ಧರ್ಮಶಾಲಾ: ಹಾಲಿ ವಿಶ್ವಕಪ್‌ನ ಎರಡು ಅಜೇಯ ತಂಡಗಳಾದ ಭಾರತ ಮತ್ತು ನ್ಯೂಜಿಲೆಂಡ್, ಹಿಮಾಲಯದ ತಪ್ಪಲಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ನಯಮನೋಹರ ಕ್ರೀಡಾಂಗಣದಲ್ಲಿ ಭಾನುವಾರ ಮುಖಾಮುಖಿಯಾಗಲಿವೆ. ಎರಡೂ ತಂಡಗಳಿಗೆ ಇದು ಪ್ರತಿಷ್ಠೆಯ ಪಂದ್ಯವಾಗಿದೆ.
ತವರಿನಲ್ಲಿ ಆಡುತ್ತಿರುವ ಮತ್ತು ಇತ್ತೀಚಿನ ದಿನಗಳಲ್ಲಿ ಏಕದಿನ ಮಾದರಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಭಾರತ ಅಜೇಯವಾಗಿರುವುದು ಅಚ್ಚರಿಯ ವಿಷಯವಲ್ಲ. ಆದರೆ ನ್ಯೂಜಿಲೆಂಡ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಸ್ವಲ್ಪಮಟ್ಟಿಗೆ ಅನಿರೀಕ್ಷಿತ. ಅದೂ ಪೂರ್ಣಪ್ರಮಾಣದ ನಾಯಕ ಕೇನ್ ವಿಲಿಯಮ್ಸನ್ ಅವರ ಅನುಪಸ್ಥಿತಿಯಲ್ಲಿ ತಂಡ ಈ ಸಾಧನೆ ಮಾಡಿರುವುದು ಹೆಚ್ಚುಗಾರಿಕೆಯೇ ಸರಿ. ಆದರೆ ಹಿಂದಿನ ದಾಖಲೆಗಳನ್ನು ಗಮನಿಸಿದರೆ ದೊಡ್ಡ ಟೂರ್ನಿಗಳಲ್ಲಿ ನ್ಯೂಜಿಲೆಂಡ್ ಉತ್ತಮ ಪ್ರದರ್ಶನ ನೀಡುವುದು ಹೊಸದೇನಲ್ಲ.
ಬಹುತೇಕ ಇದೇ ಆಟಗಾರರಿದ್ದ ನ್ಯೂಜಿಲೆಂಡ್ ತಂಡ, ಈ ಹಿಂದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ತಂಡವನ್ನು ಸೋಲಿಸಿತ್ತು ಎಂಬುದನ್ನು ಮರೆಯುವಂತಿಲ್ಲ. ಆ ಸೋಲಿಗೆ ಟೀಕೆಗಳನ್ನು ಎದುರಿಸಿದ್ದ ಭಾರತ ತಂಡ, ನಂತರ ದಿನಗಳಲ್ಲಿ ಬಲಗೊಳ್ಳುತ್ತ ಬಂದಿದೆ. ತಂಡಕ್ಕೆ ಸಮತೋಲನ ನೀಡುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪಾದದ ಗಾಯದಿಂದ ಈ ಪಂದ್ಯದಿಂದ ಹೊರಬೀಳದೇ ಇದ್ದಲ್ಲಿ ಭಾರತ ಪಂದ್ಯ ಗೆಲ್ಲುವ ನೆಚ್ಚಿನ ತಂಡ ಎಂದು ಸುಲಭಕ್ಕೆ ಹೇಳಬಹುದಿತ್ತು.
ವೇಗದ ಬೌಲರ್ ಟಿಮ್ ಸೌಥಿ ಅವರ ಲಭ್ಯತೆಯಿಂದ ನ್ಯೂಜಿಲೆಂಡ್ ಬೌಲಿಂಗ್ ಬಲ ಹೆಚ್ಚಿದೆ. ಆದರೆ ಅವರಿಗೆ ಅವಕಾಶ ನೀಡಲು ಯಾರನ್ನು ಕೈಬಿಡಬಹುದು ಎಂಬುದು ಕುತೂಹಲಕರ. ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ ಮತ್ತು ಲಾಕಿ ಫರ್ಗ್ಯುಸನ್ ಅವರ ದಾಳಿ ಪರಿಣಾಮಕಾರಿ ಆಗಿಯೇ ಇದೆ. ಆದರೆ ಸೌಥಿ ಅವರ ಅನುಭವಕ್ಕೆ ಬೆಲೆಯೂ ಇರುವುದರಿಂದ ಅವರಿಗೆ ಅವಕಾಶ ಒಲಿಯಬಹುದು.
ಆದರೆ ಹಾರ್ದಿಕ್ ಪಾಂಡ್ಯ ಅವರ ಅಲಭ್ಯತೆಯಲ್ಲಿ ತಂಡದ ಸಂಯೋಜನೆ ಹೇಗಿರಲಿದೆ ಎನ್ನುವುದು ಹೆಚ್ಚು ಕುತೂಹಲಕರ. ಅವರಿಗೆ ಸೂಕ್ತ ಬದಲಿ ಆಟಗಾರನಿಲ್ಲದ ಕಾರಣ ಹೊಸ ಸಂಯೋಜನೆ ರೂಪಿಸುವುದು ಅನಿವಾರ್ಯ. ಶಮಿ ಅವರನ್ನು ಆಡಿಸುವ ಆಯ್ಕೆ ತಂಡದ ಮುಂದಿದೆ. ಪುಣೆಯಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ವೇಳೆ ನೇರ ಡ್ರೈವ್ ತಡೆಯುವ ಯತ್ನದಲ್ಲಿ ಅವರ ಕಾಲಿಗೆ ಚೆಂಡು ತಾಗಿ ಗಾಯವಾಗಿತ್ತು. ಅವರು ಬಿಸಿಸಿಐ ವೈದ್ಯಕೀಯ ತಂಡದ ನಿಗಾದಲ್ಲಿದ್ದಾರೆ. ಬ್ಯಾಟಿಂಗ್ ಬಲಪಡಿಸಲು ಸೂರ್ಯಕುಮಾರ್ ಯಾದವ್ ಅವರನ್ನೂ ಆಡಿಸಿದರೆ, ಈಗಿನ ತಂಡದ ಇನ್ನೊಬ್ಬರನ್ನು ಕೈಬಿಡಬೇಕಾಗುತ್ತದೆ. ಆಗ ಶಾರ್ದೂಲ್ ಠಾಕೂರ್ ಸ್ಥಾನ ಅಲುಗಾಡಬಹುದು.
ಭಾರತಕ್ಕೆ ಬ್ಯಾಟಿಂಗ್ ವಿಭಾಗದಲ್ಲಿ ತಲೆನೋವು ಇಲ್ಲ. ಸ್ಕೋರ್ ಬೆನ್ನಟ್ಟುವಲ್ಲಿ ವಿರಾಟ್ ಕೊಹ್ಲಿ ಗಮನ ಸೆಳೆದಿದ್ದಾರೆ. ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ರನ್ ಹರಿಸುತ್ತಿರುವುದರ ಜೊತೆಗೆ ಒಳ್ಳೆಯ ಲಯದಲ್ಲಿರುವ ವಿರಾಟ್ ಟೂರ್ನಿಯ ಆರಂಭದಲ್ಲೇ ಆಡುತ್ತಿರುವ ರೀತಿ ಎದುರಾಳಿ ತಂಡಗಳಿಗೆ ಅಪಾಯದ ಸಂದೇಶ ರವಾನಿಸಿದೆ. ಬಾಂಗ್ಲಾದೇಶ ವಿರುದ್ಧ ಕೊನೆಯ ಎಸೆತದಲ್ಲಿ ಅವರು ಶತಕ ಪೂರೈಸಿದ್ದರು.
ಬೌಲಿಂಗ್‌ನಲ್ಲಿ ಬೂಮ್ರಾ ಹೊಸ ಚೆಂಡಿನಲ್ಲಿ ಮತ್ತು ನಂತರದಲ್ಲಿ ಕುಲದೀಪ್ ಯಾದವ್ ಯಶಸ್ಸು ಗಳಿಸುತ್ತಿದ್ದಾರೆ. ಸಿರಾಜ್ ಸಹ ನಿಧಾನವಾಗಿ ಲಯಕ್ಕೆ ಮರಳುತ್ತಿದ್ದಾರೆ.
ಕೇನ್ ವಿಲಿಯಮ್ಸನ್ ಅನುಪಸ್ಥಿತಿ ಕಿವೀಸ್ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿದಂತಿಲ್ಲ. ಡೆವಾನ್ ಕಾನ್ವೆ, ರಚಿನ್ ರವೀಂದ್ರ, ಡೇರಿಲ್ ಮಿಚೆಲ್ ಅದನ್ನು ಸರಿದೂಗಿಸುವಂತೆ ಆಡುತ್ತಿದ್ದಾರೆ.
ಆದರೆ ಸ್ಪಿನ್ನರ್‌ಗಳ ಪರಿಣಾಮದ ಬಗ್ಗೆ ನಿರ್ಲಕ್ಷ್ಯ ವಹಿಸುವಂತಿಲ್ಲ. ಮಿಚೆಲ್ ಸ್ಯಾಂಟ್ನರ್ ಅವರ ಪ್ರದರ್ಶನ ನ್ಯೂಜಿಲೆಂಡ್ ಪಾಲಿಗೆ ನಿರ್ಣಾಯಕವಾಗಲಿದೆ. ಕೌಶಲಗಳಿಗಾಗಿ ಅವರನ್ನು ಮಾಜಿ ನಾಯಕ ಡೇನಿಯಲ್ ವೆಟೋರಿ ಅವರಿಗೆ ಹೋಲಿಸಲಾಗುತ್ತಿದೆ. ಟೂರ್ನಿಯಲ್ಲಿ ಅತಿ ಹೆಚ್ಚಿನ ವಿಕೆಟ್ ಗಳಿಸಿದವರಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ.
ನ್ಯೂಜಿಲೆಂಡ್ ಇದುವರೆಗೆ ಐಸಿಸಿ ವಿಶ್ವಕಪ್ ಗೆದ್ದಿಲ್ಲ. ಭಾರತ 12 ವರ್ಷಗಳಿಂದ ಐಸಿಸಿ ಟ್ರೋಫಿ ಬರ ಎದುರಿಸುತ್ತಿದೆ.
ತಂಡಗಳು ಇಂತಿವೆ
ಭಾರತ
ರೋಹಿತ್ ಶರ್ಮಾ (ನಾಯಕ), ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ರವೀಂದ್ರ ಜಡೇಜ, ಆರ್.ಅಶ್ವಿನ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್.
ನ್ಯೂಜಿಲೆಂಡ್
ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವಾನ್ ಕಾನ್ವೆ, ಲಾಕಿ ಫರ್ಗ್ಯೂಸನ್, ಮ್ಯಾಟ್ ಹೆನ್ರಿ, ಟಾಮ್ ಲಥಾಮ್ (ನಾಯಕ– ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಜಿಮ್ಮಿ ನೀಷಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಈಶ್ ಸೋಧಿ, ಟಿಮ್ ಸೌಥಿ, ವಿಲ್ ಯಂಗ್.
ಪಂದ್ಯ ಆರಂಭ: ಮಧ್ಯಾಹ್ನ 2
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.