸಾರದ ವೇಳೆ ಟೀಕಿಸಬೇಕಾಗುತ್ತದೆ. ಅದರಲ್ಲೇನು ತಪ್ಪು?’ ಎಂದು ಪ್ರಶ್ನಿಸಿದ್ದಾರೆ.
ವೀಕ್ಷಕ ವಿವರಣೆಗಾರರ ಪ್ಯಾನಲ್‌ನಿಂದ ತಮ್ಮನ್ನು ಕೈಬಿಟ್ಟದ್ದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಸಂಜಯ್, ‘ನಾನು ಕಾಮೆಂಟರಿ ಮಾಡುವುದು ಸುಯೋಗ ಎಂದು ತಿಳಿದುಕೊಂಡಿದ್ದೆ. ಆದರೆ, ಅದನ್ನೆಂದೂ ನನ್ನ ಹಕ್ಕು ಎಂದು ತಿಳಿದುಕೊಂಡಿಲ್ಲ. ನನ್ನನ್ನು ತಮ್ಮ ತಂಡದಲ್ಲಿ ಇಟ್ಟುಕೊಳ್ಳುವುದು ಬಿಡುವುದುಉದ್ಯೋಗದಾತರಿಗೆ (ಬಿಸಿಸಿಐ) ಬಿಟ್ಟ ವಿಚಾರ. ಅವರ ನಿಲುವನ್ನು ಗೌರವಿಸುತ್ತೇನೆ’ ಎಂದಿದ್ದರು.
ಸಂಜಯ್ ಈ ಹಿಂದೆ ವೀಕ್ಷಕ ವಿವರಣೆ ಸಂದರ್ಭದಲ್ಲಿ,ರವೀಂದ್ರ ಜಡೇಜಾ ಅವರನ್ನು ‘ಚೂರು–ಪಾರು ಕ್ರಿಕೆಟಿಗ’ ಎಂದು ವ್ಯಂಗ್ಯವಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಜಡೇಜಾ, ‘ನೀವು ಆಡಿದ ಪಂದ್ಯಗಳಿಗಿಂತ ಹೆಚ್ಚು ಸಂಖ್ಯೆಯ ಪಂದ್ಯಗಳನ್ನು ಆಡಿದ್ದೇನೆ. ಈಗಲೂ ತಂಡದಲ್ಲಿದ್ದೇನೆ. ಇನ್ನೊಬ್ಬರ ಸಾಧನೆಯನ್ನು ಗೌರಿಸುವುದನ್ನು ಕಲಿಯಿರಿ’ ಎಂದು ತಿರುಗೇಟು ನೀಡಿದ್ದು. ಇಬ್ಬರ ನಡುವಿನ ಟ್ವೀಟ್ ವಾರ್ ಮಾಧ್ಯಮಗಳಲ್ಲಿ ಬಹಳಷ್ಟು ಸುದ್ದಿ ಮಾಡಿತ್ತು.
‘ಪಿಂಕ್ ಟೆಸ್ಟ್’ ಸಂದರ್ಭದಲ್ಲಿ ಮಾಂಜ್ರೇಕರ್ ಅವರು ತಮ್ಮ ಸಹ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಅವರ ಬಗ್ಗೆ ವ್ಯಂಗ್ಯವಾಡಿದ್ದರು. ‘ಭೋಗ್ಲೆ ದೊಡ್ಡ ಮಟ್ಟದಲ್ಲಿ ಆಡಿಲ್ಲ’ ಎಂದು ಹೇಳಿದ್ದರು. ಇದ ರಿಂದಾಗಿ ಬಹಳಷ್ಟು ಟೀಕೆಗೆ ಗುರಿಯಾಗಿದ್ದರು. ಇವೆರಡೂ ಪ್ರಕರಣಗಳಲ್ಲಿ ಸಂಜಯ್ ಕ್ಷಮೆ ಕೇಳಿದ್ದರು.
ಸಂಜಯ್ ಭಾರತ ತಂಡದಲ್ಲಿ 37 ಟೆಸ್ಟ್, 74 ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.